ಭೂಸ್ವಾಧೀನ ಮಾಡಿಕೊಂಡ ರೈತರ ಜಮೀನಿಗೆ ಸೂಕ್ತ ಪರಿಹಾರ
ಮಾಗಡಿ: ಮಾಗಡಿ-ಗುಡೇಮಾರನಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ರೈತರಿಂದ ಸರ್ಕಾರ ಭೂಸ್ವಾಧೀನ ಮಾಡಿಕೊಂಡಿದ್ದು, ಅಗತ್ಯ ಪರಿಹಾರ ಕೊಡಿಸುವುದಾಗಿ ಜಿಲ್ಲಾ ಉಪವಿಭಾಗಾಧಿಕಾರಿ ಸಿದ್ದಯ್ಯ ತಿಳಿಸಿದರು.
ಅವರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭೂಸ್ವಾಧೀನವಾಗಿರುವ ರೈತರ ಸಭೆ ಕರೆದು ಮಾತನಾಡುತ್ತಾ ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಸರ್ಕಾರ ರೈತರ ಭೂ ಸ್ವಾಧೀನಪಡಿಸಿಕೊಂಡಿದೆ. ಆದರೆ ರೈತರಲ್ಲಿ ಅಗತ್ಯ ದಾಖಲೆಗಳ ಕೊರತೆಯಿಂದ ಪರಿಹಾರ ನೀಡಲು ವಿಳಂಬವಾಗಿರಬಹುದು. ಆದರೂ ನಿಮ್ಮ ಭೂಮಿಯ ದಾಖಲೆಗಳನ್ನು ಸರಿಪಡಿಸಿಕೊಡುವ ಮೂಲಕ ಎಲ್ಲರಿಗೂ ಸೂಕ್ತ ಪರಿಹಾರ ಕೊಡಿಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಕಳೆದ 2 ವರ್ಷಗಳ ಹಿಂದೆ ರಸ್ತೆ ಕಾಮಗಾರಿಗೆ ರೈತರ ಭೂಸ್ವಾದೀನ ಮಾಡಿಕೊಂಡಿದ್ದು, ಅಗತ್ಯ ದಾಖಲೆ ಒದಗಿಸಿದರೂ ಇಲ್ಲಿಯವರೆಗೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಕೆಶಿಪ್ ಕಾರ್ಯವೈಕರಿ ಕುರಿತು ರೈತರು ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮಾಗಡಿ ಗುಡೇಮಾರನಹಳ್ಳಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ರಸ್ತೆ ಬದಿ ಇರುವ ರೈತರ ತೋಟಗಳು ಧೂಳು ಹಿಡಿದು ಬೆಳೆ ನಷ್ಟವಾಗಿದೆ. ಈ ಸಂಬಂಧ ಎಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟ ವಿಚಾರಿಸಿಲ್ಲ. ಹೇಳಿ ಕೇಳಿ ಮಾಗಡಿ ಗುಡ್ಡಗಾಡು ಪ್ರದೇಶ, ಮಳೆಯಾಶ್ರಿತ ಭೂಮಿಯಾಗಿದ್ದು, ಬರಡುಭೂಮಿಯಲ್ಲಿ ಕಷ್ಟಪಟ್ಟು ದುಡಿದು ಜೀವಿಸುತ್ತಿದ್ದೆವು. ಆದರೆ ರಸ್ತೆ ವಿಸ್ತರಣೆಗಾಗಿ ಎಂದು ನಮ್ಮ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಂಡು ಎರಡು ವರ್ಷಗಳು ಕಳೆದರೂ ಯಾವುದೇ ಪರಿಹಾರ ನೀಡಿಲ್ಲ. ಹೀಗಾದರೆ ರೈತರ ಸಂಕಷ್ಟ ಕೇಳುವವರು ಯಾರು ಎಂದು ರೈತ ವೀರಭದ್ರಪ್ಪ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ಮಾತನಾಡಿ ನಿಮ್ಮ ಭೂಮಿಯ ಸಮಸ್ಯೆಗಳಿಗೆ ಉಪವಿಭಾಗಾಧಿಕಾರಿ ಸೂಕ್ತ ಪರಿಹಾರ ಕಂಡು ಹಿಡಿಯುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂದು ರೈತರಿಗೆ ಭರವಸೆ ನೀಡಿದರು. ತಹಸೀಲ್ದಾರ್ ಶಿವಕುಮಾರ್, ಕೆಶಿಪ್ ಅಧಿಕಾರಿ ಪ್ರಶಾಂತ್ಕುಮಾರ್, ಎಂಜಿನಿಯರ್, ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

