ಬೆಂಗಳೂರು ಗ್ರಾಮಾಂತರ

ಧಾರ್ಮಿಕ ಸಂವೇದನೆ ಮರೆಯಾದರೆ ದೇಶಕ್ಕೆ ಸಂಕಷ್ಟ

Published On :

ಕ.ಪ್ರ.ವಾರ್ತೆ ,  ದೊಡ್ಡಬಳ್ಳಾಪುರ ,  ನ.15
ಭಕ್ತಿ ಭಾರತ ಭೂಮಿಯ ನಿಜವಾದ ಶಕ್ತಿ. ಭಕ್ತಿಯ ಮೂಲಕ ಎಲ್ಲವನ್ನೂ ಗೆಲ್ಲುವ ಸರಳ ಸೂತ್ರವನ್ನು ರಾಮಭಕ್ತ ಹನುಮನಿಂದ ಕಲಿಯಬೇಕು. ಧರ್ಮ, ಧಾರ್ಮಿಕ ವಿಚಾರಗಳ ಸಂವೇದನೆ ಮರೆಯಾದರೆ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಧಾರ್ಮಿಕ ಭಾವನೆಗಳ ಜೀವಂತಿಕೆ ದೇಶವನ್ನು ಸಶಕ್ತವಾಗಿಸುತ್ತದೆ ಎಂದು
ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಇತಿಹಾಸ ಪ್ರಸಿದ್ಧ ನೆಲದಾಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ, ಕಳಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮೃದುಭಾವಗಳು ಎಲ್ಲ ಹಂತಗಳಲ್ಲೂ ಎಲ್ಲರ ವಿಶ್ವಾಸ ಗಳಿಸಲು ಸಹಾಯಕವಾಗುತ್ತವೆ ಎಂದ ಅವರು, ಹನುಮಂತ ಈ ನೆಲದ ಸಂಸ್ಕೃತಿಯ ಪ್ರತಿಬಿಂಬ ಶಕ್ತಿ, ಯುಕ್ತಿ, ಸಾಹಸ ಮತ್ತು ಆತ್ಮವಿಶ್ವಾಸದ ಗಣಿ. ಹಿಡಿದದ್ದನ್ನು ಸಾಧಿಸುವ ಛಲಗಾರ. ಹನುಮಂತನ ಆರಾಧನೆ ನಮಗೆ ಆ ಬಗೆಯ ಸದೃಢ ವ್ಯಕ್ತಿತ್ವವನ್ನು ಕೊಡಬೇಕಾಗುತ್ತದೆ. ನಿರ್ಮಲ ಭಕ್ತಿಗೆ ಹನುಮನೇ ಶ್ರೇಷ್ಠ. ಆಂಜನೇಯನನ್ನು ಮೀರಿಸುವ ಭಕ್ತ ಮತ್ತೊಬ್ಬರಿಲ್ಲ ಎಂಬುದನ್ನು ಪುರಾಣಗಳೇ ಹೇಳಿವೆ. ನಮ್ಮ ಮಕ್ಕಳಿಗೆ ಹನುಮ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಟಿಟಿಡಿಯ ಆಗಮಿಕರಾದ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಮಹಾಸಂಕಲ್ಪ, ಪಂಚಗವ್ಯಾರಾಧನೆ, ರಕ್ಷಾಬಂಧನ, ಅಂಕುರಾರ್ಪಣ, ಕಳಸ ಪ್ರತಿಷ್ಠಾಪನೆ, ಧ್ವಜಾರೋಹಣ, ಪ್ರಧಾನ ಹೋಮ-ಹವನಾದಿಗಳು ನಡೆದವು. ಮಧ್ಯಾಹ್ನ ನಡೆದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ ಗಣಪತಿ ದೇಗುಲ, ನವಗ್ರಹ ದೇಗುಲಗಳ ಕಳಸ ಪ್ರತಿಷ್ಠಾಪನೆಯೂ ನಡೆಯಿತು. ನಂತರ 101 ಕುಂಭಗಳಲ್ಲಿ ತಂದು ಪೂಜಿಸಲಾಗಿದ್ದ ಜಲದಿಂದ ಎಲ್ಲ ಕಳಶಗಳಿಗೆ ಕುಂಭಾಭಿಷೇಕ ನಡೆಯಿತು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಮಾಜಿ ಅಧ್ಯಕ್ಷ ಬಿ.ಮುನೇಗೌಡ, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಶ್ರೀನೆಲದಾಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಎ.ವೆಂಕಟೇಶ್, ಕಾರ್ಯದರ್ಶಿ ಬಿ.ಎಲ್.ಸೀತಾರಾಂ, ಖಜಾಂಚಿ ವಿಶ್ವನಾಥ್, ಸಹಕಾರ್ಯದರ್ಶಿ ಶ್ರೀಕಾಂತ್ ಸೇರಿದಂತೆ ಸಮಿತಿಯ ಎಲ್ಲ ಪದಾಧಿಕಾರಿಗಳು, ಭಕ್ತಾದಿಗಳು ಹಾಜರಿದ್ದರು. ಮೊದಲ ದಿನದ ಕಾರ್ಯಕ್ರಮದ ಅಂಗವಾಗಿ ಮುಖ್ಯಪ್ರಾಣದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀಸ್ವಾಮಿಯ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.