ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ: ಜಿಕೆ ಪ್ರೌಢಶಾಲೆಯಲ್ಲಿ ಅನಾವರಣಗೊಂಡ ಮಕ್ಕಳ ಲೋಕ

Published On :

ದೊಡ್ಡಬಳ್ಳಾಪುರ: ಅಲ್ಲಿ ಪುಟಾಣಿ ಮಕ್ಕಳ ಮುಗ್ಧ ಪ್ರಪಂಚವೇ ಅನಾವರಣಗೊಂಡಿತ್ತು. ವಿವಿಧ ಬಗೆಯ ವೇಷ-ಭೂಷಣಗಳಲ್ಲಿ ಮಕ್ಕಳು ಗಮನ ಸೆಳೆಯುತ್ತಿದ್ದರು. ಶ್ರೀರಾಮ, ಕೃಷ್ಣ, ಏಸುಕ್ರಿಸ್ತ, ವಿವೇಕಾನಂದ, ಮಹಾತ್ಮಗಾಂಧಿ, ವೀರರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಸುಭಾಷ್‌ಚಂದ್ರಬೋಸ್, ಕೃಷ್ಣದೇವರಾಯ ಹೀಗೆ ಹತ್ತು ಹಲವು ವೇಷಗಳಲ್ಲಿ ಮಕ್ಕಳು ಗನ ಸೆಳೆದರು.
ಇದೆಲ್ಲವೂ ಆಯೋಜನೆಗೊಂಡಿದ್ದು ಮಕ್ಕಳ ದಿನಾಚರಣೆ ಮುನ್ನಾ ದಿನ ಇಲ್ಲಿನ ಜಿಕೆ ಪ್ರೌಢಶಾಲೆ ಮತ್ತು ಪದ್ಮಾವಿದ್ಯಾನಿಕೇತನದ ವತಿಯಿಂದ ನಡೆದ ಮಕ್ಕಳ ಹಬ್ಬದ ಸಂಭ್ರಮದಲ್ಲಿ.
ಕಾರ್ಯಕ್ರಮವನ್ನು ಹಿರಿಯ ಪ್ರಾಧ್ಯಾಪಕ ಟಿ.ಕೆ.ನಾಗರಾಜ್ ಉದ್ಘಾಟಿಸಿದರು. ಅವರು ಮಾತನಾಡಿ, ಮಕ್ಕಳಲ್ಲಿ ದೇಶ, ಭಾಷೆ, ಸಂಸ್ತೃತಿಯ ಕುರಿತಾದ ಚಿಂತನೆಗಳನ್ನು ಮೂಡಿಸುವ ಪ್ರಯತ್ನ ಆಗಬೇಕು. ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ. ಹೀಗಾಗಿ ಸುಸಂಸ್ಕೃತ ಮಕ್ಕಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವುದು ಶಿಕ್ಷಣದ ಪರಮೋದ್ದೇಶವಾಗಬೇಕು. ಸುಶಿಕ್ಷಿತರನ್ನಾಗಿ ನಮ್ಮ ಮಕ್ಕಳನ್ನು ಬೆಳೆಸುವ ಜೊತೆಗೆ ಉತ್ತಮ ಚಾರಿತ್ಯ್ರವನ್ನೂ ಕೊಡುವುದು ಮುಖ್ಯ ಎಂದರು.
ಮುಖ್ಯಅತಿಥಿಯಾಗಿದ್ದ ರಾಘವೇಂದ್ರ ಪ್ರಸಾದ್ ಮತ್ತು ತಾ.ಕಸಾಪ ಅಧ್ಯಕ್ಷ ರವಿಕಿರಣ್ ಮಾತನಾಡಿ, ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟು ಬೆಳೆಸುವ ಅಗತ್ಯವಿದೆ. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಮತ್ತು ಅವರ ರಚನಾತ್ಮಕ ಆಲೋಚನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಇಂದಿನ ಪೋಷಕರು ಮಾಡುತ್ತಿದ್ದಾರೆ. ಮಗು ಅಂಕಗಳನ್ನು ಉತ್ಪಾದಿಸಿಕೊಡುವ ಯಂತ್ರವಲ್ಲ. 100ಕ್ಕೆ 100 ಅಂಕ ಪಡೆಯುವುದೊಂದೇ ಜೀವನದ ಗುರಿಯೂ ಅಲ್ಲ. ಸೃಜನಶೀಲ ಚಿಂತನೆಗಳು, ಮುಗ್ಧತೆಯ ಅಭಿವ್ಯಕ್ತಿಗೆ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯಹರಣವಾಗಬಾರದು ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ರಘುರಾಂ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಕೆ.ಜಿ.ದಿನೇಶ್, ಕಸಾಪ ಕೋಶಾಧ್ಯಕ್ಷ ಚಿಕ್ಕಣ್ಣ, ಮುಖ್ಯಶಿಕ್ಷಕಿ ಉಷಾರಾಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.