ಅಂತೂ ಪುರಪಿತೃಗಳಿಗೆ ಸಿಕ್ತು ಅಧಿಕಾರ 'ಭಾಗ್ಯ'
ಮತ್ತೀಕೆರೆ ಜಯರಾಮ್
ರಾಮನಗರ: ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯ ಬಂತು ಎನ್ನುವಂತೆ ಆಯ್ಕೆಗೊಂಡು ಇನ್ನೇನು ವರ್ಷ ತುಂಬುವಾಗ ಪುರಪಿತೃಗಳಿಗೆ ಅಧಿಕಾರ ಭಾಗ್ಯ ಪ್ರಾಪ್ತಿಗೆ ಕಾಲ ಕೂಡಿ ಬಂದಿದೆ. ಅಧಿಕಾರಿಗಳ ದರ್ಬಾರ್ ಕೂಡ ಅಂತ್ಯ ಕಾಣಲಿದೆ.
ಪೌರ ಸಂಸ್ಥೆಗಳಿಗೆ 2013ರ ಮಾ.7 ರಂದು ಚುನಾವಣೆ ನಡೆದು, ಮಾ.11ಕ್ಕೆ ಫಲಿತಾಂಶ ಪ್ರಕಟವಾಗಿತ್ತು.
ಈ ಪ್ರಕ್ರಿಯೆಗೆ ಇನ್ನೆರಡು ವಾರ ಕಳೆದರೆ ಬರೋಬ್ಬರಿ ಒಂದು ವರ್ಷ ತುಂಬಲಿದೆ. ಇದೀಗ ಅಧಿಕಾರ ಚಲಾವಣೆಗೆ ಅವಕಾಶ ಸಿಗುವಂತಾಗಿದೆ. ಮೀಸಲು ವಿಷಯವಾಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಎಲ್ಲ ನಾಲ್ಕೂ ಪೌರ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿರಲಿಲ್ಲ. ಈಗ ತಡೆಯಾಜ್ಞೆ ತೆರವುಗೊಂಡಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ಮೀಸಲಿನಡಿಯೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸಲು ಹೈಕೋರ್ಟ್ ಆದೇಶಿಸಿದೆ. ಇದಾಗಿ ಎರಡು ದಿನ ಕಳೆದರೂ ಚುನಾವಣೆ ನಡೆಸುವ ಬಗ್ಗೆ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ನಿರ್ದೇಶನ ಬಂದಿಲ್ಲ.
ನಿರ್ಲಕ್ಷ್ಯ ಕಾರಣ: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆಯೇ ಬಹುತೇಕ ಜಿಲ್ಲೆಗಳಲ್ಲಿ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ನೆರೆಯ ಮಂಡ್ಯ ಜಿಲ್ಲೆಯ ಎಲ್ಲ 7 ಪೌರ ಸಂಸ್ಥೆಗಳಿಗೆ ನಿಗದಿಯಂತೆ ಚುನಾವಣೆಯೂ ನಡೆಯಿತು. ಆದರೆ, ಚುನಾವಣೆಗೆ ಅಧಿಸೂಚನೆ ಹೊರಡಿಸದ ಪೌರ ಸಂಸ್ಥೆಗಳಿಗೆ ಮಾತ್ರವೇ ಹೈಕೋರ್ಟ್ ತಡೆಯಾಜ್ಞೆ ಅನ್ವಯವಾಗಿತ್ತು.
ಒಂದೊಮ್ಮೆ ರಾಮನಗರ ಜಿಲ್ಲಾಡಳಿವೂ ಸಕಾಲದಲ್ಲಿ ಅಧಿಸೂಚನೆ ಹೊರಡಿಸಿ, ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದ್ದರೆ ಇಲ್ಲಿನ ತಲಾ 2 ನಗರಸಭೆ ಮತ್ತು ಪುರಸಭೆಗಳು ಆಡಳಿತಾಧಿಕಾರಿಗಳ ಮುಷ್ಠಿಯಲ್ಲಿ ಒಂದು ವರ್ಷ ದಾಟುವಂತಿರಲಿಲ್ಲ.
