ಬೆಂಗಳೂರು ಗ್ರಾಮಾಂತರ

ರಾಮನಗರ ಜಿಲ್ಲೆಗೆ ರು. 50 ಲಕ್ಷ ಪ್ರತ್ಯೇಕ ಆವರ್ತನಿಧಿ

Published On :

ಚನ್ನಪಟ್ಟಣ: ತೆಂಗು ಖರೀದಿಗಾಗಿ ರಾಮನಗರ ಜಿಲ್ಲೆಗೆ 50 ಲಕ್ಷ ರು. ಗಳ ಪ್ರತ್ಯೇಕ ಆವರ್ತನಿಧಿಯನ್ನು ಕೃಷಿ ಮಾರಾಟ ಮಂಡಲಿ ಸ್ಥಾಪಿಸಿದೆ ಎಂದು ಎಪಿಎಂಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಸಿ.ಸ್ವಾಮಿ ತಿಳಿಸಿದರು.
ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ  ನಡೆದ ಮರುಕಟ್ಟೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ತೆಂಗಿನ ಬೆಲೆ ಕುಸಿತ ಗೊಂಡಾಗ ಅಧಿಕಾರಿಗಳು ಈ ನಿಧಿಯನ್ನು  ಅನುಕೂಲಕ್ಕೆ ಬಳಸಿ ಕೊಳ್ಳಬಹುದಾಗಿದ್ದು, ರೈತರ ಬೆಲೆಗಳಿಗೆ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಸರ್ಕಾರ 400 ಕೋಟಿ ರು.ಗಳ ಆವರ್ತ ನಿಧಿಯನ್ನು ಮೀಸಲಿರಿಸಿದ್ದು ಇದನ್ನು ಸಾವಿರ ಕೋಟಿ ರು. ಗಳಿಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದರು.
ಮಾರುಕಟ್ಟೆ ಹೈಟೆಕ್: ರಾಜ್ಯದ 155 ಎಪಿಎಂಸಿಗಳ ಪೈಕಿ 45 ಮಾರುಕಟ್ಟೆಗಳ ಧಾರಣೆ ವಿವರವನ್ನು ಆನ್ ಲೈನ್ ಮೂಲಕ ಪಡೆಯಬಹುದಾಗಿದೆ. ಎಸ್ಎಂಎಸ್ ಮೂಲಕವೂ ಮಾಹಿತಿ ನೀಡುವ ವ್ಯವಸ್ಥೆ ಇದ್ದು ಮಾರುಕಟ್ಟೆಯ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸಲು ಮಾರುಕಟ್ಟೆ ಸಮಿತಿ ಶ್ರಮಿಸುತ್ತಿದೆ ಎಂದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಯಾವುದೇ ಸಾಗಾಣಿಕ ವ್ಯವಸ್ಥೆಯಿಲ್ಲ. ಬಿಳಿ ಚೀಟಿ ವ್ಯವಹಾರ ನಡೆಯುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಮಾರುಕಟ್ಟೆ ಅಧಿಕಾರಿಗಳು ಇಂತಹುಗಳಿಗೆ ಕಡಿವಾಣ ಹಾಕಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದುರು.
ರೈತರಿಗೆ ಅನುಕೂಲವೆನಿಸಿರುವ ಈ ಕಾರ್ಯಕ್ರಮಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವುದು ವಿಷಾದನೀಯವೆನಿಸಿದ್ದು ಮಾರುಕಟ್ಟೆ ಸಪ್ತಾಹದ ಬಗ್ಗೆ ಮುಂದೆ ಹೆಚ್ಚಿನ ಪ್ರಚಾರ ಮಾಡಿ, ರೈತರಿಗೆ ಮಾಹಿತಿ ನೀಡಿ ಹೆಚ್ಚು ರೈತರು, ವರ್ತಕರು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಲಹೆ ಇತ್ತರು.
ಕಾರ್ಯ ವೈಖರಿ ತರಾಟೆಗೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ಎಪಿಎಂಸಿ ರೈತರಿಗೆ ಸೂಕ್ತ ಧಾರಣೆ ಕೊಡಿಸಲು ಇದೆಯೋ, ಇಲ್ಲ ಸರ್ಕಾರಕ್ಕೆ ಕೇವಲ ವರದಿ ನೀಡುವ ಉದ್ದೇಶದಿಂದ ಕೆಲಸಮಾಡುತ್ತಿದೆಯೋ ಎಂದು ತಾಲೂಕು ಎಪಿಎಂಸಿ ಕಾರ್ಯವೈಖರಿಯನ್ನು ತರಾಟೆಗೆ ತೆಗೆದು ಕೊಂಡರು.
 ಎಪಿಎಂಸಿ  ನಿಜವಾಗಿ ರೈತ ಸ್ನೇಹಿಯಾಗಿದ್ದಲ್ಲಿ  ರೈತರಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ರೈತರು ಮಾರಾಟ ಮಾಡಿದ ಉತ್ಪನ್ನಗಳ ಖಾತರಿಗಾಗಿ ಮೂರು ರೀತಿಯ ಚೀಟಿಗಳ ವ್ಯವಸ್ಥೆ ಮಾಡಬೇಕು. ರೈತರ ಅನುಕೂಲಕ್ಕಾಗಿ ರೈತ ಭವನ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮೊಹಮದ್ ಸತ್ತಾರ್, ವರ್ತಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪೇಟೆ ವರ್ತಕರ ಸಂಘದ ಅಧ್ಯಕ್ಷ  ಕೃಷ್ಣಪ್ಪ, ಡಾ. ಟಿ.ಪಿ ಕೃಷ್ಣ, ಶ್ರೀನಿವಾಸ್, ಸುನಿಲ್ ಇದ್ದರು.

