ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ರಾಮನಗರ ಜ.6
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ವಿಶ್ವಕರ್ಮ ಜನಾಂಗದ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಮತ್ತು ವಿಶ್ವಕರ್ಮ ಜನಾಂಗವನ್ನು 1 ಎ ಪ್ರವರ್ಗಕ್ಕೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಕುಶಲಕರ್ಮಿಗಳ ವಿಶೇಷ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಮುದಾಯದ ಫಲಾನುಭವಿಗಳಿಗೆ ತಲಾ ರು.1 ಲಕ್ಷ ಅನುದಾನವನ್ನು ಸರ್ಕಾರ 2007ರಲ್ಲೇ ಬಿಡುಗಡೆ ಮಾಡಿದೆ. ಈ ಸೌಲಭ್ಯಕ್ಕಾಗಿ ರಾಮನಗರ ಜಿಲ್ಲೆಯಲ್ಲಿ 280 ಫಲಾನುಭವಿಗಳು ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾರೊಬ್ಬರಿಗೂ ಸವಲತ್ತು ದೊರೆತಿಲ್ಲ ಎಂದು ಮನವಿ ಸಲ್ಲಿಕೆ ಬಳಿಕ ಮಹಾಮಂಡಲದ ರಾಜ್ಯಾಧ್ಯಕ್ಷ ಎಲ್. ನಾಗರಾಜಾಚಾರ್ ಸುದ್ದಿಗಾರರಿಗೆ ತಿಳಿಸಿದರು.
ತುರ್ತು ಸಭೆಗೆ ಆಗ್ರಹ: ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಶೀಘ್ರ ಕರೆದು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ. ಹಾವೇರಿ ಮತ್ತು ಗದಗ ಜಿಲ್ಲಾಧಿಕಾರಿಗಳಿಗೆ ಇದೇ ರೀತಿ ಮನವಿ ಸಲ್ಲಿಸಿ ಆ ಜಿಲ್ಲೆಗಳ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಮಹಾಮಂಡಳ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ವಿಶ್ವಕರ್ಮ ಜನಾಂಗದವರು ರೈತರು ಮತ್ತು ಸಮಾಜದ ಬೆನ್ನೆಲುಬಾಗಿದ್ದಾರೆ. ದೇಶದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೌಶಲ್ಯ ಮೆರೆದಿದ್ದಾರೆ. ಇಷ್ಟಾಗಿಯೂ ಈ ಜನಾಂಗ ಶೈಕ್ಷಿಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ವಿಶ್ವಕರ್ಮ ಜನಾಂಗವನ್ನು 2ಎ ಪ್ರವರ್ಗದಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.
ಭೂ ಮಂಜೂರು ಮಾಡಿ: ಜನಾಂಗದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಆಗುವಂತೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 1 ಎಕರೆ ಭೂಮಿಯನ್ನು ಮಂಜೂರು ಮಾಡಬೇಕು. ಬಡಗಿ, ಕಮ್ಮಾರಿಕೆ, ಎರಕದ ಕೆಲಸ, ಚಿನ್ನ-ಬೆಳ್ಳಿ ಕೆಲಸ, ಕೆತ್ತನೆ ವೃತ್ತಿಗಳಲ್ಲಿ ವಂಶಪಾರಂಪರಿಕಾಗಿ ತೊಡಗಿಸಿಕೊಂಡು ಬಂದಿರುವ ಈ ಜನಾಂಗದ ಏಳಿಗೆಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಲು ಅನೇಕ ವರ್ಷಗಳಿಂದ ಹೋರಾಟಕ್ಕೆ ಈಗಲಾದರೂ ಸ್ಪಂದನೆ ಸಿಗುವ ಆಶಾಭಾವನೆ ಇದೆ ಎಂದರು. ರಾಜ್ಯ ಸರ್ಕಾರ ಆಯವ್ಯಯದಲ್ಲಿ ರು.5 ಕೋಟಿ ಮೀಸಲಿಟ್ಟಿದೆ. ಈ ಹಣ ನಿಗಮದ ಸ್ಥಾಪನೆಗೆ ಸಾಲದಾಗಿದೆ. ಕನಿಷ್ಠ ರು.50 ಕೋಟಿ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು. ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಿಶ್ವಕರ್ಮ ಜನಾಂಗದವರಿಗೆ ಸಲಕರಣೆಗಳನ್ನು ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ರಾಮನಗರ ಜಿಲ್ಲಾಡಳಿತವನ್ನು ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳದ ಜಂಟಿ ಕಾರ್ಯದರ್ಶಿ ನಾಗೇಶ್, ಉತ್ತರಹಳ್ಳಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕನಕಪುರ ತಾಲೂಕು ಅಧ್ಯಕ್ಷ ಬಿ.ಚಂದ್ರಾಚಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

