ಕೊಳಗೇರಿ ವಾಸಿಗಳನ್ನು ಒಕ್ಕಲೆಬ್ಬಿಸಿದರೆ ಹುಷಾರ್...
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ , ನ. 13
ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿದರೆ ಹುಷಾರ್ ಬಡವರ ಶೋಷಣೆಗೆ ಮುಂದಾದರೆ ವ್ಯವಸ್ಥೆಯ ವಿರುದ್ಧ ತಿರುಗಿಬೀಳಬೇಕಾದ ಅನಿವಾರ್ಯತೆ ಉಂಟಾದೀತು. ಕಳೆದ 40 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿರುವ 1 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಳ್ಳುವ ನಿರ್ಧಾರ ಕೈಬಿಟ್ಟು ಕೂಡಲೇ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಕೆಲಸವನ್ನು ಸರ್ಕಾರ ಮಾಡಬೇಕು - ಇದು ದೊಡ್ಡಬಳ್ಳಾಪುರದ ಸಂಜಯನಗರದಲ್ಲಿ ವಾಸವಿರುವ ಕೊಳಗೇರಿ ವಾಸಿಗಳ ಒಕ್ಕೊರಲ ಒತ್ತಾಯ.
ಇಲ್ಲಿನ ಕೊಳಚೆ ಪ್ರದೇಶ ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಸಂಜಯನಗರ ಬಡಾವಣೆಯಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಸಂಜಯನಗರ ಪ್ರದೇಶವು ಕೊಳಗೇರಿ ಅಭಿವೃದ್ಧಿ ಮಂಡಲಿಯಿಂದ ಕೊಳಚೆ ಪ್ರದೇಶವೆಂದು ಘೋಷಣೆಯಾಗಿದ್ದು, ಮಂಡಲಿಯಿಂದ ಇಲ್ಲಿನ ಗುಡಿಸಲುಗಳಲ್ಲಿ ವಾಸಮಾಡುತ್ತಿದ್ದ ನೂರಾರು ಕುಟುಂಬಗಳಿಗೆ ವಾಸದ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಸರ್ಕಾರ ನೀರು, ಚರಂಡಿ, ಬೀದಿದೀಪ, ಶೌಚಾಲಯ ಮತ್ತು ರಸ್ತೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಸರ್ಕಾರದಿಂದ ಆಹಾರ ಭದ್ರತೆಗಾಗಿ ಪಡಿತರ ಚೀಟಿ, ಚುನಾವಣಾ ಆಯೋಗದಿಂದ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡುಗಳನ್ನು ಸಹ ಇದೇ ವಿಳಾಸಕ್ಕೆ ವಿತರಿಸಲಾಗಿದೆ.
ಹಕ್ಕುಪತ್ರ ಕೊಡಿ: ಕೊಳಗೇರಿ ಅಭಿವೃದ್ಧಿ ಮಂಡಲಿ ಇಲ್ಲಿನ ನಿವಾಸಿಗಳ ಸಮೀಕ್ಷೆ ನಡೆಸಿ ಸ್ವಾಧೀನ ಪತ್ರ ಮತ್ತು ಬಯೋವುಟ್ರಿಕ್ ಕಾರ್ಡುಗಳನ್ನು ನೀಡಿದೆ. ಹೀಗಿದ್ದರೂ ಸಹ ಇಲ್ಲಿನ ವ್ಯಕ್ತಿಯೊಬ್ಬರು ನೀಡಿರುವ ಅರ್ಜಿಯ ಆಧಾರದಲ್ಲಿ ಕಸಬಾ ಹೋಬಳಿ ವೀರಭದ್ರನಪಾಳ್ಯ ಸರ್ವೇ ನಂ.11 ಮತ್ತು 14ರ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಜನ ವಾಸವಿದ್ದಾರೆ ಎಂದು ಪರಿಗಣಿಸಿ ಅಧಿಕಾರಿಗಳು ಜಾಗ ತೆರವು ಮಾಡುವಂತೆ ಜನರಿಗೆ ಹೇಳಿರುವುದು ಖಂಡನೀಯ. ಆ ಸ್ವತ್ತಿನಲ್ಲಿ ಕಳೆದ 4 ದಶಕಗಳಿಂದ ವಾಸವಿರುವ ಜನರಿಗೆ ನ್ಯಾಯಬದ್ಧವಾಗಿ ಹಕ್ಕುಪತ್ರಗಳನ್ನು ವಿತರಿಸಬೇಕಿತ್ತು. ಆದರೆ ಸರ್ಕಾರ ಅದನ್ನು ಬಿಟ್ಟು ಬಡಜನರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಆಕ್ಷೇಪಾರ್ಹ. ಕೂಡಲೇ ಜನರ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಮುಟ್ಟಿಸಬೇಕು. ಜಿಲ್ಲಾಧಿಕಾರಿಗಳಿಗೆ ನಮ್ಮ ಮನವಿ ತಲುಪಿಸಿ ಬಡಜನರ ಪರ ಕೆಲಸ ಮಾಡಬೇಕು. ತಪ್ಪಿದಲ್ಲಿ ಜನ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಬೇಡಿಕೆ ಪರಿಶೀಲಿಸಿ ಕ್ರಮ: ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ಸರ್ಕಾರದ ಆದೇಶ ಇರುವುದರಿಂದ ಅನಿವಾರ್ಯವಾಗಿ ಈ ಕ್ರಮ ಕೈಗೊಳ್ಳಬೇಕಾಯಿತು. ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಪಟ್ಟಂತೆ ಸಲ್ಲಿಕೆಯಾದ ವರದಿಯನ್ವಯ ಲಕ್ಷಾಂತರ ಎಕರೆ ಒತ್ತುವರಿಯಾಗಿದೆ. ಈ ಒತ್ತುವರಿಯನ್ನು ಬಿಡಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂಬುದು ಸರ್ಕಾರದ ಕಟ್ಟುನಿಟ್ಟಿನ ಆಜ್ಞೆ. ಹೀಗಾಗಿ ಪ್ರತಿ ಜಿಲ್ಲೆಯ ಹಂತದಲ್ಲಿ ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳಿಗೆ ಆಯಾ ತಾಲೂಕುಗಳ ಅಕ್ರಮ ಒತ್ತುವರಿ ತೆರವುಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಿ ಆದೇಶಿಸಿದ್ದಾರೆ. ಆದಾಗ್ಯೂ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮುಂದಿಟ್ಟಿರುವ ಎಲ್ಲ ಅಂಶಗಳನ್ನೂ ಗಮನಕ್ಕೆ ತಂದು ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಮುಖಂಡರಾದ ಸುಲೋಚನಮ್ಮ, ನಗರಸಭೆ ಸದಸ್ಯೆ ಮಂಜುಳಾ, ಸೌಭಾಗ್ಯಮ್ಮ, ಮಾಜಿ ಸದಸ್ಯೆ ಜಯಮ್ಮ, ಕೊಳಚೆ ಪ್ರದೇಶ ಹೋರಾಟ ಸಮಿತಿಯ ಅಧ್ಯಕ್ಷ ಶಿವಕುಮಾರ್ ಆಚಾರ್, ಕಾರ್ಯದರ್ಶಿ ಎಚ್.ಪ್ರಕಾಶ್ರಾವ್, ಡಿ.ವೆಂಕಟೇಶ್, ಮುಖಂಡರಾದ ಎಚ್.ಎಸ್.ವೆಂಕಟೇಶ್, ವಿಮಲಮ್ಮ, ವೇಣುಗೋಪಾಲ್, ಜನಪರ ಮಂಜು, ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಕೂಡಲೇ ಹಕ್ಕುಪತ್ರ ನೀಡಿ
ಸಂಜಯನಗರ ಬಡ ಕೂಲಿಕಾರರು, ಗುಡಿಸಲು ವಾಸಿಗಳಿರುವ ಜಾಗ. ಇಲ್ಲಿ ಯಾರೂ ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡು ಐಶಾರಾಮಿ ಬಂಗಲೆ ಕಟ್ಟಿಲ್ಲ. ದಿನಗೂಲಿಗಳಾಗಿ ಜೀವನ ಸಾಗಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಸರ್ಕಾರದ ಧೋರಣೆ ಖಂಡನೀಯ. ತಾನೇ ನೀರು, ವಿದ್ಯುತ್, ಮೂಲಸೌಕರ್ಯ, ಆಧಾರ್ಕಾರ್ಡ್ ಎಲ್ಲವನ್ನೂ ನೀಡಿದೆ. ಈ ಜನರ ಬಹುದಿನದ ಬೇಡಿಕೆಯಾಗಿರುವ ಹಕ್ಕುಪತ್ರಗಳನ್ನು ಈ ಕೂಡಲೇ ವಿತರಿಸುವ ವ್ಯವಸ್ಥೆ ಮಾಡಲಿ.
- ಸುಲೋಚನಮ್ಮ ಡಾ.ವೆಂಕಟರೆಡ್ಡಿ, ಸಾಮಾಜಿಕ ಹೋರಾಟಗಾರರು
ಗಂಭೀರ ಪರಿಶೀಲನೆ
ಸರ್ಕಾರಿ ದಾಖಲೆಗಳ ಪ್ರಕಾರ ಸಂಜಯನಗರದ ಈ ಪ್ರದೇಶ ವೀರಭದ್ರನಪಾಳ್ಯ ಸರ್ವೇ ನಂ.11ರ ಧರ್ಮದ ತೋಪು ಮತ್ತು ಸರ್ವೇ ನಂ.14ರ ಸರ್ಕಾರಿ ಗೋಮಾಳ ಎಂದಿದೆ. ಎಲ್ಲ ದಾಖಲೆಗಳಲ್ಲೂ ಇದೇ ರೀತಿ ಇರುವುದು. ಜಿಲ್ಲಾಧಿಕಾರಿಗಳು ಅಕ್ರಮ ಒತ್ತುವರಿ ತೆರವು ಆದೇಶ ನೀಡಿದ್ದರು. ಅದರನ್ವಯ ಈಗಾಗಲೇ ಹಲವು ಒತ್ತುವರಿಗಳನ್ನು ತೆರವು ಮಾಡಿದ್ದೇವೆ. ಈಗ ಕೊಳಚೆ ಪ್ರದೇಶ ಹೋರಾಟ ಸಮಿತಿಯಿಂದ ಕೊಟ್ಟಿರುವ ಮನವಿ ಪರಿಶೀಲಿಸುತ್ತೇವೆ. ಬಡವರು, ಕೂಲಿಕಾರ ಕಾರ್ಮಿಕರ ಆಗ್ರಹ, ಸರ್ಕಾರ ಕೊಟ್ಟಿರುವ ಸವಲತ್ತುಗಳು ಎಲ್ಲದರ ಬಗ್ಗೆಯೂ ಗಂಭೀರವಾಗಿ ಪರಿಶೀಲಿಸಲಾಗುವುದು.
- ಕೆ.ಬಿ.ಸಿದ್ಧಲಿಂಗಯ್ಯ, ತಹಸೀಲ್ದಾರ್, ದೊಡ್ಡಬಳ್ಳಾಪುರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