ಅರಾಜಕತೆ ಅಂತ್ಯ: ಚುನಾಯಿತ ಪ್ರತಿನಿಧಿಗಳ ಆಡಳಿತದಲ್ಲೇ ಅಭಿವೃದ್ಧಿ ಮಕಾಡೆ ಮಲಗಿ, ಮೂಲ ಸೌಲಭ್ಯಗಳಿಲ್ಲದೆ ನಾಗರಿಕರು ಪರಿತಪಿಸುವ ಸ್ಥಿತಿ ಮಾಮೂಲು. ಇನ್ನು ಆಡಳಿತಾಧಿಕಾರಿಗಳ ಹಿಡಿತದಲ್ಲಿ ಸ್ಥಳೀಯ ಸಂಸ್ಥೆಗಳು
ಇದ್ದರಂತೂ ಅಲ್ಲಿನ ಜನರ ಕತೆ ಮುಗಿದಂತೆಯೇ. ಕಳೆದ ಒಂದು ವರ್ಷದಿಂದಲೂ ನಾಲ್ಕೂ ಪೌರ ಸಂಸ್ಥೆಗಳಲ್ಲಿ ಅಭಿವಣದ್ಧಿ ಎಳ್ಳಷ್ಟೂ ನಡೆದಿಲ್ಲ. ನಾಗರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮಾತು ಹಾಗಿರಲಿ. ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರಿನ ಸರಬರಾಜು ಕೂಡ ಇಲ್ಲದಾಗಿದೆ.
ಆಡಳಿತಾಧಿಕಾರಿಗಳ ಅವಧಿಯಲ್ಲಿ ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರುಬಾರು ಬಲು ಜೋರಾಗಿಯೇ ನಡೆದಿದೆ. ಕಚೇರಿಗಳಲ್ಲಿ ಹೇಳೋರು, ಕೇಳೋರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಅರಾಜಕತೆ ಎಷ್ಟು ಬೇಗ ತೊಲಗುತ್ತದೋ ಎಂದು ಜನರು ಕಾಯುತ್ತಿದ್ದರು.
112 ಮಂದಿಗೆ ಅಧಿಕಾರ: ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಸಭೆಯಿಂದಲೇ ಅಲ್ಲಿನ 5 ವರ್ಷದ ಅಧಿಕಾರಾವಧಿ ಪ್ರಾರಂಭವಾಗುತ್ತದೆ. ಹೀಗಾಗಿ ಜಿಲ್ಲೆಯ 4 ಪೌರ ಸಂಸ್ಥೆಗಳ 112 ಪುರಪಿತೃಗಳ ಅಧಿಕಾರಾವಧಿ ಮೊದಲ ಸಭೆಯಿಂದ ಪರಿಗಣಿಸಲ್ಪಡುತ್ತದೆ.
ಚುನಾಯಿತ ಪ್ರತಿನಿಧಿಗಳ ಪೈಕಿ ಕೆಲವರು ಅನಧಿಕೃತವಾಗಿಯೇ ಅಧಿಕಾರ ಚಲಾವಣೆ ಮಾಡಿದ್ದರೆ, ಹಲವರು ತಮಗಿನ್ನೂ ಅಧಿಕಾರವೇ ಸಿಕ್ಕಿಲ್ಲವೆಂದು ಮತದಾರರ ಬಳಿ ಹೇಳಿಕೊಂಡು ಕಾಲ ದೂಡಿದ್ದಾರೆ. ಇನ್ನು ಕೆಲವರು ಪೌರ ಸಂಸ್ಥೆ ಹೊಸ್ತಿಲು ತುಳಿದೇ ಇಲ್ಲ.
