ಬೆಂಗಳೂರು ಗ್ರಾಮಾಂತರ

ಮೋದಿ ಹಠಾವೋ, ಭಾರತ್ ಬಚಾವೋ

Published On :

ದೊಡ್ಡಬಳ್ಳಾಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ-ಅಂಬೇಡ್ಕರ್‌ವಾದ ತಾಲೂಕು ಘಟಕದ ನೇತೃತ್ವದಲ್ಲಿ ಮೋದಿ ಹಠಾವೋ..ಭಾರತ್ ಬಚಾವೋ.. ಧರಣಿ ಕಾರ್ಯಕ್ರಮ ನ.16ರ ಶನಿವಾರ ಬೆಳಗ್ಗೆ 10.30ಕ್ಕೆ ತಾಲೂಕು ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿದೆ. ಮೋದಿ ಕೇಡಿನ ಹಾದಿ ನಂಬಿದರೆ ಭಾರತದ ಭವಿಷ್ಯ ಬೂದಿ ಎಂಬ ಘೋಷವಾಕ್ಯದಲ್ಲಿ ನಡೆಯುವ ಧರಣಿಯಲ್ಲಿ ಮುಖಂಡರಾದ ಮಾವಳ್ಳಿ ಶಂಕರ್, ಕಾರಳ್ಳಿ ಶ್ರೀನಿವಾಸ್, ಡಾ.ಸಿ.ಎಸ್.ಶ್ರೀನಿವಾಸ್, ಡಿ.ವಿ.ಅಶ್ವತ್ಥಪ್ಪ, ಸಂಜೀವನಾಯಕ್, ಡಿ.ಪಿ.ಆಂಜನೇಯ, ಚಂದ್ರಶೇಖರ್, ಎಂ.ದೇವರಾಜ್, ರಮೇಶ್ ಸಂಕ್ರಾಂತಿ, ರಾಜು ಸಣ್ಣಕ್ಕಿ, ಸಿ.ಗುರುರಾಜಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ಪಾಲಿಕೆಗೆ 4ಕೋಟಿ ವಂಚನೆ: ಮೇಯರ್
ಬೆಂಗಳೂರು: ಅಭಿವೃದ್ಧಿ ಶುಲ್ಕ ಪಾವತಿಸದೇ ಅಪಾರ್ಟ್‌ಮೆಂಟ್ ನಿರ್ಮಿಸಿದ್ದ ಆರ್‌ಎಂಝಡ್ ಗೆಲೇರಿಯಾ ಮತ್ತು ಆರ್‌ಎಂಝಡ್ ಟ್ಯಾಟಿಟ್ಯೂಡ್ ಸಂಸ್ಥೆಯಿಂದ ಪಾಲಿಕೆಗೆ 4ಕೋಟಿ ವಂಚನೆಯಾಗಿದೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ತಿಳಿಸಿದ್ದಾರೆ. ಯಲಹಂಕ ವಲಯದಲ್ಲಿ ಬುಧವಾರ ತಪಾಸಣೆ ನಡೆಸಿದ ಅವರು, ಅಭಿವೃದ್ಧಿ ಶುಲ್ಕ ಪಾವತಿಸದೇ ನಿರ್ಮಿಸುತ್ತಿರುವ ಕಟ್ಟಡಗಳನ್ನು ಪರಿಶೀಲಿಸಿದರು. ಆಗ ಆರ್‌ಎಂಝಡ್ ಗೆಲೇರಿಯಾ ಮತ್ತು ಆರ್‌ಎಂಝಡ್ ಟ್ಯಾಟಿಟ್ಯೂಡ್ ಸಂಸ್ಥೆ ಪಾಲಿಕೆಗೆ ತೆರಿಗೆ ವಂಚಿಸಿರುವುದು ತಿಳಿಯಿತು. ಮೇಯರ್ ಕಟ್ಟೆ ಸತ್ಯನಾರಾಯಣ ತಪಾಸಣೆ ವೇಳೆ ಕಟ್ಟಡ ಮಾಲೀಕರಿಂದ ನಕ್ಷೆ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದರು. ದಾಖಲೆಗಳ ಬಗ್ಗೆ ಅನುಮಾನ ಮೂಡಿದಾಗ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಂತೆ ತೆರಿಗೆ ವಂಚನೆ ಗೊತ್ತಾಯಿತು.
