ಬೆಂಗಳೂರು ಗ್ರಾಮಾಂತರ

ಅನಿವಾರ್ಯಗಳ ಸಂದಿಗ್ಧತೆಯಿಂದ ಅಭ್ಯರ್ಥಿಯಾದೆ: ಕುಮಾರಸ್ವಾಮಿ

Published On :

ದೊಡ್ಡಬಳ್ಳಾಪುರಛ ಅನಿವಾರ್ಯಗಳ ಸಂದಿಗ್ಧತೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ. 5 ವರ್ಷ ರಾಜ್ಯ ರಾಜಕಾರಣದಲ್ಲೇ ಇರುವ ಉದ್ದೇಶವಿತ್ತು. ಆದರೆ ರಾಜ್ಯದ ಹಿತದೃಷ್ಟಿಯಿಂದ ಸ್ಪರ್ಧೆ ನಿರ್ಧಾರ ಅನಿವಾರ್ಯವಾಯಿತು ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕು ಮತ್ತು ನಗರದ ವಿವಿಧೆಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಲವು ಮಹತ್ವದ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದಿದ್ದರೂ ಕ್ಷೇತ್ರಕ್ಕೆ ಬೇಕಾದ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನಸಾಮಾನ್ಯರ ಕಷ್ಟ ಕೇಳಲಿಲ್ಲ. ಕಳೆದ ಚುನಾವಣೆಯಲ್ಲಿ ನೀರಿನ ರಾಜಕಾರಣ ಮಾಡಿದ ಅವರು, 2 ವರ್ಷದಲ್ಲಿ ಎತ್ತಿನಹೊಳೆ ನೀರು ತರುವ ಭರವಸೆ ನೀಡಿದ್ದರು. 5 ವರ್ಷವಾದರೂ ಭರವಸೆ ಈಡೇರಿಲ್ಲ. ಈಗ ಮತ್ತೆ ಅದೇ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದಾರೆ.
ಈ ಎರಡೂ ರಾಷ್ಟ್ರೀಯ ಪಕ್ಷಗಳು ಜನ ವಿರೋಧಿಗಳೇ. ದೇಶದ ಸಂಪತ್ತನ್ನು ಸಮಾನವಾಗಿ ಲೂಟಿ ಮಾಡಿರುವ ಈ ಪಕ್ಷಗಳಿಗೆ ಜನ ಆಶೀರ್ವದಿಸಲ್ಲ. ರೈತರು-ನೇಕಾರರ ಸಂಕಷ್ಟಗಳಿಗೆ ಎಂದೂ ಸ್ಪಂದಿಸದ ಇವರು, ಬರೀ ಮೊಸಳೆ ಕಣ್ಣೀರು ಸುರಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಂಬಿಕೆ ಇಲ್ಲ: ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿರುವ ಬಿಜೆಪಿಗೆ ತನ್ನ ಅಭ್ಯರ್ಥಿ ಮತ್ತು ಪಕ್ಷದ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ಪಕ್ಷಕ್ಕಿಂತ ಅಲ್ಲಿ ವ್ಯಕ್ತಿಯೇ ಮುಖ್ಯವಾಗಿದೆ. ಇನ್ನು ಕಾಂಗ್ರೆಸ್ ಇತರರ ಮೇಲೆ ಆರೋಪಗಳನ್ನು ಮಾಡುವಲ್ಲೇ ಕಾಲ ಕಳೆಯುತ್ತಿದೆ. ತನ್ನದು ಎಂದು ಹೇಳಿಕೊಳ್ಳಲು ಆ ಪಕ್ಷಕ್ಕೆ ಏನೂ ಕೊಡುಗೆ ಇಲ್ಲ. ಮೋದಿ ಸರ್ಕಾರದ 12 ವರ್ಷದ ಸಾಧನೆಗೆ ಕುಮಾರಸ್ವಾಮಿ ಸರ್ಕಾರದ 20 ತಿಂಗಳ ಸಾಧನೆ ಸಮ ಎಂದರು.
ಕನ್ನಡಿಗರ ಅಧಿಪತ್ಯ ಬೇಕು: 1996ರಲ್ಲಿ ಮೊದಲ ಬಾರಿಗೆ ಜನತಾದಳಕ್ಕೆ 16 ಸ್ಥಾನ ಕೊಟ್ಟ ರಾಜ್ಯದ ಜನತೆಯ ಆಶೀರ್ವಾದದಿಂದ ಕನ್ನಡಿಗರೊಬ್ಬರು ಅಂದು ಪ್ರಧಾನಿಯಾದ್ರು. ಈಗ ಅದೇ ಬದಲಾವಣೆಯ ಕಾಲ ಬಂದಿದೆ. ಈ ಬಾರಿ ರಾಜ್ಯದ ಜನತೆ ಆಶೀರ್ವದಿಸಿ ಜೆಡಿಎಸ್ಗೆ ಕನಿಷ್ಠ 15 ಸ್ಥಾನ ಕೊಟ್ಟರೆ ಮತ್ತೊಮ್ಮೆ ಕೇಂದ್ರದಲ್ಲಿ ಕನ್ನಡಿಗರ ಅಧಿಪತ್ಯ ಸ್ಥಾಪನೆಯಾದರೂ ಅಚ್ಚರಿಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಮಾದರಿ ಅಭಿವೃದ್ಧಿಗಾಗಿ ಜೆಡಿಎಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ತಾಲೂಕಿನ ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ದೊಡ್ಡಹೆಜ್ಜಾಜಿ, ಕನಸವಾಡಿ, ಅರಳುಮಲ್ಲಿಗೆ ಸೇರಿದಂತೆ ದೊಡ್ಡಬಳ್ಳಾಪುರದ ಸಂಜಯನಗರ, ತೇರಿನಬೀದಿ, ಕುಚ್ಚಪ್ಪನಪೇಟೆ, ಕಲ್ಲುಪೇಟೆ, ತ್ಯಾಗರಾಜನಗರ, ಇಸ್ಲಾಂಪುರ, ಶಾಂತಿನಗರ, ತಾಲೂಕು ಕಚೇರಿ ರಸ್ತೆ, ಮುಕ್ತಾಂಭಿಕಾರಸ್ತೆ, ಬಸ್ ನಿಲ್ದಾಣ ಮುಂತಾದೆಡೆ ಕುಮಾರಸ್ವಾಮಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಪಕ್ಷದ ಸ್ಥಳೀಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.