ಬೆಂಗಳೂರು ಗ್ರಾಮಾಂತರ

ವಿದ್ಯೆ ಬಯಸುವವನೇ ನಿಜವಾದ ವಿದ್ಯಾರ್ಥಿ: ಸೌಮ್ಯನಾಥ ಶ್ರೀ

Published On :

ಮಾಗಡಿ: ವಿದ್ಯೆ ಬಯಸುವವನೇ ನಿಜವಾದ ವಿದ್ಯಾರ್ಥಿ ಎಂದು ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಕರೆ ನೀಡಿದರು.
ಅವರು ಇಲ್ಲಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಅದು ಅತ್ಯಂತ ಪವಿತ್ರವಾದುದು. ವಿದ್ಯೆ
ಬೇಕು ಎಂದರೆ ಸುಖವನ್ನು ತ್ಯಜಿಸಬೇಕು. ವಿದ್ಯೆಯ ಜತೆಗೆ ವಿನಯತೆ, ಸದ್ಗುಣಗಳನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಬೇಕು. ದೂರದರ್ಶನ, ಮೊಬೈಲ್ ದಾಸರಾಗಬಾರದು.  ಯೌವನ, ಹಣ, ಅಧಿಕಾರ, ಅವಿವೇಕಿತನ ಮನುಷ್ಯನನ್ನು ಅನರ್ಥಗೊಳಿಸುತ್ತದೆ. ಇದ್ದ  ಅವಕಾಶದಲ್ಲಿ ಶ್ರಮಪಟ್ಟು ಓದಿದರೆ ಪ್ರತಿಭಾ  ಸಾಮರ್ಥ್ಯದ ಸಾಧನೆ, ತಂದೆ, ತಾಯಿ, ಉಪನ್ಯಾಸಕ, ಪ್ರಾಂಶುಪಾಲರಿಗೆ
ಸಂಸ್ಥೆಗೆ ಹೆಚ್ಚೆಚ್ಚು ಸಂತೋಷ ತರುತ್ತದೆ. ತಂದೆ, ತಾಯಿ ಗುರುವನ್ನು ಎಂದಂದೂ ಮರೆಯಬಾರದು. ಇಲ್ಲಿನ ಹಳ್ಳಿ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಪ್ರಶಂಸನೀಯವಾದುದು ಎಂದರು.
ಬಿಜಿಎಸ್ ಕಾಲೇಜು ಪ್ರಾಂಶುಪಾಲ ಕೆ. ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಚೇನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನರಸಿಂಹಮೂರ್ತಿ ಕಾಲೇಜು ಪ್ರಗತಿ, ಶಿಸ್ತು ಕುರಿತು ಮಾತನಾಡಿದರು. ಪುರಸಭಾ ಸದಸ್ಯೆ ಹೊಂಬಮ್ಮ ವಿದ್ಯಾರ್ಥಿಗಳಿಗೆ ಶಿಸ್ತು ಕುರಿತು ತಿಳಿಸಿದರು. ಪ್ರತಿಭಾ ಪುರಸ್ಕಾರ ಪಡೆದ ಕೆಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಇದೇ ವೇಳೆ ಹಂಚಿಕೊಂಡರು.
   ಇದೇ ಸಂದರ್ಭದಲ್ಲಿ 2012-13ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೌಮ್ಯನಾಥ ಸ್ವಾಮೀಜಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಕಾಲೇಜು ಮತ್ತು ಪ್ರೌಢಶಾಲೆಗಳು ಒಂದೇ ಕಟ್ಟಡದಲ್ಲಿ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರತ್ಯೇಕ ಕಾಲೇಜು, ವಿದ್ಯಾರ್ಥಿ ವಸತಿ ಶಾಲೆ, ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಭಾವನೆಗಳ ಹಂಚಿಕೆ, ಕವನ, ಕಾದಂಬರಿ ಒಳಗೊಂಡ ಸ್ಮರಣ ಸಂಚಿಕೆ ಹೊರ
ತರಲು ಚಿಂತಿಸಲಾಗಿದೆ ಎಂದು ಸೌಮ್ಯನಾಥ ಸ್ವಾಮಿಜೀ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಲಿಂಗರಾಜು, ಶ್ರೀ ರಂಗನಾಥಸ್ವಾಮಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ರಂಗಪ್ಪ, ಶಿಕ್ಷಕರಾದ ವೈ.ಆರ್. ರಾಮಣ್ಣ, ಜಯಸಿಂಹ ಹಾಗೂ ಪೋಷಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.