ಘಟಾನುಘಟಿಗಳು ಆಯ್ಕೆಯಾದರೂ ಮಂತ್ರಿಗಿರಿ ಸಿಕ್ಕಿದ್ದು ಒಬ್ಬರಿಗೇ!
ಮತ್ತೀಕೆರೆ ಜಯರಾಮ್
ರಾಮನಗರ: ಆಗಿನ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಘಟಾನುಘಟಿ ನಾಯಕರೇ ಆರಿಸಿ ಹೋಗಿದ್ದಾರೆ. ಆದರೆ, ಕೇಂದ್ರದಲ್ಲಿ ಮಂತ್ರಿಗಿರಿ ಸಿಕ್ಕಿದ್ದು ಒಬ್ಬರಿಗೆ, ಅದೂ ಅಲ್ಪಾವಧಿಗಷ್ಟೆ.
1967ರಲ್ಲಿ ಉದಯಿಸಿದ ಈ ಕ್ಷೇತ್ರ 2 ಉಪ ಚುನಾವಣೆ ಸಹಿತ 14 ಚುನಾವಣೆಗಳನ್ನು ಕಂಡಿದೆ.
ಈ ಕ್ಷೇತ್ರದಿಂದ ಆರು ಬಾರಿ ಚುನಾಯಿತರಾಗಿದ್ದ ಎಂ.ವಿ.ಚಂದ್ರಶೇಖರಮೂರ್ತಿ ಅವರೊಬ್ಬರೇ ಕೇಂದ್ರದಲ್ಲಿ ಸಚಿವರಾದ ಇಲ್ಲಿನ ಏಕೈಕ ಸಂಸದ. ಉಳಿದ ಆರು ಮಂದಿಗೆ ಸಂಸತ್ತಿನಲ್ಲಿ ಸದಸ್ಯರಾಗಷ್ಟೇ ಇದ್ದರು.
ಚಂದ್ರಶೇಖರಮೂರ್ತಿ ಅವರು ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಅಲ್ಪಾವಧಿಗೆ ಸಚಿವರಾಗಿದ್ದರಾದರೂ ಕ್ಯಾಬಿನೆಟ್ ದರ್ಜೆ ಅಲ್ಲ. ಬದಲಿಗೆ ಅವರು ರಾಜ್ಯ ಸಚಿವರಾಗಿ ಹಣಕಾಸು ಖಾತೆಯನ್ನು ನಿರ್ವಹಿಸಿದ್ದರಷ್ಟೆ.
ಇಲ್ಲಿಂದ ಸಿಕ್ಕಿದ್ದಲ್ಲ ಪದವಿ: ಈ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಮಾಜಿ ಸಚಿವರಾದ ಎಂ.ವಿ.ರಾಜಶೇಖರನ್ ಕೂಡ ತಲಾ ಒಮ್ಮೆ ಪ್ರತಿನಿಧಿಸಿದ್ದಾರೆ.
ಆದರೆ, ಇವರು ಇಲ್ಲಿಂದ ಚುನಾಯಿತರಾದಾಗ ಕೇಂದ್ರದಲ್ಲಿ ಹುದ್ದೆ ಅನುಭವಿಸಿದವರಲ್ಲ.
ದೇವೇಗೌಡ ಪ್ರಧಾನಿ ಆಗಿದ್ದಾಗ ಸಂಸತ್ತಿನ ಸದಸ್ಯರಾಗಲು ರಾಜ್ಯಸಭೆಯಿಂದ ಚುನಾಯಿತರಾದವರು. 1999ರ ಚುನಾವಣೆಯಲ್ಲಿ ಸ್ವಕ್ಷೇತ್ರ ಹಾಸನದಲ್ಲಿ ಸೋತು ಮೂಲೆ ಸೇರಿದ್ದ ಅವರು ಇಲ್ಲಿ ಎದುರಾದ ಉಪ ಚುನಾವಣೆ ಅಖಾಡಕ್ಕೆ ಇಳಿದು, ರಾಜಕೀಯ ಮರು ಹುಟ್ಟು ಪಡೆದರು.
ಬೇರೆಡೆ ಸಿಕ್ಕತು ಭವಿಷ್ಯ: ಕನಕಪುರ ಕ್ಷೇತ್ರದ ಚೊಚ್ಚಲ ಸಂಸದ ಎನ್ನುವ ಹಗ್ಗಳಿಕೆಗೆ ಪಾತ್ರರಾದ ಎಂ.ವಿ.ರಾಜಶೇಖರನ್ ಅವರಿಗೆ ಸಚಿವ ಸ್ಥಾನ ದೊರೆತಿದ್ದೂ ರಾಜ್ಯಸಭೆ ಸದಸ್ಯರಾದಾಗಲೇ. ಇನ್ನು, ಜಾಫರ್ ಷರೀಫ್ ಕೂಡ ಕ್ಷೇತ್ರ ತೊರೆದು ಬೆಂಗಳೂರು ಉತ್ತರದ ಪ್ರತಿನಿಧಿಯಾದಾಗ ಕೇಂದ್ರದಲ್ಲಿ ಸಚಿವರಾದರು. ಈ ಕ್ಷೇತ್ರ ಕಂಡ ಇಬ್ಬರು ಒಕ್ಕಲಿಗೇತರ ಸಂಸದರು ಇವರೇ. ಉಳಿದೆಲ್ಲರೂ ಒಕ್ಕಲಿಗರೇ.
ಇವರಿಗೂ ಸಿಗಲಿಲ್ಲ ಭಾಗ್ಯ: ಎರಡು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ತಲಾ ಒಮ್ಮೆ ಆಯ್ಕೆಯಾಗಿರುವ ಎಂ.ಶ್ರೀನಿವಾಸ್, ತೇಜಸ್ವಿನಿಗೌಡ, ಡಿ.ಕೆ.ಸುರೇಶ್ ಅವರಿಗೆ ಕೇಂದ್ರದಲ್ಲಿ ಯಾವುದೇ ಪ್ರಮುಖ ಅಧಿಕಾರ ಭಾಗ್ಯ ಪ್ರಾಪ್ತಿಯಾಗಿಲ್ಲ. ಈ ಜಿಲ್ಲೆಯ ಕೆಂಗಲ್ ಹನುಮಂತಯ್ಯ ಬೆಂಗಳೂರು ದಕ್ಷಿಣದಿಂದ ಗೆದ್ದು, ಕೇಂದ್ರದಲ್ಲಿ ಪ್ರಭಾವಿ ಸಚಿವರಾದರು.
2ನೇ ಸುತ್ತಿನ ಚುನಾವಣೆ ತರಬೇತಿ ಇಂದು
ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜುನಲ್ಲಿ ಏ.5 ರಂದು ಶನಿವಾರ ಎರಡನೇ ಸುತ್ತಿನ ಚುನಾವಣೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಎಚ್. ನಟರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

