ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಬಳಿ ಹಾಲು ಪ್ಯಾಕಿಂಗ್ ಘಟಕಕ್ಕೆ ಶೀಘ್ರ ಚಾಲನೆ

Published On :

ಸೂಲಿಬೆಲೆ: ಹೊಸಕೋಟೆ ಬಳಿ ಇರುವ ಹಾಲು ಶೀಥಲ ಕೇಂದ್ರದ ಮಾದರಿಯಲ್ಲಿಯೇ ರು.43 ಕೋಟಿ ವೆಚ್ಚದಲ್ಲಿ ಹಾಲು ಪ್ಯಾಕಿಂಗ್ ಘಟಕವನ್ನು ತೆರೆಯಲಾಗುತ್ತಿದ್ದು, ಪ್ರತಿ ನಿತ್ಯ 3 ಲಕ್ಷ  ಹಾಲು ಪ್ಯಾಕೆಟ್ ತಯಾರಿಸುವ ಸಾಮಥ್ಯ ಹೊಂದಿರುವ ಈ ಘಟಕ ಶೀಘ್ರ ಚಾಲನೆಗೊಳ್ಳಲಿದೆ.
ಇದರಿಂದ ಹೈನುಗಾರಿಕೆಯ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್ ಹೇಳಿದ್ದಾರೆ.
ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿ ಡೈರಿವತಿಯಿಂದ ಹಮ್ಮಿಕೊಂಡಿದ್ದ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಸಿಗೆಯಲ್ಲಿ ಒಕ್ಕೂಟಕ್ಕೆ ಪ್ರತಿನಿತ್ಯ 10 ಲಕ್ಷ 66 ಸಾವಿರ ಲೀ.ಹಾಲು ಪೂರೈಕೆಯಾಗುತ್ತಿದ್ದು, ಇದರಲ್ಲಿ 9.50 ಲಕ್ಷ ಮಾತ್ರ ಪ್ಯಾಕಿಂಗ್ ರೂಪದಲ್ಲಿ ಮಾರಾಟವಾಗುತ್ತಿದೆ. ಇನ್ನುಳಿದ 1 ಲಕ್ಷ ಲೀ.ಹಾಲನ್ನು ಪೌಡರ್ ರೂಪುದಲ್ಲಿ ಮಾರಾಟವಾಗುತ್ತಿದೆ. 1 ಲೀ.ಪೌಡರ್ಗೆ ರು.6 ನಷ್ಚವಾಗುತ್ತಿದೆ. ಆದರೂ ರೈತರಿಗೆ ಉತ್ತಮ ದರ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿ ವರ್ಷದ ರೈತರಿಗೆ ಒಕ್ಕೂಟ ಪ್ರೋತ್ಸಾಹ ಧನ ನೀಡುತ್ತಿದೆ. ರಾಷ್ಚ್ರೀಯ ಬೀಮಾ ಯೋಜನೆ, ಯಶಸ್ವಿನಿ ಹಾಗೂ ವಿಮೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಒಕ್ಕೂಟದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡುತ್ತಿರುವುದಲ್ಲದೇ 6 ಲಕ್ಷ ವೆಚ್ಚದಲ್ಲಿ ಹೊಸಕೋಟೆ ತಾ.ನಾನಾ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಯಂತ್ರಗಳನ್ನು ವಿತರಣೆ ಮಾಡಲಾಗುವದು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್. ಗೋಪಾಲಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಕುಸಿತದಿಂದ ರೈತರ ಬದುಕು ದುರ್ಬರಗೊಳ್ಳುತ್ತಿದೆ. ಜಿಲ್ಲೆಗೊಂದು ಶಾಶ್ವತ ನೀರಾವರಿ ಸೌಲಭ್ಯ ಬೇಕಾಗಿದೆ.ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿ ಎತ್ತಿನಹೊಳೆ ಯೋಜನೆ ತರುತ್ತೇನೆ ಎಂದು ಜನರ ಕಿವಿಯಲ್ಲಿ ಹೂ ಇಟ್ಟರೇ ಹೊರತು ನೀರು ತರಲಿಲ್ಲ. ಈಗ ಚುನಾವಣೆ ವೇಳೆಯಲ್ಲಿ ಮತ್ತೇ ಎತ್ತಿನ ಹೊಳೆ ಜಪ ಮಾಡುತ್ತಿದ್ದಾರೆ. ಮತದಾರರು ಇದನ್ನು ನಂಬದೆ  ಈ ಬಾರಿ ಬಚ್ಚೇಗೌಡರನ್ನು ಬೆಂಬಲಿಸುವಂತೆ ಕೋರಿದರು. ಬಮೂಲ್ ಪ್ರಧಾನ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಮಾತನಾಡಿ, ಉತ್ತಮ ರಾಸುಗಳನ್ನು ಸಾಕುವುದರ ಜತೆ ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂಥ ಕಾರ್ಯಗಳಿಗೆ  ರೈತರು ತಮ್ಮ ರಾಸುಗಳನ್ನು ತಂದು ಪ್ರದರ್ಶನ ಮಾಡುವ ಮುಖೇನ ಜಾಗೃತಿಯ ಅರಿವು ಮೂಡಿಸಲಾಗುತ್ತಿದೆ ಎಂದರು.
ಇದೇ ವೇಳೆ ಮಿಶ್ರ ತಳಿ ರಾಸು, ಕರುಗಳು, ಪಡ್ಡೆ ಕರುಗಳಲ್ಲಿ ಉತ್ತಮವಾಗಿರುವದನ್ನು ಆಯ್ಕೆ ಮಾಡಿ ರೈತರಿಗೆ ಬಹುಮಾನಗಳನ್ನು ನೀಡಲಾಯಿತು. ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಮೂಲ್ ಉಪ ವ್ಯವಸ್ಥಾಪಕ ರಾಘವನ್, ಶ್ರೀನಿವಾಸ್, ವಿಜಯಭಾಸ್ಕರ್, ವೆಂಕಟೇಶಪ್ಪ, ನಾರಾಯಣಸ್ವಾಮಿ ಸೇರಿದಂತೆ ಆನೇಕ ಅಧಿಕಾರಿ ವರ್ಗದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.