ಜಲಾನಯನ ಮಿತ್ರರ ನಿಯೋಜನೆ: ಅಶೋಕ್
ರಾಮನಗರ: ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಗೆ ನೆರವಾಗಲು ಜಲಾನಯನ ಮಿತ್ರರನ್ನು ನಿಯೋಜಿಸಲಾಗಿದ್ದು, ಅವರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಜಲಾನಯನ ಇಲಾಖೆಯ ಉಪ ನಿರ್ದೇಶಕ ಅಶೋಕ್ ಹೇಳಿದರು.
ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಜಲಾನಯನ ಇಲಾಖೆಯು ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯು 5 ವರ್ಷದ ಅವಧಿಯದ್ದಾಗಿದ್ದು, ಭೂ ಸವೆತವನ್ನು ತಡೆಗಟ್ಟಿ, ಮಳೆ ನೀರನ್ನು ಜಮೀನಿನಲ್ಲಿ ಶೇಖರಿಸುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಹೊಲದಲ್ಲೇ ಇಂಗಿಸುವುದು ಹಾಗೂ ಭೂಮಿಯನ್ನು ಹಂತ ಹಂತವಾಗಿ ಫಲವತ್ತತೆಗೊಳಿಸಲು ವಿವಿಧ ಬೆಳೆಗಳನ್ನು ಬೆಳೆಸುವಂತೆ ಉತ್ತೇಜಿಸುವುದು ಈ ಯೋಜನೆಯ ಇನ್ನೊಂದು ಉದ್ದೇಶವಾಗಿದೆ. ಬದು ನಿರ್ಮಾಣ, ಸಣ್ಣ ಕೃಷಿ ಹೊಂಡ ನಿರ್ಮಾಣ, ಕೊರಕಲು ತಡೆ, ಹಾಗೂ ಚೆಕ್ ಡ್ಯಾಂಗಳ ನಿರ್ಮಾಣ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯ 4 ಮುಖ್ಯ ಹಂತಗಳಾಗಿವೆ ಎಂದು ಅವರು ವಿವರಿಸಿದರು. ಕೃಷಿ ಭೂಮಿಯ ಮೇಲೆ ಬಿದ್ದ ಮಳೆ ಹರಿದು ಹೋಗುವುದನ್ನು ತಡೆಯಲು ಇಳಿಜಾರಿಗೆ ಅಡ್ಡಲಾಗಿ ಟ್ರಂಚ್ಗಳನ್ನು ನಿರ್ಮಿಸಲಾಗುತ್ತದೆ. ಟ್ರಂಚ್ಗಳ ಪಕ್ಕದಲ್ಲೇ ಬದುಗಳನ್ನು ನಿರ್ಮಿಸಿ ಅವುಗಳ ಮೇಲೆ ತೇಗ, ಹೆಬ್ಬೇವು, ಹೊಂಗೆ, ಹಿಪ್ಪೆಗಳಂತಹ ಅರಣ್ಯ ಗಿಡಗಳನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಬದುವಿನ ಪಕ್ಕದಲ್ಲಿ ತೆಂಗು, ಮಾವು, ಸೀಬೆ, ಸಪೋಟದಂತಹ ತೋಟಗಾರಿಕೆ ಗಿಡಗಳ ಜತೆಗೆ ಕುಂಬಳಕಾಯಿ, ನುಗ್ಗೆ, ಹಾಗಲಕಾಯಿ, ಸೌತೆಕಾಯಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಸಿ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಸಹಕರಿಸುವುದು ಯೋಜನೆಯಲ್ಲಿ ಅಡಕವಾಗಿದೆ ಎಂದು ಅಶೋಕ್ ವಿವರಿಸಿದರು.
ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ರು.2 ಕೋಟಿ ಮಂಜೂರು ಮಾಡಿದ್ದು, ಆಯ್ಕೆಯಾದ ಫಲಾನುಭವಿಗಳ ಜಮೀನನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿ ಹೆಕ್ಟೇರ್ಗೆ ರು.12 ಸಾವಿರ ಖರ್ಚು ಮಾಡಲಾಗುವುದು. ಇದರಲ್ಲಿ ರು.7200 ಅಭಿವೃದ್ಧಿಗೆ ಹಾಗೂ ರು.4800 ಆಡಳಿತದ ಖರ್ಚು-ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು. ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಜಲಾನಯನ ಸಮಿತಿಗಳನ್ನು ರಚಿಸಿ ಉಸ್ತುವಾರಿಯನ್ನು ನೀಡಲಾಗುವುದು ಎಂದರು.
ಯೋಜನೆಯನ್ನು ತೋಟಗಾರಿಕೆ, ಕೃಷಿ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳ ಸಹಭಾಗಿತ್ವದಲ್ಲಿ ಜಲಾನಯನ ಇಲಾಖೆ ಅನುಷ್ಠಾನಗೊಳಿಸಲಿದ್ದು, ಜಮೀನುಗಳಲ್ಲಿ ನಿರ್ಮಿಸಲಾದ ಸಣ್ಣ ಹೊಂಡಗಳಲ್ಲಿ ಶೇಖರಣೆಯಾಗುವ ನೀರಿನಿಂದ ದೊರಕುವ ಉಪಯುಕ್ತತೆಗಳ ಬಗ್ಗೆ ಕಾರ್ಯಾಗಾರದಲ್ಲಿ ವಿವರ ನೀಡಿದರು.
ಸ್ಥಳೀಯ ರೈತರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃಷಿ ಅಭಿವೃದ್ಧಿಯಲ್ಲಿ ಮಣ್ಣು ನೀರು ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ರೈತರು ತಮ್ಮ ಜಮೀನುಗಳನ್ನು ಯೋಜನೆಯಡಿ ಇಲಾಖೆ ಮುಖೇನ ಅಥವಾ ತಾವೇ ಸ್ವತಃ ಅಭಿವೃದ್ಧಿಪಡಿಸಿಕೊಳ್ಳಬಹುದು. ಇಲ್ಲವೇ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಬಹುದು, ಜಿಲ್ಲೆಯ ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಅಶೋಕ್ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

