ಅನ್ನದಾತ ಸಿಡಿದೇಳುವ ಮುನ್ನ ಎಚ್ಚೆತ್ತುಕೊಳ್ಳಿ; ರೈತರ ಎಚ್ಚರಿಕೆ
ದೊಡ್ಡಬಳ್ಳಾಪುರ: ಬೆಳಗಾವಿಯ ಸುವರ್ಣ ವಿಧಾನಸೌಧ ಎದುರು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ.
ಈ ದುರ್ಘಟನೆಗೆ ರಾಜ್ಯ ಸರ್ಕಾರದ ಹಠಮಾರಿ ನೀತಿಯೇ ನೇರ ಕಾರಣ. ಸತ್ತ ರೈತನ ಶವದ ಮುಂದೆ ವಿಷಾದ ವ್ಯಕ್ತಪಡಿಸಿದರೆ ರೈತರ ಸಂಕಷ್ಟ ತೀರುವುದಿಲ್ಲ ಎಂಬ ಕನಿಷ್ಠ ತಿಳಿವಳಿಕೆ ಈ ರಾಜ್ಯದ ಸಿಎಂಗೆ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗಂಭೀರವಾಗಿ ಆರೋಪಿಸಿದೆ.
ಕಬ್ಬು ಬೆಳೆಗಾರ ರೈತನ ಆತ್ಮಹತ್ಯೆ ಹಿನ್ನಲೆಯಲ್ಲಿ ಘಟನೆಯಲ್ಲಿ ಸರ್ಕಾರದ ಹೊಣೆಗೇಡಿತನ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕನ್ನಡಪಕ್ಷ, ಕೊಳಚೆ ಪ್ರದೇಶ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದವು.
ತಾಲೂಕು ಕಚೇರಿ ವೃತ್ತದಿಂದ ಪ್ರತಿಭಟನೆಯಲ್ಲಿ ಬಂದು ಕಚೇರಿ ಎದುರು ಧರಣಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ದರ್ಪ ಮೆರೆಯಿತು. ಈಗ ಕಾಂಗ್ರೆಸ್ ಸರ್ಕಾರ ವಿಧಾನ ಮಂಡಲ ಅಧಿವೇಶನದ ವೇಳೆಯಲ್ಲೇ ರೈತನ ಸಾವಿಗೆ ಕಾರಣವಾಗಿದೆ. ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು ಬೆಂಬಲ ಬೆಲೆಯನ್ನಷ್ಟೆ ಕೇಳಿ ಹೋರಾಟ ಮಾಡುತ್ತಿದ್ದರು. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದ ಹೊರತು ರೈತರ ಬದುಕು ತೀರಾ ಸಂಕಷ್ಟಕ್ಕೆ ಸಿಲುಕುತ್ತದೆ. ಸರ್ಕಾರ ನಿಗಧಿ ಮಾಡುವ ಬೆಂಬಲ ಬೆಲೆ ವೈಜ್ಞಾನಿಕವಾಗಿರಬೇಕು. ಅದು ರೈತರಿಗೆ ನೇರವಾಗಿ ಸಂದಾಯವಾಗುವಂತೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಕೊನೆಗೂ ಸಾವಿನ ಉತ್ತರ ದೊರೆತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪರ ಓತಪ್ರೋತವಾಗಿ ಮಾತನಾಡುವ ಜನ ನಿಜವಾದ ಸಂಕಷ್ಟ ಆಲಿಸುವ ಅಥವಾ ಅದಕ್ಕೆ ಸ್ಪಂದಿಸುವ ಕನಿಷ್ಠ ಕೆಲಸವನ್ನೂ ಮಾಡದಿರುವುದು ಹೊಣೇಗೇಡಿತನದ ಪರಮಾವಧಿ. ಮೃತ ರೈತನ ಕುಟುಂಬಕ್ಕೆ ಪರಿಹಾರ ಕೊಟ್ಟ ಮಾತ್ರಕ್ಕೆ ರೈತರಿಗೆ ನ್ಯಾಯ ದೊರೆತ ಹಾಗಲ್ಲ. ಈ ಕೂಡಲೇ ಮೃತ ರೈತನ ಮತ್ತು ರಾಜ್ಯದ ಸಮಗ್ರ ರೈತರ ಒಕ್ಕೊರಲ ಒತ್ತಾಯಗಳಿಗೆ ಸರ್ಕಾರ ಸ್ಪಂದಿಸಬೇಕು. ಕಬ್ಬುಬೆಳೆಗಾರರಿಗೆ ನ್ಯಾಯ ಒದಗಿಸಬೇಕು. ಅನ್ನಭಾಗ್ಯದ ಮೂಲಕ ಅನ್ನ ಕೊಡುವ ಚಿಂತನೆ ಮಾಡಿರುವ ಸರ್ಕಾರ ಅನ್ನ ಬೆಳೆಯುವ ಅನ್ನದಾತನನ್ನೇ ಕೊಲ್ಲುತ್ತಿದೆ. ಅದು ಅತ್ಯಂತ ಹೇಯ. ದರ್ಪದ ಪರಮಾವಧಿ. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಈಗಾಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ರೈತರ ವಿಚಾರದಲ್ಲಿ ರಾಜಕಾರಣ ಮಾಡುವ ವಿಪಕ್ಷಗಳೂ ಕೂಡ ನ್ಯಾಯಸಮ್ಮತವಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು. ಕಬ್ಬುಬೆಳೆಗಾರರ ಸಮಸ್ಯೆ ಇತ್ಯರ್ಥವಾಗುವವರೆಗೆ ಸದನದಲ್ಲಿ ಬೇರೆ ವಿಚಾರಗಳು ಬರದಂತೆ ನೋಡಿಕೊಳ್ಳಬೇಕು. ಬಂಡವಾಳಶಾಹಿ ಸಕ್ಕರೆ ಕಂಪನಿಗಳ ಹಿಡಿತದಲ್ಲಿ ಕೈಗೊಂಬೆಯಾಗಿ ವರ್ತಿಸುತ್ತಿರುವ ರಾಜ್ಯ ಸರ್ಕಾರದ ಪಕ್ಷಪಾತಿ ನೀತಿಗೆ ಧಿಕ್ಕಾರವಿರಲಿ ಎಂದು ಘೋಷಣೆಗಳನ್ನು ಕೂಗಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಸನ್ನ ನಾಗಸಂದ್ರ, ಮುಖಂಡರಾದ ಸುಲೋಚನಮ್ಮ ವೆಂಕಟರೆಡ್ಡಿ, ಮುತ್ತೇಗೌಡ, ಸತೀಶ್, ವಸಂತಗೌಡ, ಕನ್ನಡಪಕ್ಷದ ಸಂಜೀವನಾಯಕ್, ಡಿ.ಪಿ.ಆಂಜನೇಯ, ವೆಂಕಟೇಶ್, ಕೊಳಚೆ ಪ್ರದೇಶ ಹೋರಾಟ ಸಮಿತಿಯ ಪ್ರಕಾಶ್ರಾವ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