ಸೀಗೇಕುಪ್ಪೆ ಗ್ರಾಪಂಗೆ ಅಧ್ಯಕ್ಷೆ ಶೋಭಾ
ಕ.ಪ್ರ.ವಾರ್ತೆ ,  ಮಾಗಡಿ ,  ನ.15
ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಶೋಭಾ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿಯೂ ಆಗಿದ್ದ ಸಹಾಯಕ  ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ ಘೋಷಿಸಿದರು. ನೂತನ ಅಧ್ಯಕ್ಷೆ ಶೋಭಾ  ಮಾತನಾಡಿ ಸದಸ್ಯರ ಸಹಕಾರ ಪ್ರೋತ್ಸಾಹದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರಿಗೂ, ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೂ ಕೃತಜ್ಞತೆ ಸಲ್ಲಿಸಿದ್ದಾಗಿ ತಿಳಿಸಿದರು. ಎಲ್ಲಾ ಸದಸ್ಯರ ಸಹಕಾರದಿಂದ ಪಂಚಾಯ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ತಾ.ಪಂ. ಮಾಜಿ ಅಧ್ಯಕ್ಷ ಬಿ.ಟಿ. ವೆಂಕಟೇಶ್, ಸೀಗೇಕುಪ್ಪೆ ಶಿವಣ್ಣ, ರಂಗನಾಥ್, ಮೂರ್ತಿ, ಉಪಾಧ್ಯಕ್ಷೆ ಗೌರಮ್ಮ, ವೆಂಕಟೇಶ್, ಜಯರಾಮು, ಪಿಡಿಓ ನಾಗರಾಜು, ಕಾರ್ಯದರ್ಶಿ ಹೊಂಬೇಗೌಡ ಇತರರು ನೂತನ ಅಧ್ಯಕ್ಷೆ ಶೋಭಾ ಅವರಿಗೆ ಹಾರ ಹಾಕಿ ಅಭಿನಂದಿಸಿದರು.
ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ವಿಜಯಪುರ: ಪಟ್ಟಣದ ಅ.ಶಿ.ವೈ ನಗರ್ತ ಮಹಿಳಾ ಸಂಘದ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ನ. 16 ರಂದು ಸಂಜೆ 4.30ಕ್ಕೆ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಡೆಯಲಿದ್ದು ಅಧ್ಯಕ್ಷತೆಯನ್ನು ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಪ್ರಭುದೇವ್ ವಹಿಸಲಿದ್ದಾರೆ. ಪುರಸಭೆಯ ಆರೋಗ್ಯ ನಿರೀಕ್ಷಕರಾದ ಮಂಜುಳಾದೇವಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಸವೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಿ.ಜಿ.ರೇಖಾ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2012-13ನೇ ಸಾಲಿನ 10ನೇ ತರಗತಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಹಿಂದು-ಮುಸಲ್ಮಾನ ಭಾವೈಕ್ಯದ ಮೊಹರಂ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಮೊಹರಂ ಹಬ್ಬವನ್ನು ಹಿಂದು-ಮುಸಲ್ಮಾನ ಭಾವೈಕ್ಯದ ಹಬ್ಬವಾಗಿ ಸಂಭ್ರಮದಿಂದ ಆಚರಿಸಲಾಯಿತು.  ಇಲ್ಲಿನ ಮುಕ್ತಾಂಭಿಕಾ ರಸ್ತೆಯಲ್ಲಿರುವ ಮಸೀದಿಯಲ್ಲಿ ಹಸೇನ್-ಹುಸೇನರ ಸ್ಮರಣಾರ್ಥ ಪ್ರತಿವರ್ಷದಂತೆ ಈ ವರ್ಷವೂ ಸಡಗರದಿಂದ ಹಬ್ಬ ಆಯೋಜಿಸಲಾಗಿತ್ತು.
