ಬೆಂಗಳೂರು ಗ್ರಾಮಾಂತರ

ಶಾಶ್ವತ ನೀರಾವರಿ; ಸಂಘಟಿತ ಸಮರಕ್ಕೆ ಸಜ್ಜು

Published On :

ರಾಮನಗರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಅಲ್ಲಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ಹೋರಾಟ ಒಗ್ಗೂಡಿಸಿ, ಅದಕ್ಕೆ ತೀವ್ರ ಸ್ವರೂಪ ನೀಡಲು ಹೋರಾಟಗಾರರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಬಯಲುಸೀಮೆಯ ಆರು ಜಿಲ್ಲೆಗಳ ಹೋರಾಟಗಾರರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆಗೆ ಚಿಂತನೆ ನಡೆದಿದೆ.  
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಪ್ರತ್ಯೇಕ ಹೋರಾಟ ನಡೆಯುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟಿತ ಹೋರಾಟದ ಅನಿವಾರ್ಯತೆಯನ್ನು ಹೋರಾಟಗಾರರು ಇದೀಗ ಮನಗಂಡಿದ್ದಾರೆ.  
ಈ ಆರು ಜಿಲ್ಲೆಗಳಲ್ಲೂ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಪ್ರಮುಖವಾಗಿ ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಬವಣೆ ಬೇಸಿಗೆಗಷ್ಟೇ ಸೀಮಿತವಾಗಿಲ್ಲ. ಹೀಗಾಗಿ ಶಾಶ್ವತ ನೀರಾವರಿ ಹೋರಾಟಕ್ಕೆ ತೀವ್ರ ಸ್ವರೂಪ ನೀಡುವ ಬಗ್ಗೆ ಮುಖಂಡರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಒಂದೇ ಬ್ಯಾನರ್ ಅಡಿ ಹೋರಾಟ: ಬಯಲುಸೀಮೆಯ ಆರು ಜಿಲ್ಲೆಗಳಲ್ಲೂ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೆಸರಿನ ಬ್ಯಾನರ್ ಅಡಿಯೇ ಪಕ್ಷಾತೀತ ಹೋರಾಟವನ್ನು ಬೇಡಿಕೆ ಈಡೇರಿಸುವವರೆಗೆ ಮುಂದುವರೆಸಿಕೊಂಡು ಹೋಗಬೇಕೆನ್ನುವ ನಿಲುವಿನೊಂದಿಗೆ ಸಮನ್ವಯ ಸಮಿತಿ ರಚನೆಯ ಇರಾದೆ ಹೊಂದಲಾಗಿದೆ.
ಶಾಶ್ವತ ನೀರಾವರಿ ಹೋರಾಟದಲ್ಲಿ ವ್ಯಕ್ತಿ, ರಾಜಕೀಯ ಪಕ್ಷಗಳು, ಸಂಘಟನೆಗಳ ವೈಭವೀಕರಣಕ್ಕೆ ಆಸ್ಪದವಿಲ್ಲ. ಹೋರಾಟ ಸಂಬಂಧ ಸಮನ್ವಯ ಸಮಿತಿ ಮತ್ತು ಜಿಲ್ಲಾ ಸಮಿತಿಗಳ ಹೊರತಾದ ಸಂಘಟನೆಗಳು, ನಾಯಕರ ಬ್ಯಾನರ್, ಭಿತ್ತಿಪತ್ರ, ಅವರ ಪರ ಘೋಷಣೆಗಳಿಗೂ ಅವಕಾಶವಿಲ್ಲ.
ರಾಮನಗರದಲ್ಲಿ ಬುಧವಾರ ನಡೆದ ಶಾಶ್ವತ ನೀರಾವರಿ ಹೋರಾಟದಲ್ಲಿ ನೆರೆಯ ಚಿಕ್ಕಬಳ್ಳಾಪುರದ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳೂ ಪಾಲ್ಗೊಂಡಿದ್ದರು. ಈ ವೇಳೆ ಉಭಯ ಜಿಲ್ಲೆ ಮುಖಂಡರ ಮಾತುಕತೆ ಫಲಪ್ರದವಾಗಿದ್ದು, ಶೀಘ್ರವೇ ಎಲ್ಲ 6 ಜಿಲ್ಲೆ ಮುಖಂಡರ ಸಭೆಗೆ ವೇದಿಕೆ ಸಿದ್ಧವಾಗಲಿದೆ.
ಬೆಂಗಳೂರು ಕೇಂದ್ರ ಸ್ಥಾನ: ಶಾಶ್ವತ ನೀರಾವರಿ ಹೋರಾಟದ ಸಮನ್ವಯ ಸಮಿತಿ ರಚನೆ ಬಳಿಕ ಮೊದಲ ಹಂತವಾಗಿ ಆರೂ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪರಮಶಿವಯ್ಯ ವರದಿ ಅನ್ವಯ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ಅನಿವಾರ್ಯತೆ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸುಲು ಉದ್ದೇಶಿಸಲಾಗಿದೆ.
