ಬೆಂಗಳೂರು ಗ್ರಾಮಾಂತರ

ದೇವರ ದಾಸಿಮಯ್ಯ ಜಯಂತ್ಯುತ್ಸವಕ್ಕೆ ಸಂಭ್ರಮದ ಸಿದ್ಧತೆ

Published On :

ದೊಡ್ಡಬಳ್ಳಾಪುರ: ದೇವಾಂಗ ನೇಕಾರ ಸಮುದಾಯವೇ ಹೆಚ್ಚಿರುವ ದೊಡ್ಡಬಳ್ಳಾಪುರ ನಗರದಲ್ಲಿ ಕನ್ನಡದ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವಕ್ಕೆ ಸಂಭ್ರಮದ ಸಿದ್ಧತೆಗಳು ನಡೆದಿದೆ. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದು, ನಗರದ ಹಲವು ಬಡಾವಣೆಗಳನ್ನು ಕಾರ್ಯಕ್ರಮಗಳು ಏರ್ಪಾಟಾಗಿವೆ.
ದೇವಾಂಗ ಮಂಡಲಿ: ಇಲ್ಲಿನ ದೇವಾಂಗ ಮಂಡಲಿ ನೇತೃತ್ವದಲ್ಲಿ ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ವತಿಯಿಂದ ಶ್ರೀದೇವರ ದಾಸಿಮಯ್ಯ ಜಯಂತ್ಯುತ್ಸವ ಮತ್ತು ಶ್ರೀಚೌಡೇಶ್ವರಿ ಅಮ್ಮನವರ ಆರತಿ ಉತ್ಸವ ಏರ್ಪಾಟಾಗಿದೆ. ಇದೇ ಸಂದರ್ಭದಲ್ಲಿ ಜನಾಂಗದ ಕುಲಗುರು ದೇವಲ ಮಹರ್ಷಿ ವಿಗ್ರಹ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವ ಕೂಡ ಹಮ್ಮಿಕೊಳ್ಳಲಾಗಿದ್ದು, ಏ.4ರ ಬೆಳಗ್ಗೆ 9 ಗಂಟೆಗೆ ಗಾಯತ್ರಿ ಹೋಮ ಮತ್ತು ಪೂರ್ಣಾಹುತಿ ನಡೆಯಲಿದೆ.
ಸಂಜೆ 4 ಗಂಟೆಗೆ ಶ್ರೀದೇವರ ದಾಸಿಮಯ್ಯ ಮತ್ತು ದೇವಲ ಮಹರ್ಷಿಗಳ ಅದ್ಧೂರಿ ರಾಜಬೀದಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಮತ್ತು ಜಾನಪದ ತಂಡಗಳ ಕಲಾವಿದರು, ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮ ದೇವಾಂಗ ಮಂಡಲಿ, ಹುಂಗಿ ಕುಟುಂಬ, ದಾಸಿಮಯ್ಯ ಜಯಂತ್ಯುತ್ಸವ ಸಮಿತಿ ನೇತೃತ್ವದಲ್ಲಿ ನಡೆಯಲಿದ್ದು, ಗಾಯತ್ರಿಪೀಠ ಮಿತ್ರ ಬಳಗ, ಆಂಧ್ರದೇವಾಂಗ ಯೂತ್ ಅಸೋಸಿಯೇಷನ್, ಪದ್ಮಶಾಲಿ ಸಂಘ, ತೊಗಟವೀರ ಸಂಘ, ತೆಲುಗು ದೇವಾಂಗ ಸಂಘ, ಕುರುಹಿನಶೆಟ್ಟಿ ಸಂಘ, ಪಟ್ಟಸಾಲಿ ಸಂಘ, ಸ್ವಕುಳ ಸಾಲಿ ಸಂಘ, ದೇವಾಂಗ ಮಹಿಳಾ ಸಂಘ, ಬಸವಣ್ಣ ಸೇವಾ ಸಮಿತಿ, ಶಿರಡಿ ಸಾಯಿಬಾಬಾ ಸೇವಾಶ್ರಮ ಟ್ರಸ್ಟ್, ಗಾಯತ್ರಿದೇವಿ ಮಹಿಳಾ ಟ್ರಸ್ಟ್, ನಂದಿಗಿರಿ ಪ್ರದಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಸಹಕಾರ ನೀಡಿವೆ.
ದಾಸಿಮಯ್ಯ ಮಿತ್ರ ಮಂಡಲಿ: ಅದೇ ರೀತಿ ಇಲ್ಲಿನ ಶಾಂತಿನಗರದ 7ನೇ ಕ್ರಾಸ್ನ ದರ್ಗಾಜೋಗಿಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀದೇವರ ದಾಸಿಮಯ್ಯ ಮಿತ್ರ ಮಂಡಲಿ ನೇತೃತ್ವದಲ್ಲಿ 5ನೇ ವರ್ಷದ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಏ.4ರ ಶುಕ್ರವಾರ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ನೇಕಾರರ ರಜೆ: ದೇವರ ದಾಸಿಮಯ್ಯ ಜಯಂತ್ಯುತ್ಸವಕ್ಕೆ ಸರ್ಕಾರ 4 ವರ್ಷಗಳ ಹಿಂದೆಯೇ ನಿರ್ಬಂಧಿತ ರಜೆ ಘೋಷಿಸಿದೆ. ದೊಡ್ಡಬಳ್ಳಾಪುರದ ನೇಕಾರರು ಈ ದಿನವನ್ನು ನೇಕಾರರ ರಜಾ ದಿನವಾಗಿ ಆಚರಿಸುತ್ತಿದ್ದು, ಎಲ್ಲ ನೇಕಾರಿಕಾ ಚಟುವಟಿಕೆಗಳನ್ನು ನಿಲ್ಲಿಸಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಗ್ಗಟ್ಟಿನ ನಿರ್ಧಾರ
ಚನ್ನಪಟ್ಟಣ: ಸತತ ಸೋಲಿನಿಂದ ಕಂಗಲಾಗಿರುವ ತಾಲೂಕು ಜೆಡಿಎಸ್, ತನ್ನೆಲ್ಲ ಹಳೆಯ ಗಾಯಕ್ಕೆ ಮುಲಾಮು ಹಚ್ಚಿ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ದೀಕ್ಷೆ ತೊಟ್ಟಿದೆ.ಪಟ್ಟಣದ 6ನೇ ಅಡ್ಡರಸ್ತೆಯಲ್ಲಿರುವ ಜೆಡಿಎಸ್ ಕಾರ್ಯಾಲಯದಲ್ಲಿ  ವಿಧಾನಪರಿಷತ್ ಸದಸ್ಯ ಪುಟ್ಟಣ್ಣ  ನೇತೃತ್ವದಲ್ಲಿ ಸಭೆ ನಡೆಸಿದ ತಾಲೂಕು ಜೆಡಿಎಸ್ನ ಪ್ರಮುಖ ಮುಖಂಡರು ಈಬಾರಿಯ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವುದಾಗಿ ಸಂಕಲ್ಪ ಮಾಡಿದ್ದಾರೆ. ಹಿಂದಿನ ಕಹಿ ಘಟನೆಗಳನ್ನು ಮರೆತು, ಪಕ್ಷವನ್ನು ಮುನ್ನಡೆಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕೈ ಬಲಪಡಿಸುವುದಷ್ಟೇ ತಮ್ಮ ಧ್ಯೇಯ ಎಂದು ಸ್ಪಷ್ಟಪಡಿಸಿರುವ ಮುಖಂಡರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.



