ಬಾಲಕನ ಶಸ್ತ್ರಚಿಕಿತ್ಸೆಗೆ ನೆರವು ನೀಡುವಿರಾ...
ರಾಮನಗರ: ದರಿದ್ರಲಕ್ಷ್ಮಿ ಕಾಲೂರಿರುವ ಆ ಮನೆಯಲ್ಲಿ ಏಕೈಕ ಕರುಳಕುಡಿಗೆ ವಿಚಿತ್ರ ಕಾಯಿಲೆಯ ಬಾಧೆ. ಒಂದಲ್ಲಾ ಎರಡಲ್ಲಾ ಎಂಟು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದ್ದರೂ ಆತ ಗುಣಮುಖನಾಗಲೇ ಇಲ್ಲ. ಈಗ ಇನ್ನೊಂದು ಬಾರಿ
ಶಸ್ತ್ರಚಿಕಿತ್ಸೆ ತುರ್ತಾಗಿ ಆಗಬೇಕೆನ್ನುವ ವೈದ್ಯರ ಮಾತು ಕೇಳಿ ಹೆತ್ತವರು ಕಂಗಾಲು. ಇದು ಬಡತನದ ಬೇಗೆಯಲ್ಲಿ ಬೆಂದು ಬಸವಳಿದ ಕುಟುಂಬದ ಕರುಣಾಜನಕ ಕತೆ.
ಮಗನ ಕಾಯಿಲೆಗೆ ಇದ್ದ ಎಲ್ಲವನ್ನೂ ಖರ್ಚು ಮಾಡಿರುವ ಪೋಷಕರು ಈಗ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಲು ಹಣ ಹೊಂದಿಸುವುದಾದರೂ ಹೇಗೆ? ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.
ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವವರು ರಾಮನಗರದ ಐಜೂರು ಬಡಾವಣೆಯಲ್ಲಿ ಕೂಲಿ ನಾಲಿ ಮಾಡಿಕೊಂಡು ಬದುಕಿನ ಬಂಡಿ ನಡೆಸುತ್ತಿರುವ ಸೋಮಸುಂದರ್-ಶಾರದ ದಂಪತಿ. ಅವರಿಗೆ ಸಾವು-ಬದುಕಿನ ನಡುವೆ ಕಾಲ ದೂಡುತ್ತಿರುವ ಏಕಮಾತ್ರ ಪುತ್ರ ಆನಂದಕುಮಾರನದ್ದೇ ಚಿಂತೆ.
ಹತ್ತನೇ ತರಗತಿಯಲ್ಲಿ ಓದುತ್ತಿರುವ ಆನಂದಕುಮಾರನಿಗೆ ಬಾಲ್ಯದಿಂದಲೇ ತಲೆಬೇನೆ ಕಾಣಿಸಿಕೊಳ್ಳಲಾರಂಭಿಸಿತು. ತಲೆಯಲ್ಲಿ ಗೆಡ್ಡೆಯಿದೆ, ನೀರು ತುಂಬಿದೆ ಎಂದು ಎಂಟು ಬಾರಿ ಆತನಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆ ಪರಿಣಾಮ, ತಲೆ ಸ್ವರೂಪವೇ ಬದಲಾಗಿದೆ. ಇದೀಗ ತಲೆಯಲ್ಲಿ ಗೆಡ್ಡೆ ಬೆಳೆದಿದ್ದು, ಪರಿಸ್ಥಿತಿ ಕೈಮೀರುತ್ತಿದೆ.
ವಾರದೊಳಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಪ್ರಾಣಾಪಾಯವಿದೆ ಎಂದು ನಾರಾಯಣ ಹೃದಯಾಲಯ ವೈದ್ಯರು ಹೇಳಿದ್ದಾರೆ.
ಹೆತ್ತೊಬ್ಬ ಮಗನನ್ನು ಉಳಿಸಿಕೊಳ್ಳಲು ತಮ್ಮೆಲ್ಲಾ ಸಂಪಾದನೆ ಕಳೆದುಕೊಂಡು, ಸಾಲ-ಸೋಲ ಮಾಡಿರುವ ಪೋಷಕರು ಇದೀಗ ಶಸ್ತ್ರಚಿಕಿತ್ಸೆಗೆ ರು.2 ಲಕ್ಷ ಹೊಂದಿಸಲು ಪಡುತ್ತಿರುವ ಸಂಕಷ್ಟ ಹೇಳತೀರದಾಗಿದೆ. ದಾನಿಗಳು ನೆರವಾಗುವರೇ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
ಸಹಾಯ ಮಾಡುವ ದಾನಿಗಳು ಕರ್ಣಾಟಕ ಬ್ಯಾಂಕ್ನ ರಾಮನಗರ ಶಾಖೆಯಲ್ಲಿರುವ ಆನಂದಕುಮಾರನ ಅಕೌಂಟ್ ನಂ.652200103140701 ಇಲ್ಲಿಗೆ ಜಮೆ ಮಾಡಬಹುದು. ವಿವರಕ್ಕೆ ಮೊ. 97439-62584, 99450-26432 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

