ಬೆಂಗಳೂರು ಗ್ರಾಮಾಂತರ

ಗಾಂಧಿ ಕನಸು ಮಣ್ಣುಪಾಲು ಮಾಡಿದ ಡೋಂಗಿ ಗಾಂಧಿಗಳು

Published On :

ದೊಡ್ಡಬಳ್ಳಾಪುರ: ಗಾಂಧಿ ಕನಸಿನ ಮಾದರಿ ರಾಜ್ಯ ಸ್ಥಾಪನೆಯ ಪರಿಕಲ್ಪನೆಯನ್ನು ಮಣ್ಣುಪಾಲು ಮಾಡಿದ್ದು 65 ವರ್ಷಗಳಲ್ಲಿ ಕಾಂಗ್ರೆಸ್‌ನ ಡೋಂಗಿ ಗಾಂಧಿಗಳ ಮಹತ್ವದ ಸಾಧನೆ ಎಂದು ನಮೋ ಬ್ರಿಗೇಡ್‌ನ ರಾಜ್ಯ ಪ್ರಭಾರಿ ನಿಕೇತ್ ರಾಜ್ ಆರೋಪಿಸಿದರು.
ಇಲ್ಲಿನ ವಾಸವಿ ಕಲ್ಯಾಣ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ನಮೋ ಬ್ರಿಗೇಡ್ ದೊಡ್ಡಬಳ್ಳಾಪುರ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ದೇಶ ಆಳುತ್ತಿರುವ ಪ್ರಧಾನಿ ಯಾವತ್ತೂ ಸ್ವಂತಿಕೆಯೇ ಇಲ್ಲದ ಗೊಂಬೆಯಾಗಿದ್ದಾರೆ. ಮನಮೋಹನಸಿಂಗ್ ಅಚಲ ನಿರ್ಧಾರ ಕೈಗೊಳ್ಳುವ ಧೈರ್ಯವಿಲ್ಲದ ಅಸಹಾಯಕ ವ್ಯಕ್ತಿಯಂತೆ ಕಾಣುತ್ತಾರೆ. ಇಟಲಿ ಯೋಚನೆಗಳ ಕೈಗೆ ತಲೆಕೊಟ್ಟವರ ಸ್ಥಿತಿಯೆಲ್ಲಾ ಹೀಗೇ ಎಂದು ಜರಿದ ಅವರು, ದೇಶಕ್ಕೆ ಸ್ವಾಭಿಮಾನಿ ಮತ್ತು ಸ್ವಂತಿಕೆಯ ವ್ಯಕ್ತಿತ್ವದ ನಾಯಕತ್ವ ಅಗತ್ಯವಿದೆ. ಅದಕ್ಕೆ ಸೂಕ್ತ ವ್ಯಕ್ತಿ ನರೇಂದ್ರ ಮೋದಿ. ಈ ದೇಶದಲ್ಲಿ ಆ ಬಗೆಯ ಚಿಂತನೆಗಳನ್ನು ಬಿತ್ತಿದ ಇಬ್ಬರೇ ಪ್ರಧಾನಿಗಳೆಂದರೆ ಅದು ಲಾಲ್‌ಬಹದ್ದೂರ್ ಶಾಸ್ತ್ರಿ ಮತ್ತು ಅಟಲ್ ಬಿಹಾರಿ ವಾಜಪೇಯಿ. ಆ ಸಾಲಿಗೆ ಮೋದಿ ಸೇರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗಾಂಧಿ ಚಿಂತನೆ ಮಣ್ಣುಪಾಲು: ಮಹಾತ್ಮ ಗಾಂಧಿ ಅವರ 3 ಮಹತ್ವದ ಕನಸುಗಳನ್ನು ನನಸು ಮಾಡಿರುವುದು ಇಡೀ ದೇಶದಲ್ಲಿ ಗುಜರಾತ್ ರಾಜ್ಯ ಮಾತ್ರ. ಗೋಹತ್ಯಾ ನಿಷೇಧದ ಬಗ್ಗೆ ಪ್ರಬಲ ಚಿಂತನೆ ಮಂಡಿಸಿದ್ದ ಗಾಂಧಿ ವೈಚಾರಿಕತೆಗೆ ತಿಲಾಂಜಲಿ ಕೊಟ್ಟ ಕಾಂಗ್ರೆಸ್ ಸರ್ಕಾರ ಇಂದಿಗೂ ಈ ದೇಶದಲ್ಲಿ ಗೋಹತ್ಯೆ ಜಾರಿಗೆ ತರಲಿಲ್ಲ. ಪಾನಮುಕ್ತ ಭಾರತ ನಿರ್ಮಾಣ ನನ್ನ ಗುರಿ ಎಂದಿದ್ದರು ಗಾಂಧಿ. ಆದರೆ ಹಳ್ಳಿ ಹಳ್ಳಿಗಳ ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯಮಾರಾಟ ಮಾಡುವ ದುರ್ವ್ಯವಸ್ಥೆ ಕಾಂಗ್ರೆಸ್ ಆಡಳಿತದಲ್ಲಿದೆ. ಅದೇ ರೀತಿ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಕೊಂಡ ಸಂಘಟನೆ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯಾ ನಂತರ ವಿಸರ್ಜಿಸಿ ಎಂದು ಗಾಂಧಿ ಹೇಳಿದ್ದರು. ಆದರೆ ಕೆಲ ದೇಶದ್ರೋಹಿ ಸ್ವಾರ್ಥಿಗಳು ಅದನ್ನೇ ಪಕ್ಷವಾಗಿಸಿ ಭ್ರಷ್ಟ ರಾಜಕಾರಣವನ್ನು ಪ್ರಚೋದಿಸಿದರು. ಆದರೆ ಗುಜರಾತ್‌ನಲ್ಲಿ ಗೋಹತ್ಯೆ, ಪಾನನಿರೋಧ ಜಾರಿಯಲ್ಲಿದೆ. ಅಲ್ಲಿ ಕಾಂಗ್ರೆಸ್ ನೆಲೆ ಕಂಡುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ನೈಜ ಅರ್ಥದಲ್ಲಿ ಗಾಂಧಿ ಚಿಂತನೆಗಳನ್ನು ಸಾಕಾರಗೊಳಿಸುತ್ತಿರುವವರು ನರೇಂದ್ರಮೋದಿ ಎಂದರು.
ಇತಿಹಾಸ ನಿರ್ಮಾಣ: 1947ರಲ್ಲಿ ಭಾರತ ಬ್ರಿಟೀಷರಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯಿತು. 2014ರ ವರ್ಷದ ಕ್ಯಾಲೆಂಡರ್ ಕೂಡ 1947ರ ಪಡಿಯಚ್ಚು. ಈ ಮಹತ್ವದ ವರ್ಷದಲ್ಲಿ ಕಾಂಗ್ರೆಸ್‌ನ ಗುಲಾಮಗಿರಿಯಿಂದ ಈ ದೇಶ ಹೊರಬರಬೇಕಿದೆ. ಮೋದಿ ಪ್ರಧಾನಿಯಾಗುವ ಮೂಲಕ ಈ ವರ್ಷ ಚಾರಿತ್ರಿಕವಾಗಲಿದೆ. ಮೋದಿ ಎಂದೂ ಪುಕ್ಕಟ್ಟೆ ಓಟಿಗಾಗಿ ಜಾತಿ-ಧರ್ಮಗಳನ್ನು ಒಡೆದವರಲ್ಲ. ಆ ಬಗೆಯ ಮಾನಗೇಡಿ ರಾಜಕಾರಣ ಕಾಂಗ್ರೆಸ್‌ನ ಹುಟ್ಟುಗುಣ. ಮೋದಿ ಪ್ರಧಾನಿಯಾದರೆ ಅಟಲ್ ಕನಸಿನ ಗಂಗಾ-ಕಾವೇರಿ ಯೋಜನೆ ಸಾಕಾರವಾಗಲಿದೆ. ದೇಶ ಸಮೃದ್ಧವಾಗಲಿದೆ ಎಂದರು.
ಸಿದ್ದು ಕೈಗೊಂಬೆ: ರಾಜ್ಯದಲ್ಲಿ ಸಿದ್ಧರಾಮಯ್ಯ ತೋರ್ಪಡಿಕೆಗೆ ತರುತ್ತಿರುವ ಯೋಜನೆಗಳು ಈಗಾಗಲೇ ನೆಲಕಚ್ಚುತ್ತಿವೆ. 1 ರು. ಕೆಜಿ ಅಕ್ಕಿ ಭವಿಷ್ಯ ಇನ್ನು ಕೆಲವೇ ದಿನ. ಭ್ರಷ್ಟಾಚಾರಿಗಳನ್ನು ಹತ್ತಿರ ಸೇರಿಸಲ್ಲ ಅಂದಿದ್ದ ಅವರು ಈಗ ಡಿಕೆಶಿಗೆ ಕೆಂಪು ಹಾಸಿನ ಸ್ವಾಗತ ಕೊಟ್ಟಿದ್ದಾರೆ. ಅವರ ಡೋಂಗಿ ಸೆಕ್ಯೂಲರ್ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಬರೀ ಬುರುಡೆ ಎಂದು ಟೀಕಿಸಿದರು.
ನಮೋ ಬ್ರಿಗೇಡ್‌ನ ರಾಜ್ಯ ಕಾರ್ಯಕರ್ತ ಸಂಜೀವ ಶಿರವಾಲ್ಕರ್ ಮತ್ತು ಜಿಲ್ಲಾ ಸಂಚಾಲಕ ದೇವರಾಜ್ ಮಾತನಾಡಿದರು. ಡಿ.ಸಿ.ಆನಂದ್ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಳ್ಳಾಪುರದ ನಮೋ ಬ್ರಿಗೇಡ್ ಸಂಚಾಲಕ ಮುರಳಿಕುಮಾರ್, ಪ್ರದೀಪ್‌ಕುಮಾರ್ ಜೈನ್, ಮಹೇಶ್ ಆರಾಧ್ಯ, ಕೀರ್ತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.