ಸಂಸ್ಕೃತಿ ಅರಿವು ಮೂಡಿಸುವುದೇ ಕನಕೋತ್ಸವದ ಗುರಿ
ಕ.ಪ್ರ.ವಾರ್ತೆ , ಕನಕಪುರ , ನ.15
ಜನರಲ್ಲಿ ಸಂಸ್ಕೃತಿಯ ಅರಿವು ಮೂಡಿಸುವುದು, ನಾಡಿನ ಮೂಲಬೇರುಗಳಾದ ಜಾನಪದ ಕಲೆಗೆ ಪ್ರೋತ್ಸಾಹ ನೀಡಿ ಉತ್ತೇಜಿಸಿ, ಕಲಾವಿದರನ್ನು ಪುರಸ್ಕರಿಸುವುದು, ವಿವಿಧ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸುವುದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು, ಆಧುನಿಕ ಕೃಷಿ, ತಂತ್ರಜ್ಞಾನದ ಬಗ್ಗೆ ಸ್ಥಳೀಯ ರೈತರಲ್ಲಿ ಅರಿವು ಮೂಡಿಸುವುದು... ಈ ಉದ್ದೇಶಗಳಿಂದ ಕನಕೋತ್ಸವವನ್ನು ಪ್ರತೀವರ್ಷ ಆಯೋಜಿಸಲಾಗುತ್ತಿದೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅವರು ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕನಕೋತ್ಸವ-2013 ಪ್ರಯುಕ್ತ ರಾಮನಗರ ಜಿಲ್ಲಾಮಟ್ಟದ ಜಾನಪದ, ಸಾಂಸ್ಕೃತಿಕ ಕಲಾಮೇಳ-ಪ್ರದರ್ಶನ ಸ್ಪರ್ಧೆಗಳ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಂಗವಾಗಿ ಪೂಜಾಕುಣಿತ, ಪಟದ ಕುಣಿತ, ತಮಟೆ, ನಗಾರಿ, ವಾದ್ಯಮೇಳ, ಡೊಳ್ಳುಕುಣಿತ,ಕಂಸಾಳೆ, ವೀರಗಾಸೆ, ವಾದ್ಯ ಹಾಗೂ ಸ್ಕೂಲ್ ಬ್ಯಾಂಡ್ಪ್ರದರ್ಶನ ಸ್ಪರ್ಧೆಗಳು ನಡೆದವು. ಪ್ರತಿಯೊಂದು ವಿಭಾಗದಲ್ಲಿಯೂ ಐವತ್ತರಿಂದ ನೂರು ಜಾನಪದ ತಂಡಗಳು ಪಾಲ್ಗೊಂಡು ಪ್ರದರ್ಶನ ನೀಡುತ್ತಿದ್ದರಿಂದ ಸ್ಪರ್ಧೆಗಳು ತಡರಾತ್ರಿವರೆಗೆ ನಡೆದವು. ಇಲ್ಲಿನ ಆರ್ಇಎಸ್ ಮೈದಾನದ ಕೃಷಿ ಉತ್ಸವ ವೇದಿಕೆಯಲ್ಲಿ ಜಾನಪದ ಗೀತೆ ಹಾಗೂ ದೇಶಭಕ್ತಿಗೀತೆಗಳಿಗೆ ಸಮೂಹನೃತ್ಯ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡು ಚಿತ್ತಾಕರ್ಷಕ ಪ್ರದರ್ಶನ ನೀಡಿದವು.
ಬೆಲೆ ನಿರ್ಧರಣಾ ಆಯೋಗ: ಉದ್ಘಾಟನೆಯನ್ನು ನೆರವೇರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಬೆಂಬಲ ಬೆಲೆಯಂತೆ ಇತರೇ ಬೆಳೆಗಳಿಗೂ ಬೆಂಬಲ ಬೆಲೆ ನಿಗದಿಪಡಿಸುವ ಸಲುವಾಗಿ ಬೆಲೆ ನಿರ್ಧರಣಾ ಆಯೋಗವನ್ನು ರೂಪಿಸಲಾಗುತ್ತಿದೆ, ಕೆಲವೇ ದಿನಗಳಲ್ಲಿ ರೈತರ ಫಸಲುಗಳಿಗೆ ಸರ್ಕಾರವೇ ಬೆಲೆ ನಿಗದಿಪಡಿಸಲಿದೆ ಎಂದರು.
ಶಾಸಕ ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ರ ಪ್ರಯತ್ನದಿಂದಾಗಿ ಕನಕಪುರ ಪಟ್ಟಣವು ತೀವ್ರವಾದ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ನಗರದ ಬೆಳವಣಿಗೆ ಅಗತ್ಯವಾಗಿ ಪಟ್ಟಣದಲ್ಲಿ ವ್ಯವಸ್ಥಿತ, ಸುಸಜ್ಜಿತ ನೂತನ ಬಸ್ ನಿಲ್ದಾಣವನ್ನು ಪ್ರಾರಂಭಿಸಲು 8 ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಸಾರಿಗೆ ಇಲಾಖೆ ಒದಗಿಸಿರುವ ಬಿಗ್ಟ್ರಕ್ ಮಾದರಿ ಸಾರಿಗೆ ವ್ಯವಸ್ಥೆಯನ್ನು ಕನಕಪುರಕ್ಕೆ ಮಂಜೂರಾತಿ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ನುಡಿದರು.
ಚಪ್ಪಾಳೆ ತಟ್ಟಿ ಸ್ವಾಗತ: ಸಮಾರಂಭಕ್ಕೆ ಮೂರುದಿನಗಳಿಂದಲೂ ಗೈರುಹಾಜರಾಗಿದ್ದ ಶಾಸಕ ಡಿ.ಕೆ.ಶಿವಕುಮಾರ್ ಇಂದು ವೇದಿಕೆಯನ್ನು ಪ್ರವೇಶಿಸುತ್ತಿದ್ದಂತೆ ಜನರು ಹರ್ಷೋದ್ಘಾರಗಳಿಂದ ಚಪ್ಪಳೆ ತಟ್ಟಿ ಸ್ವಾಗತಿಸಿದರು. ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ, ವಿಪ ಮಾಜಿ ಸದಸ್ಯ ಎಸ್.ರವಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಟೇಲ್ ರಾಜು, ನಗರಸಭಾ ಸದಸ್ಯ ಮುರುಗೇಶ್, ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ್,
ಬ್ಲಾಕ್ ಅಧ್ಯಕ್ಷರುಗಳಾದ ವಿಜಯದೇವ್, ದಿಲೀಪ್, ಆರ್.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಸಂಚಾಲಕ ರಾಂಪುರ ನಾಗೇಶ್ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