ಕಾಂಗ್ರೆಸ್ ಮೇಲು
ಜಿಲ್ಲೆಯ 112 ಸ್ಥಾನಗಳ ಪೈಕಿ ಕಾಂಗ್ರೆಸ್ 65, ಜೆಡಿಎಸ್ 40, ಬಿಜೆಪಿ 2, ಬಿಎಸ್ಸಾರ್ 1, ಪಕ್ಷೇತರರು 4 ಇದ್ದಾರೆ. ಕನಕಪುರ ಮತ್ತು ಮಾಗಡಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದ್ದು, ಅಧಿಕಾರ ಚುಕ್ಕಾಣಿಗೆ ಯಾವುದೇ ಅಡ್ಡಿಯಿಲ್ಲ. ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿವೆ. ಎರಡೂ ಕಡೆ ತೀವ್ರ ಪೈಪೋಟಿ ಎದುರಾಗಿದ್ದು, ಕುದುರೆ ವ್ಯಾಪಾರವೂ ಪ್ರಾರಂಭವಾಗಿದೆ. ಈ ನಗರಸಭೆಗಳಲ್ಲಿ ಲಕ್ಷ್ಮಿ ಯಿಂದ ವಿಜಯ ನಿರ್ಧಾರ.
ವರಿಷ್ಠ ಸ್ಥಾನಗಳ ಮೀಸಲು ವಿವರ
ರಾಮನಗರ ಜಿಲ್ಲೆಯ ಪೌರ ಸಂಸ್ಥೆವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲು ವಿವರ ಕ್ರಮವಾಗಿ ಇಂತಿದೆ. ರಾಮನಗರ ಸಾಮಾನ್ಯ, ಹಿಂದುಳಿದ ವರ್ಗ ಎ. ಚನ್ನಪಟ್ಟಣ ಸಾಮಾನ್ಯ ಮಹಿಳೆ, ಸಾಮಾನ್ಯ. ಕನಕಪುರ ಹಿಂದುಳಿದ ವರ್ಗ ಎ, ಸಾಮಾನ್ಯ ಮಹಿಳೆ. ಮಾಗಡಿ ಹಿಂದುಳಿದ ವರ್ಗ ಎ ಮಹಿಳೆ, ಸಾಮಾನ್ಯ.
ಆದೇಶ ತಲುಪಿಲ್ಲ
ಪೌರ ಸಂಸ್ಥೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಹಳೆಯ ಮೀಸಲಿನಡಿ ಚುನಾವಣೆ ನಡೆಸುವ ಕುರಿತು ಸರ್ಕಾರದಿಂದ ಈವರೆಗೆ ಆದೇಶ ತಲುಪಿಲ್ಲ. ಆದೇಶ ಬಂದ ತಕ್ಷಣ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
ಟಿ ಡಾ.ಡಿ.ಎಸ್.ವಿಶ್ವನಾಥ್, ಜಿಲ್ಲಾಧಿಕಾರಿ, ರಾಮನಗರ.
ಸಂಸ್ಥೆಗಳಲ್ಲಿ ಬಲಾಬಲ
31 ಸದಸ್ಯ ಬಲದ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 12, ಬಿಜೆಪಿ 2, ಪಕ್ಷೇತರ 1 ಇದ್ದಾರೆ. ಚನ್ನಪಟ್ಟಣ ನಗರಸಭೆಯ 31 ಸ್ಥಾನಗಳಲ್ಲಿ ಜೆಡಿಎಸ್ 16, ಕಾಂಗ್ರೆಸ್ 13, ಬಿಎಸ್ಆರ್ ಕಾಂಗ್ರೆಸ್ ಮತ್ತು ಪಕ್ಷೇತರ ತಲಾ 1 ಸದಸ್ಯರು ಆಯ್ಕೆಯಾಗಿದ್ದಾರೆ.
27 ಸದಸ್ಯ ಬಲವಿರುವ ಕನಕಪುರ ಪುರಸಭೆಯಲ್ಲಿ ಕಾಂಗ್ರೆಸ್ 23, ಜೆಡಿಎಸ್ 4, ಪಕ್ಷೇತರ 1 ಇದ್ದಾರೆ. ಮಾಗಡಿ ಪುರಸಭೆಯ ಒಟ್ಟು ಸದಸ್ಯ ಸ್ಥಾನಗಳು 23 ಆಗಿದ್ದು, ಕಾಂಗ್ರೆಸ್ 14, ಜೆಡಿಎಸ್ 8 ಮತ್ತು ಪಕ್ಷೇತರ 1 ಸದಸ್ಯ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

