ಬೆಂಗಳೂರು ಗ್ರಾಮಾಂತರ

ಸರ'ಹದ್ದು' ಮೀರಿದರೆ ಸಹಿಸಲಾಗದು

Published On :

ಕ.ಪ್ರ.ವಾರ್ತೆ ,  ರಾಮನಗರ ,  ಫೆ.4
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಡಿಕೆಶಿ ಸಹೋದರರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ಸಂಸದ ಡಿ.ಕೆ.ಸುರೇಶ್ ಅವರದ್ದು ಗೂಂಡಾ ಸಂಸ್ಕೃತಿ ಎಂದಿರುವ ಕುಮಾರಸ್ವಾಮಿ, ಶಾಸಕರ ಪರಮಾಧಿಕಾರ ಪ್ರಶ್ನಿಸಲು ಹೊರಟರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.  
ಸಂಸದ ಸುರೇಶ್ ಕೆಲವು ಕಾಂಗ್ರೆಸ್ ಪುಢಾರಿಗಳನ್ನು ಕಟ್ಟಿಕೊಂಡು ಜನ ಸಂಪರ್ಕ ಸಭೆ ಹೆಸರಿನಲ್ಲಿ ಅಶ್ಲೀಲ ಶಬ್ಧಗಳಿಂದ ಅಧಿಕಾರಿಗಳ ನಿಂದನೆ, ಗೂಂಡಾ ಸಂಸ್ಕೃತಿಯನ್ನು ಕ್ಷೇತ್ರದಲ್ಲಿ ತೋರುತ್ತಿದ್ದಾರೆ. ಇಂತಹ ವರ್ತನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಮುಂದುವರೆಸಲು ಬಿಡುವುದೂ ಇಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಗುಡುಗಿದರು.
ಹಸ್ತಕ್ಷೇಪ ಸಹಿಸೆನು: ಗೂಂಡಾಗಿರಿ ಪ್ರದರ್ಶಿಸಿದಾಕ್ಷಣ ಅಧಿಕಾರಿಗಳು ತಮ್ಮಿಂದಾಗದ ಕೆಲಸವನ್ನು ಮಾಡಿಕೊಡಲು ಸಾಧ್ಯವಿಲ್ಲ. ಸಂಸದರು ತಮ್ಮ ಅಧಿಕಾರ ವ್ಯಾಪ್ತಿಯ ಇತಿಮಿತಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಶಾಸಕರಿಗೆ ಇರುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸಂಸದರ ದುಂಡಾವರ್ತನೆಗೆ ಜನರೇ ತಕ್ಕ ಪಾಠ ಕಲಿಸುವ ಸಮಯ ಸನಿಹವಿದೆ ಎಂದು ಕುಮಾರಸ್ವಾಮಿ ಗುಡುಗಿದರು. ನಾನು ಮುಖ್ಯಮಂತ್ರಿ, ಲೋಕಸಭೆ ಸದಸ್ಯನಾಗಿದ್ದಾಗ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಕೆಲಸ ಮಾಡಲು ಇದೇ ಡಿಕೆಶಿ ಅವಕಾಶ ನೀಡಲಿಲ್ಲ. ಹೀಗಿರುವಾಗ ಸುರೇಶ್ ಒಬ್ಬ ಸಂಸದರಾಗಿ ರಾಮನಗರ ಕ್ಷೇತ್ರದಲ್ಲಿ ಶಾಸಕರ ಕರ್ತವ್ಯ ನಿಭಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.
ಕನಕಪುರಕ್ಕೆ ಸೀಮಿತವಾಗಲಿ: ಡಿಕೆಎಸ್  ಸಹೋದರರ ರೌಡಿಸಂ ಮತ್ತು ಅಧಿಕಾರ ದುರ್ಬಳಕೆ ಕನಕಪುರಕ್ಕೆ ಸೀಮಿತವಾಗಲಿ. ಅದನ್ನು ರಾಮನಗರ ಸಹಿತ ಬೇರೆ ಕ್ಷೇತ್ರದಲ್ಲಿ ವಿಸ್ತರಿಸುವುದು ಬೇಡ. ಒಂದೊಮ್ಮೆ ಹದ್ದು ಮೀರಿದರೆ ನಾನೂ ಪ್ರತಿರೋಧ ಒಡ್ಡದೆ ಸುಮ್ಮನಿರಲಾಗದು. ಈ ಕುರಿತು ಶೀಘ್ರವೇ ಅಧಿಕಾರಿಗಳ ಸಭೆ ನಡೆಸಿ, ಸೂಚನೆ ನೀಡಲಾಗುವುದು ಎಂದು ಗುಡುಗಿದರು.
