ಬೆಂಗಳೂರು ಗ್ರಾಮಾಂತರ

ಐತಿಹಾಸಿಕ ಹುಲುಕುಡಿ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ

Published On :

ದೊಡ್ಡಬಳ್ಳಾಪುರ: ತಾಲೂಕಿನ ಐತಿಹಾಸಿಕ ಮತ್ತು ಪಾರಂಪರಿಕ ಪುಣ್ಯಕ್ಷೇತ್ರವಾಗಿರುವ ಹುಲುಕುಡಿ ಬೆಟ್ಟದಲ್ಲಿ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮ ಬ್ರಹ್ಮರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀಸ್ವಾಮಿಗೆ ಹಣ್ಣು-ದವನ ಅರ್ಪಿಸುವ ಮೂಲಕ ಭಕ್ತಿಭಾವ ಮೆರೆದರು.
ರಥೋತ್ಸವ ಅಂಗವಾಗಿ ಬೆಳಗ್ಗೆ ಹುಲುಕುಡಿ ಬೆಟ್ಟದ ಮೇಲಿರುವ ಮೂಲದೇವರಿಗೆ ರುದ್ರಾಭಿಷೇಕದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ರಥಾಂಗ ಹೋಮ, ಶ್ರೀಕ್ಷೇತ್ರದ ಮಹಾದ್ವಾರದ ಬಳಿ ವೀರಗಾಸೆ ಕುಣಿತ, ಮಹಾರಥೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಶ್ರೀಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಹುಲುಕುಡಿ ಶ್ರೀಕ್ಷೇತ್ರದ ಸಮಗ್ರ ಇತಿಹಾಸ ಮತ್ತು ಮಹಿಮೆಯನ್ನು ಸಾರುವ ಅಡಕಮುದ್ರಿಕೆ(ಸಿಡಿ) ಬಿಡುಗಡೆ ಮಾಡಲಾಯಿತು. ದೊಡ್ಡಬಳ್ಳಾಪುರ ಮುಂತಾದ ನಗರಗಳಿಂದ ಶ್ರೀಕ್ಷೇತ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ
ಮಾಗಡಿ: ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಹಸೀಲ್ದಾರ್ ಇಲಾಖೆಯ ಶಿರಸ್ತೇದಾರ್ ಗುರುಲಿಂಗಯ್ಯ ರಥಕ್ಕೆ ಪ್ರಥಮ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
 ಬ್ರಹ್ಮರಥೋತ್ಸವದ ಪ್ರಯುಕ್ತ ದೇವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಹೂವಿನ ಅಲಂಕಾರ ಏರ್ಪಡಿಸಿದ್ದು, ಶಾಸ್ತ್ರೋತ್ತವಾಗಿ ಪೂಜಾ ವಿಧಿವಿಧಾನಗಳನ್ನು ಆಗಮಿಕರು, ಅರ್ಚಕರು ನೆರವೇರಿಸಿದರು.  ಶಾಸಕ ಎಚ್.ಸಿ. ಬಾಲಕೃಷ್ಣ, ಕೆಪಿಸಿಸಿ ಸದಸ್ಯ ಎ. ಮಂಜು, ಪುರಸಭಾ ಸದಸ್ಯರು ಸೇರಿದಂತೆ ಅನೇಕ ಗಣ್ಯರು, ಸಹಸ್ರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಥ ಎಳೆದು ಪುನೀತರಾದರು. ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.    ಶ್ರೀ ಸೋಮೇಶ್ವರಸ್ವಾಮಿ ಅನ್ನಸಂತರ್ಪಣೆ ಸೇವಾ  ಸಮಿತಿ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಜನಪ್ರಿಯ ವಿಜ್ಞಾನ ಬರವಣಿಗೆ ತರಬೇತಿ
ರಾಮನಗರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ರಾಜ್ಯದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರು, ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು, ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆ ಬಗ್ಗೆ ತರಬೇತಿ ಶಿಬಿರವು ಮಾ.6 ರಿಂದ 10ರವರೆಗೆ ಗುಲ್ಬರ್ಗಾ ಜಿಲ್ಲೆಯ ಮರತೂರಿನ ವಿಜ್ಞಾನೇಶ್ವರ ಭವನದಲ್ಲಿ ನಡೆಯಲಿದೆ.
