ಬೆಂಗಳೂರು ಗ್ರಾಮಾಂತರ

ವೈಚಾರಿಕ ಸಂಗ್ರಾಮಕ್ಕೆ ರಣಕಹಳೆ ಮೊಳಗಿಸಿದ ಕುವೆಂಪು

Published On :

ಚನ್ನಪಟ್ಟಣ: ಸಮಾಜದ ಶ್ರಮಿಕ ವರ್ಗದ ಪಾಲಿಗೆ ಜಿಗಣೆಗಳಾದ ಪುರೋಹಿತ ಶಾಹಿ, ಬಂಡವಾಳ ಶಾಹಿಗಳ ಹುನ್ನಾರವನ್ನು ತಮ್ಮ ಸಾಹಿತ್ಯದಲ್ಲಿ ಕಟುವಾಗಿ ಖಂಡಿಸಿದ ಕುವೆಂಪು ಈ ನೆಲದಲ್ಲಿ ವೈಚಾರಿಕ ಸಂಗ್ರಾಮಕ್ಕೆ ರಣಕಹಳೆ ಮೊಳಗಿಸಿದ ಮಹಾನ್ ಕ್ರಾಂತಿಕಾರಿ ಎಂದು ಉಪನ್ಯಾಸಕ ಡಾ. ಸಿಪಿಲೆ ಸತೀಶ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ  ರಸಗ್ರಹಣ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದಲ್ಲಿ ನಿಸರ್ಗ ಮತ್ತು ಆಧ್ಯಾತ್ಮಿಕ ಚಿಂತನೆ ಕುರಿತು ಉಪನ್ಯಾಸ ನೀಡಿದ ಅವರು ಈ ನೆಲದ ಬಿರುಕುಗಳ ವಿರುದ್ಧ  ಈನೆಲದ ಮಕ್ಕಳೇ ಹಕ್ಕೊತ್ತಾಯ ಮಾಡುವಂತಹ ವೈಚಾರಿಕಪ್ರಜ್ಞೆಯನ್ನು ಮೂಡಿಸಿದರು ಎಂದು ತಿಳಿಸಿದರು. ಕುವೆಂಪು ತಮ್ಮ ಸಾಹಿತ್ಯದಲ್ಲಿ  ನಿಸರ್ಗ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಢಾಳಾಗಿ ಬಳಸಿಕೊಂಡಿದ್ದರು. ಸಾಮಾಜಿಕ ಪ್ರಜ್ಞೆಯನ್ನು ನಿರಂತರವಾಗಿ ಪ್ರಕಟಿಸುತ್ತಲೇ ಬಂದವರು ಅವರ ಗೊಬ್ಬರ ಕಲ್ಕಿ, ಕೋಗಿಲೆ ಮತ್ತು ಸೋವಿಯತ್ ರಷ್ಯ, ಶ್ರೀ ಸಾಮಾನ್ಯನ ದಿಕ್ಷಾ ಗೀತೆಗಳಾಗಿವೆ. ತಮ್ಮ ಸಾಹಿತ್ಯದಲ್ಲಿ ಸಮಾಜದ ಓರೆಕೋರೆಗಳನ್ನು ಯಾವುದೇ ಮುಲಾಜಿಗೆ ಒಳಗಾಗದೇ ತಿದ್ದುವ ಪ್ರಯತ್ನ ನಡೆಸಿದ್ದಾರೆ.
ರಾಮಾಯಣ ದರ್ಶನಂನಲ್ಲಿ ಊರ್ಮಿಳೆ ಮತ್ತು ಮಂಥರೆಯ ಪಾತ್ರಗಳನ್ನು ಉದಾತ್ತೀಕರಿಸಿ ಆ ಪಾತ್ರಗಳ ಮಹತ್ತರ ಗುಣಗಳನ್ನು ಹೊಸದಾಗಿ ಕಡೆಯುವ ಪ್ರಯತ್ನ ನಡೆಸಿದ್ದಾರೆ.  ಕುವೆಂಪು ಅವರ ವಿಶ್ವಮಾನವ ಗೀತೆ ಸಾಮಾಜಿಕ ಪ್ರಜ್ಞೆಯನ್ನು ಪ್ರಕಟಿಸುವಂತದ್ದು ಇಂತಹ ಮಹಾನ್ ಕವಿಯ ಚಿಂತನೆಗಳನ್ನ ಅಳವಡಿಸಿ ಕೊಳ್ಳಬೇಕಿದೆ ಎಂದರು.
ಸಾರ್ವಕಾಲಿಕ: ಇಂದಿನ ಅತ್ಯಾಚಾರಿ, ಅನಾಚಾರಿ, ದುರಾಚಾರಿಗಳಿಗೆ ತಮ್ಮ ತಪ್ಪನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿಗಳಾಗಲು ಕುವೆಂಪು ಸಾಹಿತ್ಯ  ದಿವ್ಯೌಷಧವಾಗಿದೆ ಎಂದುತಿಳಿಸಿದ ಉಪನ್ಯಾಸಕ ನಿಂಗೇಗೌಡ, ಸಮಾಜದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಅವುಗಳನ್ನು ಹೋಗಲಾಡಿಸುವಲ್ಲಿ ಕುವೆಂಪು ಸಾಹಿತ್ಯ ಸಾರ್ವಕಾಲಿಕವಾದದ್ದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಜಯರಾಮೇಗೌಡ ಮಾತನಾಡಿ ತಾವು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ತರಬೇತಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದಾಗ ಕುವೆಂಪು ಅಲ್ಲಿಗೆ ಬಂದ ದೃಶ್ಯವನ್ನು ಕಂಡು ಬೆರಗಾಗಿ ಅವರ ಕಾಲುಮುಟ್ಟಿ ನಮಸ್ಕರಿಸಿದ ಅನುಭವವನ್ನು ಹಂಚಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಶಾಂತಮ್ಮ, ಪ್ರೌಢಶಾಲಾ ಶಿಕ್ಷಕ  ದೊಳ್ಳೇಗೌಡ, ಉಪನ್ಯಾಸಕ ಡಾ.ಅಂಕನಹಳ್ಳಿ ಪಾರ್ಥ ಉಪಸ್ಥಿತರಿದ್ದರು. ಗಾಯಕ ವಿನಯ್ ಕುಮಾರ್ ಕುವೆಂಪು ಗೀತೆಗಳನ್ನು ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.