ಟ್ರಸ್ಟ್ ಹೆಸರಲ್ಲಿ ಸರ್ಕಾರಿ ಕೆಲಸ: ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಒದಗಿಸಲು ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಇದು ಹಿಂದಿನ ಬಿಜೆಪಿ ಸರ್ಕಾರದ ತಾತ್ಕಾಲಿಕ ಬಿಪಿಎಲ್ ಚೀಟಿಯಂಥದ್ದೇ ಮತ್ತೊಂದು ಯೋಜನೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಕಾರ್ಯವ್ಯಾಪ್ತಿ ಮೀರಿದ್ದು: ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ಮಂಜೂರಾತಿ ಪತ್ರ ವಿತರಣೆಯು ಶಾಸಕರ ಜವಬ್ದಾರಿಯಾಗಿದೆ. ಒಂದೊಮ್ಮೆ ಅಧಿಕಾರಿಗಳೇನಾದರೂ ಒತ್ತಡಕ್ಕೆ ಮಣಿದು ನನ್ನ ಕ್ಷೇತ್ರದ ಪತ್ರಗಳನ್ನು ಟ್ರಸ್ಟಿಗೆ ಹಸ್ತಾಂತರಿಸಿದರೆ ಹಕ್ಕುಚ್ಯುತಿ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಎಲ್ಲವೂ ಚುನಾವಣಾ ಗಿಮಿಕ್: ಚುನಾವಣೆ ಗಿಮಿಕ್ ಆಗಿರುವ ಮಾಸಾಶನ ಅರ್ಜಿಗಳ ವಿಲೇವಾರಿಯಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಗಮನ ಹರಿಸಬೇಕು. ಬೋಗಸ್ ಫಲಾನುಭವಿಗಳ ಸೃಷ್ಟಿ, ಸೌಲಭ್ಯ ದುರ್ಬಳಕೆ ಮತ್ತು ವಂಚನೆ ವಿರುದ್ಧ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ದಾಖಲೆ ನೀಡಲಿ: ಚನ್ನಪಟ್ಟಣ ಮತ್ತು ರಾಮನಗರಕ್ಕೆ ಕಾವೇರಿ ಕುಡಿಯುವ ನೀರು ಯೋಜನೆ ಎಚ್.ಡಿ.ದೇವೇಗೌಡರ ಕೊಡುಗೆ. ರಾಮನಗರಕ್ಕೆ ಬಂದು ಅಭಿವೃದ್ಧಿ ಎಂದು ಹೇಳುವ ಡಿಕೆಎಸ್ ಸಹೋದರರು ಕೇಂದ್ರ ಮತ್ತು ರಾಜ್ಯದಿಂದ ಇಲ್ಲಿಗೆ ಮಂಜೂರು ಮಾಡಿಸಿರುವ ಕಾಮಗಾರಿಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ತರಾತುರಿ ಏಕೆ?: ರೇಲ್ವೆ ನಿಲ್ದಾಣ ಕಾಮಗಾರಿ ಮುಗಿದಿದ್ದರೂ ಉದ್ಘಾಟನೆ ಆಗಿಲ್ಲ. ಯಾರೋ ಮಂಜೂರು ಮಾಡಿಸಿದ ಬಸ್‌ನಿಲ್ದಾಣವನ್ನು ಉದ್ಘಾಟಿಸಲು ತರಾತುರಿ ಪ್ರಯತ್ನ ನಡೆಸಲಾಗುತ್ತಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಡಿಕೆಎಸ್ ಟ್ರಸ್ಟ್ ಹೆಸರಿನ ಫಲಕ ಹಾಕಲಾಗುತ್ತಿದೆ. ಆ ಫಲಕಗಳನ್ನು ಅಧಿಕಾರಿಗಳು ತಕ್ಷಣ ತೆರವುಗೊಳಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಕ್ಷೇತ್ರದಲ್ಲಿ ಸಂಸದ ಸುರೇಶ್ ಕೆಲವು ಕಾಂಗ್ರೆಸ್ ಪುಢಾರಿಗಳನ್ನು ಕಟ್ಟಿಕೊಂಡು ಜನ ಸಂಪರ್ಕ ಸಭೆ ಹೆಸರಿನಲ್ಲಿ ಅಶ್ಲೀಲ ಶಬ್ಧಗಳಿಂದ ಅಧಿಕಾರಿಗಳ ನಿಂದನೆ, ಗೂಂಡಾ ಸಂಸ್ಕೃತಿ ತೋರುತ್ತಿದ್ದಾರೆ
-  ಎಚ್.ಡಿ. ಕುಮಾರಸ್ವಾಮಿ