ನುರಿತ ವಿಜ್ಞಾನ ಬರಹಗಾರರು, ಸಂವಹನಕಾರರಿಂದ ಶಿಬಿರಾರ್ಥಿಗಳಿಗೆ ವಿಜ್‌ಞಾನ ಬರವಣಿಗೆಯ ಕುರಿತ ವಿವಿಧ ಕೌಶಲ್ಯ, ಆಕಾರ, ಶಬ್ದ ಬಳಕೆ, ಅನುವಾದ, ವಿಜ್ಞಾನ ಪತ್ರಿಕೋದ್ಯಮ ಇನ್ನಿತರೆ ಅಂಶಗಳಲ್ಲಿ ತರಬೇತಿ ನೀಡಲಾಗುವುದು. ವಿಜ್ಞಾನ ಸಂವಹನದಲ್ಲಿ ವಿಶೇಷ ಆಸಕ್ತಿ ಹೊಂದಿರುವವರು ಶಿಬಿರದಲ್ಲಿ ಭಾಗವಹಿಸಲು ತಮ್ಮ ವ್ಯಕ್ತಿ ವಿವರದೊಂದಿಗೆ ಸ್ವರಚಿತ ಕನ್ನಡ ವೈಜ್ಞಾನಿಕ ಲೇಖನದ ಪ್ರತಿಯೊಂದಿಗೆ ಅರ್ಜಿಯನ್ನು ಡಾ.ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24-2, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಈ ವಿಳಾಸಕ್ಕೆ ಫೆ.20ರೊಳಗೆ ತಲುಪಿಸಬೇಕು. ಮಾಹಿತಿಗೆ ದೂ.080-267186938, 26718939 ಸಂಪರ್ಕಿಸಬಹುದು.
ಜೀತಕ್ಕಿದ್ದ ಏಳು ಜನರ ರಕ್ಷಣೆ
ಬೆಂಗಳೂರು: ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿಯಲ್ಲಿರುವ ಸಿಮೆಂಟ್ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಜೀತಕ್ಕಿದ್ದ ಒಂದೇ ಕುಟುಂಬದ 7 ಜನರನ್ನು ಮಾನವ ಹಕ್ಕುಗಳ ಆಯೋಗ ನೆರವಿನೊಂದಿಗೆ ಎನ್‌ಜಿಓ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಒಡಿಶಾ ಮೂಲದ ಅಮರ್ ಸತ್ನಮಿ (45) ಪತ್ನಿ ಅನ್ಲಾ ಸತ್ನಮಿ(35), ಮಕ್ಕಳಾದ ಭವಾನಿ (13), ಶಿವಾ (12), ದ್ರೌಪದಿ (10), ದುಲೇನಿ (7) ಹಾಗೂ ವೈಷ್ಣವಿ ಎಂಬುವರನ್ನು ಕಣ್ಣೂರಹಳ್ಳಿ ಎಸ್‌ಎಸ್‌ಬಿ ಇಟ್ಟಿಗೆ ಕಾರ್ಖಾನೆಯಿಂದ ರಕ್ಷಿಸಲಾಗಿದೆ.  ಮುನಿಯಪ್ಪ ಎಂಬುವರಿಗೆ ಸೇರಿದ ಕಾರ್ಖಾನೆಯಲ್ಲಿ ಕಳೆದ 8 ತಿಂಗಳಿಂದ 7 ಜನ ಜೀತಕ್ಕೆ ಇದ್ದರು.  ಒಡಿಶಾದಲ್ಲಿದ್ದ ಈ ಕುಟುಂಬವನ್ನು ಮಧ್ಯವರ್ತಿಯೊಬ್ಬ ಬೆಂಗಳೂರಿಗೆ ಕರೆ ತಂದಿದ್ದ. 6 ತಿಂಗಳ ಕಾಲ ಐವರು ಕೆಲಸ ಮಾಡಿದರೆ 52 ಸಾವಿರ ನೀಡುವುದಾಗಿ ಮುನಿಯಪ್ಪ ಒಪ್ಪಂದ ಮಾಡಿಕೊಂಡಿದ್ದ.
ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ
ಕನಕಪುರ: ಕನಕಪುರ ತಾಲೂಕು ಕಲ್ಲಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಮಾನಹಳ್ಳಿ ರತ್ನಮ್ಮ ದ್ವಿತೀಯ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ರಾಜಿನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಾಮಾನ್ಯ ಮಹಿಳಾ ಮೀಸಲಾತಿಯ ಸ್ಥಾನಕ್ಕೆ ರತ್ನಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದಾಗಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಗಳಾಗಿ ಯೋಜನಾಪ್ರಾಧಿಕಾರದ ನಿರ್ದೇಶಕ ಎಂ.ವಿ. ಶ್ರೀನಾಥ್ ಕಾರ್ಯ ನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ರಾಜಣ್ಣ ಕಲಾಪಗಳನ್ನು ನಿರ್ವಹಿಸಿದರು.
ನೂತನ ಅಧ್ಯಕ್ಷೆ ರತ್ನಮ್ಮ ತಮ್ಮ ಆಯ್ಕೆಯನ್ನು ಬೆಂಬಲಿಸಿದ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಪ ಮಾಜಿ ಸದಸ್ಯ ಎಸ್.ರವಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡುತ್ತಾ, ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳ ಅನುಷ್ಠಾನ ಹಾಗೂ ಸರ್ಕಾರಿ ಸವಲತ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ಆದ್ಯತೆ ನೀಡಲಾಗುವುದು ಎಂದರು.
ಇಂದು ದೇಗುಲ ಶತಕುಂಭಾಭಿಷೇಕ
ದೊಡ್ಡಬಳ್ಳಾಪುರ: ಇಲ್ಲಿನ ಕಂಟನಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀರೇಣುಕಾ ಎಲ್ಲಮ್ಮ ದೇವಾಲಯದ ವಿಮಾನಗೋಪುರ, ಶಿಲಾದೀಪ ಸ್ತಂಭ ಉದ್ಘಾಟನೆ ಮತ್ತು ಶತಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಫೆ.7ರಿಂದ 9ರವರೆಗೆ 3 ದಿನಗಳ ಕಾಲ ನಡೆಯಲಿದೆ. ಸಿದ್ದಗಂಗಾ ಮಠದ ಶ್ರೀಶಿವಕುಮಾರಸ್ವಾಮೀಜಿ, ಆದಿಚುಂಚನಗಿರಿಮಠದ ಶ್ರೀನಿರ್ಮಲಾನಂದಸ್ವಾಮೀಜಿ, ಕಾಗಿನೆಲೆ ಗುರುಪೀಠದ ಶ್ರೀಈಶ್ವರಾನಂದಸ್ವಾಮೀಜಿ, ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದಸ್ವಾಮೀಜಿ, ಮೇಲಣಗವಿಯ ಶ್ರೀಮಲಯ ಶಾಂತಮುನಿ ಸ್ವಾಮೀಜಿ, ವಿಭೂತಿಪುರ ಸಂಸ್ಥಾನ ಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವ ಕಲ್ಯಾಣ ಮಠದ ಮಹದೇವಸ್ವಾಮೀಜಿ, ಕಾಶಿವಿಶ್ವೇಶ್ವರಸ್ವಾಮಿ ದೇಗುಲ ಧರ್ಮದರ್ಶಿ ಎ.ವಿ.ಕೃಷ್ಣಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
15ರಂದು ತಾಲೂಕು ಪಂಚಾಯಿತಿ ಸಭೆ
ರಾಮನಗರ: ರಾಮನಗರ ತಾಲೂಕು ಪಂಚಾಯಿತಿಯ 13ನೇ ಸರ್ವಸದಸ್ಯರ ಸಾಮಾನ್ಯ ಸಭೆಯು ತಾ.ಪಂ. ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಫೆ.15ರ ಬೆಳಗ್ಗೆ 11ಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಕಾರು ಚಾಲನಾ ತರಬೇತಿಗೆ ಅರ್ಜಿ
ರಾಮನಗರ: 2013-14ನೇ ಸಾಲಿಗೆ ತಾಲೂಕಿನ ಪರಿಶಿಷ್ಟ ವರ್ಗದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಕಾರು ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಫೆ.25ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಖುದ್ದಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.080-27272214 ಸಂಪರ್ಕಿಸಬಹುದು.