ಇದಾದ ಬಳಿಕ ಜಿಲ್ಲಾ ಮಟ್ಟದ ಜತೆ ಜತೆಗೆ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ತೀವ್ರಗೊಳಿಸಬೇಕಿದೆ. ಈ ಹೋರಾಟದಲ್ಲಿ ಪಾಲ್ಗೊಳ್ಳಲು ಹಾಲಿ-ಮಾಜಿ ಸಂಸದರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೂ ಕರೆ ನೀಡಲಾಗುವುದು. ಎಲ್ಲ ಹಂತದ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಣಯ ಕೈಗೊಂಡು, ಸರ್ಕಾರವನ್ನು ಒತ್ತಾಯಿಸುವುದು ಹೋರಾಟದ ಒಂದು ಭಾಗವಾಗಲಿದೆ.
ರೈತರ ಬೇಡಿಕೆಗಳಿಗೂ ಒತ್ತು: ಈಗಾಗಲೇ ಅಸ್ತಿತ್ವದಲ್ಲಿರುವ ಕೃಷ್ಣಾ-ಕಾವೇರಿ ಹಿತರಕ್ಷಣಾ ಸಮಿತಿ, ಕಾವೇರಿ ಹಿತರಕ್ಷಣಾ ಸಮಿತಿ ಮಾದರಿಯಲ್ಲೇ ಶಾಶ್ವತ ನೀರಾವರಿ ಹೋರಾಟದ ಸಮನ್ವಯ ಸಮಿತಿಯು ನೀರಾವರಿ ಬೇಡಿಕೆಯ ಜತೆಗೆ ರೈತರ ಬವಣೆಗಳು ಮತ್ತು ಬದುಕಿಗೆ ಸಂಬಂಧಿಸಿದ ಹೋರಾಟದಲ್ಲೂ ಮುಂಚೂಣಿಗೆ ನಿಲ್ಲಬೇಕೆನ್ನುವುದು ಸಮನ್ವಯ ಸಮಿತಿ ರಚನೆಗೆ ಆಸಕ್ತಿ ತೋರಿರುವ ನಾಯಕರ ಸಲಹೆಯಾಗಿದೆ.
ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುತ್ತಿರುವ ನದಿಗಳ ನೀರಿನ ಅಲ್ಪ ಭಾಗವನ್ನು ಬಯಲುಸೀಮೆ ಜಿಲ್ಲೆಗಳಿಗೆ ಹರಿಸಿ, ಇಲ್ಲಿನ ಬವಣೆ ನೀಗಿಸುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವ ಪರಿಸರ ವಾದಿಗಳ ವಿರುದ್ಧ ಸಮರ ಸಾರಿ ಸಂಘರ್ಷಕ್ಕೆ ನಿಲ್ಲುವ ಬದಲು ಇಲ್ಲಿನ ಚಿತ್ರಣವನ್ನು ಅವರ ಮುಂದಿಟ್ಟು ಮನಮೊಲಿಸಬೇಕೆನ್ನುವ ಸಲಹೆಯೂ ವ್ಯಕ್ತವಾಗಿದೆ.
ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದೊಟ್ಟಿಗೆ ಕೆರೆ-ಕಟ್ಟೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣಕ್ಕೆ ಪೂರಕವಾದ ಕಾರ್ಯಕ್ರಮಗಳ ಜಾರಿಗೂ ಹೋರಾಟ ನಡೆಯಲಿದೆ. ಹನಿಗೂಡಿದರೆ ಹಳ್ಳ, ತೆನೆ ಗೂಡಿದರೆ ಬಳ್ಳ ಎನ್ನುವಂತೆ ಆರೂ ಜಿಲ್ಲೆಗಳಿಂದ ಸಂಘಟಿತ ಹೋರಾಟ ಭುಗಿಲೆದ್ದರೆ ಸರ್ಕಾರ ಮಣಿದು ಯೋಜನೆ ಕಾರ್ಯಗತಕ್ಕೆ ಒತ್ತು ನೀಡಬಹುದೆನ್ನುವ ಆಶಾಭಾವನೆ ಮೂಡಿದೆ.
ಸಮುದ್ರ ಸೇರುವ ನೀರೆಷ್ಟು?: ಪಶ್ಚಿಮಾಭಿಮುಖವಾಗಿ ಹರಿಯುವ ನೇತ್ರಾವತಿ, ಸ್ವರ್ಣ, ಶರಾವತಿ, ಅಘನಾಶಿನಿ, ಬೇಡ್ತಿ, ಕಾಳಿ ಸಹಿತ 16 ನದಿಗಳಿಂದ ಹರಿಯುವ ಸುಮಾರು 2448.19 ಟಿಎಂಸಿ ನೀರು ಪ್ರತಿ ವರ್ಷ ಸಮುದ್ರಕ್ಕೆ ಸೇರುತ್ತಿದೆ. ಈ ಪೈಕಿ ಶೇ.8.55ರಷ್ಟು ಅಂದರೆ 209.49 ಟಿಎಂಸಿ ನೀರು ಲಭ್ಯವಾದರೆ ಬಯಲುಸೀಮೆ ಜಿಲ್ಲೆಗಳ ಬರ ನೀಗಲಿದೆ ಎನ್ನುವುದು ನೀರಾವರಿ ತಜ್ಞರ ಅಭಿಪ್ರಾಯವಾಗಿದೆ.
ಈಗಾಗಲೇ ಕೃಷಿ ಉತ್ಪಾದನೆ ಕುಸಿದಿದೆ. ತೋಟಗಾರಿಕೆ ಬೆಳೆಗಳು ನಾಶವಾಗುವ ಭೀತಿ ಇದೆ. ಒಂದೊಮ್ಮೆ ಸರ್ಕಾರವು ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡದಿದ್ದರೆ ಬೆಂಗಳೂರಿಗರೂ ಕುಡಿಯುವ ನೀರಿಗೆ ಹಾಹಾಕಾರ ಎದುರಿಸಬೇಕಾಗುತ್ತದೆ. ಸುತ್ತಮುತ್ತಲ ಭಾಗದಲ್ಲಿರುವ ಕೈಗಾರಿಕೆಗಳಿಗೂ ತೊಂದರೆ ಇದೆ. ಹೀಗಾಗಿ ಉದ್ಯಮಿಗಳು, ಕಾರ್ಮಿಕರು, ಎಲ್ಲ ನಾಗರಿಕರೂ ಹೋರಾಟಕ್ಕೆ ಕೈಜೋಡಿಸಬೇಕಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.