ದೇವೇಗೌಡರ ಸ್ಪರ್ಧೆ ಹಾಸನದಿಂದಲೇ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕಟ್ಟಕಡೆಯ ಲೋಕಸಭೆ ಚುನಾವಣೆ ಸ್ಪರ್ಧೆ ಹಾಸನದಿಂದಲೇ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಯನ್ನು ಪಕ್ಷ ಕಣಕ್ಕೆ ಇಳಿಸಲಿದೆ ಎಂದು ಹೇಳುವ ಮೂಲಕ ಈ ಕ್ಷೇತ್ರದಿಂದ ದೇವೇಗೌಡರ ಸ್ಪರ್ಧೆ ಕುರಿತು ಎದ್ದಿದ್ದ ಊಹಾಪೋಹಕ್ಕೆ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ.

ದೌರ್ಜನ್ಯದ ರಾಜಕಾರಣಕ್ಕೆ ಸೋದರರು ರೆಡಿಮೇಡ್!
ರಾಮನಗರದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಡಿಕೆಶಿ ಸಹೋದರರು ತಮ್ಮನ್ನು ಈ ನೆಲದ ರೆಡಿಮೇಡ್ ಗಂಡುಗಳು ಎಂದು ಕರೆದುಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದಲಿತರ ಭೂಮಿ ಕಬಳಿಸುವುದು, ಶಾಲೆ ಜಾಗ ಕಸಿದುಕೊಳ್ಳುವುದು, ಪ್ರಾಕೃತಿಕ ಸಂಪತ್ತು ಲೂಟಿ ಮಾಡುವುದು, ಕಾಮಗಾರಿ ನಡೆಸದವರಿಗೆ ಬಿಲ್ ಮಂಜೂರು, ದರ್ಪ ಮತ್ತು ದೌರ್ಜನ್ಯದ ರಾಜಕಾರಣ ಮಾಡುವುದಕ್ಕೆ ಅವರು ರೆಡಿಮೇಡ್ ಗಂಡುಗಳೇ ಎಂದು ವ್ಯಂಗ್ಯವಾಡಿದರು.

ತೃತೀಯ ರಂಗ ರಚನೆ
ಎಡಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ತೃತೀಯ ರಂಗ ರಚನೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ. ದೆಹಲಿಯಲ್ಲಿ ತೃತೀಯ ರಂಗ ಅಂಗ ಪಕ್ಷಗಳ ಸಭೆ ನಡೆಯಲಿದ್ದು, ಜೆಡಿಎಸ್ ಪ್ರತಿನಿಧಿಯಾಗಿ ಪಕ್ಷದ ಸರ್ವೋಚ್ಛ ನಾಯಕ ಎಚ್.ಡಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.