14ರಂದು ಒಂದು ದಿನದ ಕಾರ್ಯಾಗಾರ
ರಾಮನಗರ: ಉದ್ಯೋಗ ವಿನಿಮಯ ಕೇಂದ್ರಗಳ ಸಾಂಖ್ಯಿಕ ಚಟುವಟಿಕೆಗಳ ಗುಣಮಟ್ಟವನ್ನು ವೃದ್ಧಿಸುವ ಅಂಗವಾಗಿ ಜಿಲ್ಲಾ ವ್ಯಾಪ್ತಿಯ ಉದ್ದಿಮೆದಾರರು ಹಾಗೂ ನಿಯೋಜಕರುಗಳಿಗೆ ಫೆ.14ರ ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಹೇಮಚಂದ್ರ ತಿಳಿಸಿದ್ದಾರೆ.
ಡಿಕ್ಕಿ: ಮೊಪೆಡ್ ಸವಾರ ಸಾವು
ರಾಮನಗರ: ಚಲಿಸುತ್ತಿದ್ದ ಮೊಪೆಡ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದ ಕುಂಭಾಪುರ ಗೇಟ್ ಬಳಿ ಗುರುವಾರ ನಡೆದಿದೆ.  ಕನ್ನಮಂಗಲದೊಡ್ಡಿ ಗ್ರಾಮದ ಪುಟ್ಟಸ್ವಾಮಯ್ಯ(50) ಮೃತ ವ್ಯಕ್ತಿ. ಕೆಲಸದ ನಿಮಿತ್ತ ರಾಮನಗರಕ್ಕೆ ತೆರಳಿದ್ದ ಇವರು ಸ್ವಗ್ರಾಮಕ್ಕೆ ವಾಪಸಾಗಲು ಕುಂಭಾಪರ ಗೇಟ್ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೊಪೆಡ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಪುಟ್ಟಸ್ವಾಮಯ್ಯ ಸ್ಥಳದಲ್ಲೇ ಮೃತಪಟ್ಟರು.
ದಾಳಿ: ಮದ್ಯ ನಾಶ
ಮಾಗಡಿ: ತಾಲೂಕಿನ ವಿವಿಧೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಲಕ್ಷಾಂತರು ರು. ಮೌಲ್ಯದ ಮದ್ಯವನ್ನು ತಹಸೀಲ್ದಾರ್ ಶಿವಕುಮಾರ್ ಮತ್ತು ಅಬಕಾರಿ ಜಿಲ್ಲಾ ಉಪ ಅಧೀಕ್ಷರಾದ ನರೇಂದ್ರಕುಮಾರ್ ನೇತ್ವದಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೋಲೂರಿನ ವಿಡ್ಸರ್ ಡಿಸ್ಟಿಲರಿ ಬಳಿ ಗುರುವಾರ ನಾಶಪಡಿಸಿದರು. ಕಳೆದ 4 ವರ್ಷಗಳಿಂದ ತಾಲೂಕಿನ ವಿವಿಧೆಡೆ ವಶಪಡಿಸಿಕೊಂಡಿದ್ದ   ಸುಮಾರು 993.830 ಲೀಟರ್ ವೈನ್, 51.660 ಲೀಟರ್ ಬಿಯರ್ ಹಾಗೂ 308.240 ಲೀಟರ್ ಕಳ್ಳಭಟ್ಟಿ ಸೇಂದಿಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನಾಶ ಪಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.