ಬೆಂಗಳೂರು ಗ್ರಾಮಾಂತರ

ತಂತ್ರಜ್ಞಾನ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಸಿದ್ಧಗೊಳಿಸಿ

Published On :

ರಾಮನಗರ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ವೇಗಕ್ಕೆ ತಕ್ಕಂತೆ ನಮ್ಮ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ, ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.  
ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಮೊದಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳ ಅರಿವು ಹೊಂದಬೇಕು. ಅದನ್ನು ಪಠ್ಯಕ್ರಮದ ಜತೆಗೆ ಮಕ್ಕಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಸ್ಪರ್ಧೆಗೆ ಅಣಿಗೊಳಿಸಿ: ಹಿಂದಿನ ದಿನಗಳಲ್ಲಿ ಮಕ್ಕಳು ತಾಲೂಕು, ಜಿಲ್ಲಾ ಮಟ್ಟದಲ್ಲಷ್ಟೇ ಸ್ಪರ್ಧೆ ಎದುರಿಸಬೇಕಿತ್ತು. ಪ್ರಸ್ತುತ ಜಾಗತೀಕರಣ ವ್ಯವಸ್ಥೆಯಲ್ಲಿ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನಡೆಸಬೇಕಿದೆ. ಮುಂದುವರೆದ ದೇಶಗಳ ಮಕ್ಕಳ ಜತೆ ಸೆಣೆಸಲು ನಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದರು.
ಮಕ್ಕಳು ಉಜ್ವಲ ಭವಿಷ್ಯ ಹೊಂದಲು ಪ್ರಾಥಮಿಕ ತಳಪಾಯ ಅತಿಮುಖ್ಯ. ಇದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ನೀಡಬೇಕು. ಹಣ, ಆಸ್ತಿ, ಪದವಿಯನ್ನು ಹಂಚಿಕೊಳ್ಳಲಾಗದು. ವಿದ್ಯೆಯನ್ನಷ್ಟೇ ಹಂಚಿಕೊಳ್ಳಬಹುದು ಎಂದು ಶಿವಕುಮಾರ್ ತಿಳಿಸಿದರು.
 ವಿದ್ಯೆಯಿಂದ ವಿನಯ, ಧರ್ಮ, ಹಣ, ಸುಖ ಎಲ್ಲವನ್ನೂ ಸಂಪಾದಿಸಬಹುದು. ಹೀಗಾಗಿ ವಿದ್ಯೆ ಅತಿ ಮುಖ್ಯ. ವಿದ್ಯೆ ಇಲ್ಲದಿದ್ದರೆ ವ್ಯಕ್ತಿಯ ಭವಿಷ್ಯ ಮಸುಕಾಗುತ್ತದೆ. ಶಿಕ್ಷಕರು ತಮ್ಮ ವೃತ್ತಿಧರ್ಮದೊಂದಿಗೆ ಜವಬ್ದಾರಿಯನ್ನು ಪಾಲಿಸಬೇಕು ಎಂದು ಹೇಳಿದರು.
ಸಮಾನ ಶಿಕ್ಷಣ: ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಸರ್ಕಾರವು ಆರ್‌ಟಿಇ ಕಾಯ್ದೆ ಜಾರಿಗೊಳಿಸಿದೆ.
    ಈ ಯೋಜನೆಯ ಸವಲತ್ತು ಗ್ರಾಮೀಣ ಮಕ್ಕಳಿಗೂ ತಲುಪುವಂತಾಗಬೇಕಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.  ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೌಲಭ್ಯವನ್ನು ನಗರ, ಪಟ್ಟಣದವರೇ ಹೆಚ್ಚು ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಅರ್ಹ ಬಡವರು ಇರಬಹುದು. ಆದರೆ, ಗ್ರಾಮೀಣರು ಬಳಕೆ ಮಾಡಿಕೊಳ್ಳದಿರುವುದು ವಿಷಾದಕರ ಸಂಗತಿ ಎಂದು ಅವರು ತಿಳಿಸಿದರು.