ಇಂದಿನಿಂದ ಪುರುಷರ  ದಿನಾಚರಣೆ
ಬೆಂಗಳೂರು: ಕ್ರಿಸ್ಪ ಮತ್ತು ಕಾನ್ಫಿಡೇರ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ನ.16 ಮತ್ತು 17ರಂದು 'ಪುರುಷರ ದಿನಾಚರಣೆ' ಅಂಗವಾಗಿ ವಿಸ್ಮಯ ರಂಗೋಲಿ-ಮೆಟ್ರೋ ಚಿತ್ರಕಲಾ ಕೇಂದ್ರದಲ್ಲಿ ಚಿತ್ರಕಲಾ ಪ್ರದರ್ಶನ ಹಮ್ಮಿಕೊಂಡಿದೆ.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನ್ಫಿಡೇರ್ ಸ್ಥಾಪಕ ಸದಸ್ಯ ಅನಿಲ್‌ಕುಮಾರ್, ಪುರುಷ ದಿನಾಚರಣೆಯನ್ನು ಟ್ರಿನಿಡಾಡ್ ಮತ್ತು ಜಮೈಕ ಸೇರಿದಂತೆ 60ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಈ ದಿನದ ಆಚರಣೆಯನ್ನು ಬೆಂಬಲಿಸಿವೆ. ಸಮಾಜ ಇಂದು ಪುರುಷನನ್ನು ಎಲ್ಲಾ ತಪ್ಪು-ನೆಪ್ಪುಗಳಿಗೆ ಹೊಣೆಯಾಗಿಸಿ ಕೀಳಾಗಿ ನೋಡುತ್ತಿದೆ. ಈ ಧೋರಣೆಯಿಂದಾಗಿ ಅವನು ತನ್ನ ಭಾವನೆಗಳನ್ನು ಹೊರಹಾಕಲಾಗದೆ ಮಾನಸಿಕ ತುಳಿತಕ್ಕೊಳಗಾಗುತ್ತಿರುವ ಸಂಗತಿಗಳೇ ಹೆಚ್ಚಾಗಿವೆ. ಅಲ್ಲದೆ ಪುರುಷರನ್ನು ದೌರ್ಬಲ್ಯತೆಯಿಂದ ವಿಮುಕ್ತಿಗೊಳಿಸಿ ತನ್ನ ಹಕ್ಕುಗಳ ಬಗೆಗೆ ಮನವರಿಕೆ ಮಾಡಿಕೊಡಲು ಈ ದಿನವನ್ನು ಆಚರಿಸಬೇಕಾಗಿದೆ ಎಂದು ತಿಳಿಸಿದರು. ಪುರುಷ ದಿನಾಚರಣೆಯ ವಸ್ತು, ಪುರುಷರ ಮೇಲಾಗುತ್ತಿರುವ ಧೋರಣೆಗಳು, ತಂದೆಯಂದಿರು ಅನುಭವಿಸಿರುವ ಕಷ್ಟ-ಕಾರ್ಪಣ್ಯಗಳು, ತಂದೆಯಿಂದ ಬೇರ್ಪಟ್ಟ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತಾಗಿ ಚಿತ್ರಕಲೆಗಳು ಸಾರಿ ಹೇಳಲಿವೆ ಎಂದರು. ಕ್ರಿಸ್ಪ ಸ್ಥಾಪಕ ಕುಮಾರ್ ವಿ ಜಹಗೀರ್ದಾರ್ ಮತ್ತಿತರರು ಇದ್ದರು.
