ರೆಸಾರ್ಟ್ಗೆ ಅರಣ್ಯ ಭೂಮಿ ನೀಡಿರುವುದೇ ಅಕ್ರಮ
ದೊಡ್ಡಬಳ್ಳಾಪುರ: ತಾಲೂಕಿನ ಘಾಟಿ ಸುಬ್ರಹ್ಮಣ್ಯ ಬಳಿಯ ಎಸ್.ಆರ್.ವ್ಯಾಲಿ ರೆಸಾರ್ಟ್ಗೆ ಮೀಸಲು ಮತ್ತು ಸಾಮಾಜಿಕ ಅರಣ್ಯ ಪ್ರದೇಶದ ಭೂಮಿಯನ್ನು ನೀಡಿರುವ ಸರ್ಕಾರದ ಕ್ರಮವೇ ಸರಿಯಿಲ್ಲ. ಇದೇ ದೊಡ್ಡ ಅಕ್ರಮವಾಗಿದೆ ಎಂದು ಬೆಂ.ಗ್ರಾ.ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಡಾ.ಸಿ.ಎಸ್.ಶ್ರೀನಿವಾಸ್ ಆರೋಪಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ರೆಸಾರ್ಟ್ಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಎಸ್.ಆರ್.ವ್ಯಾಲಿ ರೆಸಾರ್ಟ್ನಲ್ಲಿ ನಡೆದಿರುವ ನಗ್ನ ನೃತ್ಯ ಪ್ರದರ್ಶನ ಸೇರಿದಂತೆ ಹಲವು ಅಶ್ಲೀಲ ಚಟುವಟಿಕೆಗಳ ಬಗ್ಗೆ 1 ವಾರದಲ್ಲಿ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ. ತಪ್ಪಿದಲ್ಲಿ ರೈತ ಸಂಘದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಲಿದ್ದಾರೆ. ರೆಸಾರ್ಟ್ಗೆ ಬೀಗ ಜಡಿಯುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ಸರಿಯಲ್ಲ: ರೈತ ಸಂಘದ ತಾಲೂಕು ಅಧ್ಯಕ್ಷ ನಾಗಸಂದ್ರ ಪ್ರಸನ್ನ ಮಾತನಾಡಿ ತಾಲೂಕಿನ ಘಾಟಿ ಸುತ್ತಮುತ್ತಲ ರೈತರ ಜಮೀನನ್ನು ಸರ್ಕಾರವೇ ರೆಸಾರ್ಟ್ ಮತ್ತು ಗೋಶಾಲೆಗಳಿಗೆ ನೀಡುತ್ತಿರುವುದು ಸರಿಯಲ್ಲ. ರೈತರಿಗೆ ದುಡಿಯಲು ಜಮೀನು ನೀಡದ ಸರ್ಕಾರ ಅಕ್ರಮ ಚಟುವಟಿಕೆಗಳನ್ನು ನಡೆಸುವ ರೆಸಾರ್ಟ್ಗಳಿಗೆ ಏಕೆ ನೀಡಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ. ಘಾಟಿಯಲ್ಲಿರುವ ವಿಶ್ವೇಶ್ವರಯ್ಯ ಪಿಕ್ಅಪ್ ಡ್ಯಾಂ ಇದರಿಂದ ಹಾಳಾಗಿದೆ. ಇದನ್ನು ದುರಸ್ಥಿ ಮಾಡುವ ಕಡೆ ಗಮನ ಹರಿಸಬೇಕು. ಈ ಪ್ರದೇಶದಲ್ಲಿ ಹಿಂದಿನಿಂದಲೂ ರೈತರು ಬೇಸಾಯ ಮಾಡುವ ಜಮೀನುಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದರೂ ಅವುಗಳನ್ನು ರದ್ದು ಮಾಡಲಾಗಿದೆ ಎಂದು ಆರೋಪಿಸಿದರು.
ಹಸಿರು ಸೇನೆ ಅಧ್ಯಕ್ಷ ಕೆ.ಪಿ.ಕುಮಾರ್, ರೈತ ಮುಖಂಡರಾದ ತಪಸೀಹಳ್ಳಿ ಸತೀಶ್, ಮಂಜಣ್ಣ, ಜಿಂಕೆಬಚ್ಚಳ್ಳಿ ಸತೀಶ್ ಮತ್ತಿತರರು ಹಾಜರಿದ್ದರು.
ಇಂದು ಪ್ರತಿಭಟನೆ: ರೆಸಾರ್ಟ್ಗೆ ಕೂಡಲೇ ಬೀಗಮುದ್ರೆ ಜಡಿಯಬೇಕು ಎಂದು ಆಗ್ರಹಿಸಿ ರೈತ ಸಂಘ, ಹಸಿರು ಸೇನೆಯ ನೇತೃತ್ವದಲ್ಲಿ ಮೇ 30ರ ಗುರುವಾರ ಬೆಳಗ್ಗೆ 10.30ಕ್ಕೆ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