ಶಿಕ್ಷಕರು ಪಠ್ಯಕ್ರಮಕ್ಕೆ ಜೋತುಬೀಳದೆ ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಭವಿಷ್ಯದ ಜತೆಗೆ ಬದುಕು ಕಟ್ಟಿಕೊಡಲು ಪೂರಕವಾದ ಶಿಕ್ಷಣವನ್ನು ನೀಡುವುದೂ ಶಿಕ್ಷಕರ ಜವಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸಮಸ್ಯೆ ಪರಿಹಾರ: ಶಿಕ್ಷಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಅರಿವು ನನಗಿದೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುವ ರಾಷ್ಟ್ರೀಯ ಹಬ್ಬಗಳ ಸಾಂಸ್ಕೃತಿಕ ಕಾರ್ಯಕ್ರಮ, ಪಥ ಸಂಚಲನ, ಸಾಹಸ ಕಲೆಗಳ ಪ್ರದರ್ಶನದಲ್ಲಿ ಇಡೀ ಜಿಲ್ಲೆಯ ಪ್ರತಿಭಾವಂತ ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಅಧಿಕ ಹೊರೆ ಸಲ್ಲದು: ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯದಡಿ ಹಾಲು ವಿತರಣೆ, ಸ್ವಚ್ಛತೆ ಸಹಿತ ನಾನಾ ಹೊರೆಗಳನ್ನು ಶಿಕ್ಷಕರಿಗೆ ಹೇರಲಾಗಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂದು ಮಾಜಿ ಉಪ ಸಭಾಪತಿ ಪುಟ್ಟಣ್ಣ ವಿಷಾದಿಸಿದರು.
ಶಿಕ್ಷಕರ ಮೇಲೆ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ಅವರಿಗೆ ಸೂಕ್ತ ರಕ್ಷಣೆ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಪಠ್ಯೇತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪ್ರತಿ ಶಾಲೆಯಲ್ಲಿ ಗುಮಾಸ್ತರು ಮತ್ತು ಡಿ ದರ್ಜೆ ನೌಕರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ರಾಮನಗರ ಜಿಲ್ಲೆಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನ್ಯೂನತೆಗಳು ಕಂಡು ಬಂದಿವೆ. ಕನಕಪುರ ತಾಲೂಕು ಹೊರತಾಗಿ ಇತರೆಡೆ ಹೊಸದಾಗಿ ಪಟ್ಟಿಗೆ ಸೇರ್ಪಡೆಗೆ ಅವಕಾಶ ಕಲ್ಪಿಸಿಲ್ಲ.
  ಈ ಬಗ್ಗೆ ಪುನರ್ ಪರಿಶೀಲನೆಗೆ ಕ್ರಮ ಕೈಗೊಳ್ಳುವಂತೆ ಸಚಿವ ಶಿವಕುಮಾರ್ ಅವರನ್ನು ಪುಟ್ಟಣ್ಣ ಆಗ್ರಹಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿಪಂ ಉಪಾಧ್ಯಕ್ಷೆ ಗೌರಮ್ಮ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ಸಿಇಒ ಡಾ.ಎಂ.ವಿ.ವೆಂಕಟೇಶ್, ತಾಪಂ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಎಸ್‌ಪಿ ಅನುಪಮ್ ಅಗ್ರವಾಲ್, ಡಿಡಿಪಿಐ ಪ್ರಹ್ಲಾದಗೌಡ, ಕಾಂಗ್ರೆಸ್ ಮುಖಂಡರಾದ ಕೆ.ಶೇಷಾದ್ರಿ, ಮರಿದೇವರು, ರಾಮೋಜಿಗೌಡ, ರಘುನಂದನ್ ರಾಮಣ್ಣ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ರಾಜಶೇಖರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.