ಕಳಂಕಿತರಿಗೆ ಸ್ಥಾನ ಕಳ್ಳರಿಗೆ ಖಜಾನೆ ಕೀಲಿ ಕೊಟ್ಟಂತೆ
ಕ.ಪ್ರ.ವಾರ್ತೆ ರಾಮನಗರ ಜ.4
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯಲ್ಲಿ ಕಳಂಕಿತರಿಗೆ ಅವಕಾಶ ಕಲ್ಪಿಸಿರುವುದು ಕಳ್ಳರಿಗೆ ರಾಜ್ಯದ ಖಜಾನೆ ಕೀಲಿ ನೀಡಿದಂತಾಗಿದೆ. ಈ ವಿರುದ್ಧ ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸಂಪುಟಕ್ಕೆ ಕಳಂಕಿತರ ಸೇರ್ಪಡೆ ವಿರುದ್ಧ ಮೊದಲ ಹಂತವಾಗಿ ಜ.6ರಂದು ಬಿಜೆಪಿ ಯುವ ಮೋರ್ಚಾದಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆಯಲಿದೆ. ಕಳಂಕಿತ ಸಚಿವರನ್ನು ಕೈಬಿಡುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಟ್ಟ ಸಿದ್ದರಾಮಯ್ಯ ಅವರು ಇದೀಗ ಲಾಡ್ಗಿಂತಲೂ ಮಿಗಿಲಾದ ಆರೋಪ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್, ಆರ್. ರೋಷನ್ ಬೇಗ್ ಅವರಿಗೆ ಮಣೆ ಹಾಕಿದ್ದಾರೆ ಎಂದರು.
ಆರೋಪ ಮುಕ್ತರಾಗಿಲ್ಲ: ಶಿವಕುಮಾರ್ ಮತ್ತು ರೋಷನ್ ಬೇಗ್ ಅವರಿನ್ನೂ ಆರೋಪ ಮುಕ್ತರಾಗಿಲ್ಲ. ಶಿವಕುಮಾರ್ ವಿರುದ್ಧ ಅಕ್ರಮ ಗಣಿಗಾರಿಕೆ, ಅರಣ್ಯ ಒತ್ತುವರಿ ಪ್ರಕರಣಗಳಿವೆ. ಛಾಪಾ ಕಾಗದ ಹಗರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರನ್ನು ಎಸ್.ಎಂ. ಕೃಷ್ಣ ಸರ್ಕಾರದಿಂದಲೇ ಕೈಬಿಡಲಾಗಿತ್ತು ಎಂದು ರವಿ ತಿಳಿಸಿದರು.
ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಎದುರಿಸುತ್ತಿರುವ ರೋಷನ್ ಬೇಗ್ ಅವರಿಗೆ ಅದೇ ವಕ್ಫ್ ಖಾತೆಯನ್ನೇ ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಅರಣ್ಯ, ನಗರಾಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಖಾತೆಯನ್ನೂ ವಹಿಸಿಬಿಟ್ಟರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.
ಸಿದ್ದರಾಮಯ್ಯಗೆ ಪ್ರಶ್ನೆ: ಯಾವ ವಿಷಯವನ್ನು ಮುಂದಿಟ್ಟುಕೊಂಡು ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು ಬಿಜೆಪಿ ಸರ್ಕಾರ ಮತ್ತು ಸಚಿವರ ವಿರುದ್ಧ ಯಾವ ಯಾವ ಪದ ಬಳಸಿ ಟೀಕಿಸಿದ್ದಿರಿ, ಹೇಗೆಲ್ಲಾ ಜರಿದಿದ್ದಿರಿ ಎನ್ನುವುದನ್ನು ಸಿದ್ದರಾಮಯ್ಯ ಮರೆತಿದ್ದಾರೆಯೇ ಎಂದು ರವಿ ಪ್ರಶ್ನಿಸಿದರು.
ಕಳಂಕಿತರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ನೀಡಿದ ವಚನ ಏನಾಯ್ತು ಎನ್ನುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕಿದೆ. ಸಿದ್ದರಾಮಯ್ಯ ಮಾತಿಗೂ ಕೃತಿಗೂ ಅಜಗಜಾಂತರವಿದೆ ಎಂದು ಅವರು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ತ್ರಿವಿಕ್ರಮ: ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಭ್ರಷ್ಟಾಚಾರದಲ್ಲಿ ತ್ರಿವಿಕ್ರಮ ಸಾಧನೆ ಮೆರೆದಿದೆ. ಇಂಧನ ಸಹಿತ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ಭಯೋತ್ಪಾದಕರಿಗೆ ಸರ್ಕಾರ ಮನ್ನಣೆ ನೀಡುತ್ತಿದೆ. ರು.55 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ದೇಶವನ್ನು ಸಾಲದ ಶೂಲಕ್ಕೆ ದೂಡಿದೆ. ರುಪಾಯಿಯನ್ನು ಅಪಮೌಲ್ಯಗೊಳಿಸಿದ್ದೇ ಯುಪಿಎ ಸಾಧನೆ ಎಂದು ಅವರು ಟೀಕಿಸಿದರು.
ಇದೆಲ್ಲವನ್ನೂ ಜನತೆಗೆ ಮನದಟ್ಟು ಮಾಡಿಕೊಟ್ಟು, ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿ ಮನೆ ಮನೆಗೆ ಬಿಜೆಪಿ ಅಭಿಯಾನವನ್ನು ಜ.15ರಿಂದ ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮ ಮುಂದಿನ ಲೋಕಸಭೆ ಚುನಾವಣೆವರೆಗೂ ನಿರಂತರವಾಗಿ ನಡೆಯಲಿದೆ. ಇದರಲ್ಲಿ ಎನ್ಡಿಎ ಸಾಧನೆ, ಯುಪಿಎ ವೈಫಲ್ಯವನ್ನು ಕಾರ್ಯಕರ್ತರು ತಿಳಿಸಲಿದ್ದಾರೆ ಎಂದರು.
ಪರಿಹಾರದ ವಂಚನೆ: ಕಾಲುಬಾಯಿ ಜ್ವರಬಾಧೆಯಿಂದ ಸಾವನ್ನಪ್ಪಿದ 10 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಸರ್ಕಾರ ಪರಿಹಾರವನ್ನೇನೋ ಘೋಷಿಸಿದೆ. ಈವರೆಗೆ ಸೀಮಿತ ರೈತರಿಗೆ ಮಾತ್ರ ಪರಿಹಾರ ವಿತರಣೆಯಾಗಿದೆ. ಡೆಂಘೀಗೆ ಬಲಿಯಾದ ಮೈಸೂರಿಗರಿಗೆ ಮಾತ್ರವೇ ಪರಿಹಾರ ಸಿಕ್ಕಿದ್ದು, ಇತರೆಡೆಯ ಮೃತರ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ ಎಂದು ರವಿ ದೂರಿದರು. ಈ ಸರ್ಕಾರ ಬರೇ ಘೋಷಣೆಗಳಿಗೆ ಸೀಮಿತವಾಗಿದೆ. ಯಾವೊಂದು ಕಾರ್ಯಕ್ರಮದ ಪರಿಣಾಮಕಾರಿ ಜಾರಿ ಕಂಡು ಬರುತ್ತಿಲ್ಲ. ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕಾಂಗ್ರೆಸ್ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಈ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಸಮಾಜ ಒಡೆಯುವ ಕಾರ್ಯಕ್ರಮಗಳ ಬಗ್ಗೆಯಷ್ಟೇ ಸಿದ್ದರಾಮಯ್ಯ ಅತ್ಯುತ್ಸಾಹ ತೋರುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಮುರಳಿಮೋಹನ್, ರವಿಕುಮಾರ್ ಗೌಡ, ಶಿವಮಾಧು, ಪದ್ಮನಾಭ, ರುದ್ರದೇವರು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