ಕಾಟಾಚಾರಕ್ಕೆ ಮಾರುಕಟ್ಟೆ ಸಪ್ತಾಹ
ರೈತರ ಕುಂದು ಕೊರತೆಗಳನ್ನು ಆಲಿಸಲು, ಅವುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕೃಷಿ ಮಾರಾಟ ಇಲಾಖೆ ಪ್ರತಿವರ್ಷ ಮಾರುಕಟ್ಟೆ ಸಪ್ತಾಹವನ್ನು ಆಚರಿಸಿ ಕೊಂಡು ಬರುತ್ತಿದ್ದು ಈ ಕಾರ್ಯಕ್ರಮ ಅಧಿಕಾರಿಗಳ ಉದಾಸೀನದಿಂದ ರೈತರ ಉಪಸ್ಥಿತಿಯೇ ಇಲ್ಲದೆ ಕೇವಲ ವರ್ತಕತರು, ಹಮಾಲಿಗಳ ಉಪಸ್ಥಿತಿಯಲ್ಲಿ ನಡೆಯುವಂತಾಗಿದೆ.
ಪ್ರತಿವರ್ಷ ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮಕ್ಕೆಂದು  ದಿನಕ್ಕೆ 5 ಸಾವಿರ ರೂ. ನಂತೆ 7 ದಿನಗಳ ಕಾರ್ಯಕ್ರಮಕ್ಕೆ 35 ಸಾವಿರ ರು. ಹಣವನ್ನು ಕೃಷಿ ಮಾರಾಟ ಇಲಾಖೆ ಬಿಡುಗಡೆ ಮಾಡುತ್ತಿದೆಯಾದರೂ ಅಧಿಕಾರಿಗಳು ಕೇವಲ ಸಮಾರೋಪ ಸಮಾರಂಭವನ್ನು ಮಾತ್ರ ಮಾಡಿ  ಉಳಿದ ಹಣವನ್ನು ಕೃಷ್ಣನ ಲೆಕ್ಕಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ.
ಮಾರುಕಟ್ಟೆ ಸಪ್ತಾಹದ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಯಾವುದೇ ರೈತರು ಪಾಲ್ಗೊಳ್ಳದಾಗಿದ್ದು, ರೈತರು ಸಭೆಯಲ್ಲಿ ಪಾಲ್ಗೊಂಡಲ್ಲಿ ಎಲ್ಲಿ ನಮ್ಮ ಹುಳುಕುಗಳು ಹೊರ ಬೀಳುತ್ತವೋ ಎಂಬ ಭಯದಿಂದ ಮಾರುಕಟ್ಟೆ ಅಧಿಕಾರಿಗಳು ಈ ಕಾರ್ಯಕ್ರಮದ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿಲ್ಲ ಎಂಬುದು ರೈತರ ಆಪಾದನೆಯಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.