18ರಂದು ಟಿಪ್ಪು ಪ್ರಶಸ್ತಿ ಪ್ರದಾನ
ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ವತಿಯಿಂದ ಟಿಪ್ಪುಸುಲ್ತಾನ್ 264ನೇ ಜಯಂತ್ಯೋತ್ಸವ ಅಂಗವಾಗಿ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪುಸುಲ್ತಾನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನವನ್ನು ನ.18ರಂದು ಪುರಭವನದಲ್ಲಿ ಹಮ್ಮಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಶಿ, ಪ್ರಶಸ್ತಿಗೆ ಪ್ರೊ. ಯು.ಆರ್.ಅನಂತಮೂರ್ತಿ, ಪ್ರೊ.ಎನ್.ವಿ.ನರಸಿಂಹಯ್ಯ, ಪ್ರೊ.ನಾಜನೀನ್ ಬೇಗಂ ಆಯ್ಕೆಯಾಗಿದ್ದು, ಇವರ ಪೈಕಿ ಇಬ್ಬರು ಗಣ್ಯರಿಗೆ 'ಟಿಪ್ಪುಸುಲ್ತಾನ್ ರಾಷ್ಟ್ರೀಯ ಪ್ರಶಸ್ತಿ' ನೀಡಲಾಗುವುದು ಎಂದು ತಿಳಿಸಿದರು. ಮಾಜಿ ಕೇಂದ್ರ ರೈಲ್ವೆ ಖಾತೆ ಸಚಿವ ಸಿ.ಕೆ.ಜಾಫರ್ ಷರೀಫ್ ಉದ್ಘಾಟನೆ ನೆರವೇರಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಸಾಹಿತಿ  ಮರುಳಸಿದ್ದಪ್ಪ ಮತ್ತಿತತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಟ್ರೇಡ್ ಯೂನಿಯನ್  ಪ್ರತಿಭಟನೆ 25ರಂದು
ರಾಜ್ಯದಲ್ಲಿರುವ ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸಾಮಾಜಿಕ ಭದ್ರೆತೆಯನ್ನು ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್ ನ.25ರಂದು ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆಂಟರ್ ಅಧ್ಯಕ್ಷ ಜಿ.ಆರ್.ಶಿವಶಂಕರ್, ಕಾರ್ಮಿಕರ ಪರ ಇರುವ 27 ಶಾಸನಗಳನ್ನು ಜಾರಿಗೆ ತರುವ ಬಗ್ಗೆ ಜಿ.ಪರಮೇಶ್ವರ್ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಶಾಸನಗಳು ಕಾರ್ಮಿಕ ವರ್ಗಕ್ಕೆ ಕೇವಲ ಆಭರಣಗಳ ರೀತಿ ಇದೆಯೇ ವಿನ: ಅವುಗಳ ಭದ್ರತೆಯನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಸೆಸ್ ಹಣವನ್ನು ದುರಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಕುರಿತು ಸಿಓಡಿ ತನಿಖೆ ಆಗಬೇಕು ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಸೂಲಿಬೆಲೆಯಲ್ಲಿ ಸಹಕಾರ ಸಪ್ತಾಹ
ಸೂಲಿಬೆಲೆ: ಇಲ್ಲಿನ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ಒಂದು ವಾರ ನಡೆಯಲಿರುವ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಬ್ಯಾಂಕಿನ ಅಧ್ಯಕ್ಷ ಬಿ.ವಿ. ಸತೀಶ್‌ಗೌಡ ಉದ್ಘಾಟಿಸಿದರು. ಬ್ಯಾಂಕ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸಮೂರ್ತಿ, ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ, ಜಗ್ಗಿ,ನಾರಾಯಣಪ್ಪ, ನಾಗೇಶ್, ಇರ್ಪಾನ್, ಮೋಹನ್  ಹಾಗೂ ಇನ್ನಿತರ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.
ಡಿಕ್ಕಿ: ಬೈಕ್ ಸವಾರ ಸಾವು
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಬೊಮ್ಮನಹಳ್ಳಿ ಬಳಿ ಬೈಕ್ ಒಂದಕ್ಕೆ ಹಿಂಬದಿಯಿಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಯರೀಸ್ವಾಮಿ (25) ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗದ ಮೂಲದವನಾಗಿದ್ದು,  ಬೆಂಗಳೂರಿನ ರಾಜಾಜಿನಗರದ ಬಾರ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಚಿತ್ರದುರ್ಗಕ್ಕೆ ಹೋಗಿ ವಾಪಸು ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ  ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವಾಹನವನ್ನು  ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.