ಬೆಂಗಳೂರು ಗ್ರಾಮಾಂತರ

ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಚನ್ನಪಟ್ಟಣ  ಜ.4
ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆಎಸ್‌ಐಸಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಡಿಯೂಟ ಕಾರ್ಯಕರ್ತರು, ತಾಲೂಕು ಕಚೇರಿ ಮುಂಭಾಗ ಕೆಲಕಾಲ ಧರಣಿನಡೆಸಿ ತಹಸೀಲ್ದಾರರ ಮೂಲಕ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಬಿಸಿಯೂಟ ಯೋಜನೆಜಾರಿಗೆ ಬಂದು 10 ವರ್ಷಗಳು ಕಳೆದಿದೆಯಾದರೂ  ಬಿಸಿಯೂಟ ತಯಾರಿಕರ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಹರಿಸದಿದ್ದು,  ಅರೆಕಾಸಿನ ಗೌರವಧನ ನೀಡುವ ಮೂಲಕ  ಸಾಮಾಜಿಕ ನ್ಯಾಯಕ್ಕೆ ಕೊಡಲಿಪೆಟ್ಟು ನೀಡಿದೆ. ಬಿಸಿಯೂಟ ನೌಕರರನ್ನು ಕಡಿಮೆ ವೇತನಕ್ಕೆ ದುಡಿಸಿ ಕೊಳ್ಳುವ ಮೂಲಕ ನಮ್ಮನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕೂಲಿಕಾರ್ಮಿಕರಿಗೆ 180 ರೂ. ಕೂಲಿ ನೀಡಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ, ಅಲ್ಲದೆ ಕನಿಷ್ಠ ಕೂಲಿ ಕಾಯಿದೆ ಜಾರಿಯಲ್ಲಿದೆಯಾದರೂ ಸರ್ಕಾರವೇ ತನ್ನ ಕಾನೂನು ಪಾಲಿಸದೆ ಕಾರ್ಮಿಕರ ಶೋಷಣೆಗೆ ಮುಂದಾಗಿದೆ ಎಂದು ಪ್ರತಿಭಟನಾ ಕಾರರು ಕಿಡಿಕಾರಿದರು. ಬೆಲೆಏರಿಕೆಯಿಂದಾಗಿ ಇವರು ನೀಡುವ ವೇತನದಲ್ಲಿ ಜೀವನ ನಡೆಸುವುದೇ ಕಷ್ಟ ಸಾಧ್ಯವೆನಿಸಿದೆ ಎಂದು ಪ್ರತಿಭಟನಾ ಕಾರರು ತಮ್ಮ ಅಳಲನ್ನು ತೋಡಿಕೊಂಡರು.
ನಮ್ಮ ನೆರೆರಾಜ್ಯಗಳಾದ ತಮಿಳುನಾಡಿನಲ್ಲಿ 5200 ರೂ. ಕೇರಳದಲ್ಲಿ 4500 ರೂ. ಮಾಸಿಕವೇತನವನ್ನು ಅಡುಗೆಯವರಿಗೆ ನೀಡುತ್ತಿದ್ದು ನಮ್ಮರಾಜ್ಯದಲ್ಲಿ ಮಾತ್ರ ಕಡಿಮೆ ವೇತನ ನೀಡಲಾಗುತ್ತಿದೆ. ಬಿಸಿಯೂಟ ಯೋಜನೆಯನ್ನು ಇಸ್ಕಾನ್, ಅದಮ್ಯ ಚೇತನ ಟ್ರಸ್ಟ್‌ಗೆ ಗುತ್ತಿಗೆ ನೀಡುತ್ತಿದ್ದು ಇದರಿಂದಾಗಿ ಸಾವಿರಾರು ಬಿಸಿಯೂಟ ಕಾರ್ಯಕರ್ತರು ಕೆಲಸ ಕಳೆದು ಕೊಳ್ಳುವಂತಾಗಿದೆ. ಸರ್ಕಾರ ಕೂಡಲೇ ಅನ್ಯ ಸಂಸ್ಥೆಗಳಿಗೆ ಬಿಸಿಯೂಟದ ಗುತ್ತಿಗೆ ನೀಡುವುದನ್ನು ಕೈಬಿಡ ಬೇಕೆಂದು ಆಗ್ರಹಿಸಿದರು. ಬಿಸಿ ಯೂಟ ಕಾರ್ಯಕರ್ತರಿಗೆ ಸೇವಾ ಭದ್ರತೆ, ಸೇವಾವಧಿಯಲ್ಲಿ ಮೃತರಾಗುವ ಬಿಸಿಯೂಟ ಕಾರ್ಯಕರ್ತೆಯರಿಗೆ ಅಂತ್ಯಕ್ರಿಯೆಗೆ ನೆರವು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಮ್ಮೆಗಳನ್ನು ಬಳಸಿ ಕೊಂಡು ಸರ್ಕಾರದ ಧೋರಣೆಯನ್ನು ಖಂಡಿಸಿದ ಕಾರ್ಯಕರ್ತರು ತಮ್ಮ ಸಮಸ್ಯೆ ಪರಿಹರಿಸಿ ಕೊಡುವಂತೆ ತಹಸೀಲ್ದಾರ್ ಮುಖಾಂತರ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಗೆ ಜಿಲ್ಲಾ ಎಸ್‌ಡಿಎಂಸಿ ಅಧ್ಯಕ್ಷರ ಸಂಘ ಬೆಂಬಲ ಘೋಷಿಸಿತ್ತು. ಪ್ರತಿಭಟನೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಿರ್ಮಲಾ, ಕಾರ್ಯದರ್ಶಿ ಎಂ.ಲತಾ, ಎಸ್‌ಡಿಎಂಸಿ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಗೋವಿಂದರಾಜು, ಪದಾಧಿಕಾರಿಗಳಾದ ಎನ್.ಎಂ. ಶಂಭೂಗೌಡ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.