ಜೆಡಿಎಸ್ ಮನೆಮನೆ ಪ್ರಚಾರಕ್ಕೆ ಚಾಲನೆ
ಗೌರಿಬಿದನೂರು: ಜ್ಯೋತಿರೆಡ್ಡಿ ಅವರು ಜೆಡಿಎಸ್ ತೊರೆದಿರುವುದರಿಂದ ಪಕ್ಷಕ್ಕೆ ನಷ್ಟವಿಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಲ್. ಶಿವರಾಮರೆಡ್ಡಿ ತಿಳಿಸಿದರು. ಪಟ್ಟಣದಲ್ಲಿ ಜೆಡಿಎಸ್ ಕಚೇರಿ ಉದ್ಘಾಟಿಸಿದ ನಂತರ ಮನೆಮನೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಕುಮಾರಸ್ವಾಮಿಯವರು ಅಭ್ಯರ್ಥಿಯಾಗಿರುವುದರಿಂದ ಎಲ್ಲಾ ಪಕ್ಷದ ಸಾಂಪ್ರದಾಯಿಕ ಮತದಾರರೂ ಮತನೀಡುತ್ತಾರೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬದ್ಧನಾಗಿರುವುದಾಗಿ ಮಾತುಕೊಟ್ಟಿದ್ದಾರೆ. ಬೆಂಗಳೂರು ಗೌರಿಬಿದನೂರು ರಸ್ತೆಯನ್ನು ಉತ್ತಮ ರಸ್ತೆಯನ್ನಾಗಿ ನಿರ್ಮಿಸಿದರು. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದರು. ಜೈಪಾಲರೆಡ್ಡಿ, ಆರ್.ಅಶೋಕ್ ಕುಮಾರ್ ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.