'ಕೇಂದ್ರದ ತಪ್ಪು ನೀತಿ: ದಿವಾಳಿಯಂಚಿಗೆ ಆರ್ಥಿಕ ಪರಿಸ್ಥಿತಿ'
ಕ.ಪ್ರ.ವಾರ್ತೆ , ರಾಮನಗರ , ಜ.7
ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಂಚಿಗೆ ತಲುಪಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದ ಪರ್ಯಾಯ ನೀತಿಗಳಿಗಾಗಿ ಜಿಲ್ಲಾ ಸಿಪಿಎಂ ಪಕ್ಷದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ಜನಸಾಮಾನ್ಯನ ಬದುಕು ದುಸ್ತರವಾಗಿ ಪರಿಣಮಿಸಿದ್ದರೆ ಮತ್ತೊಂದೆಡೆ ದೇಶೀ ಹಾಗೂ ವಿದೇಶೀ ಬಹುರಾಷ್ಟ್ರೀಯ ಕಂಪೆನಿಗಳು ಶ್ರೀಮಂತವಾಗುತ್ತಿವೆ ಎಂದರು.
ಕಾರ್ಪೋರೇಟ್ ಕಂಪೆನಿಗಳು ಹಾಗೂ ಮಾಲೀಕರ ಆದಾಯ ಲಕ್ಷ ಕೋಟಿಗಳ ಲೆಕ್ಕದಲ್ಲಿ ವೃದ್ಧಿಯಾಗುತ್ತಿದೆ. ಮಿತಿಮೀರಿದ ಹಣದುಬ್ಬರದಿಂದ ರುಪಾಯಿ ಅಪಮೌಲ್ಯಗೊಂಡು ವಿದೇಶೀ ಸಾಲದ ಹೊರೆ ಹೆಚ್ಚಾಗುತ್ತಿದ್ದು, ದೇಶ ಸಾಲದ ಸುಳಿಗೆ ಸಿಲುಕಿದೆ ಎಂದು ಅವರು ಆರೋಪಿಸಿದರು.
ದೇಶದಲ್ಲಿ ನಡೆದಿರುವ ಕಾಮನ್ವೆಲ್ತ್, 2 ಜಿ, ಕಲ್ಲಿದ್ದಲು ಹಾಗು ಆದರ್ಶ ಹೌಸಿಂಗ್ ಹಗರಣದಲ್ಲಿ ರು.10 ಲಕ್ಷ ಕೋಟಿಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಾಲುದಾರ ಪಕ್ಷಗಳಾಗಿವೆ. ಕಲ್ಲಿದ್ದಲು ಹಗರಣದಲ್ಲಿ ಕಾಂಗ್ರೆಸ್ ಮುಖಂಡರ ಜೊತೆಗೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಕೆಲವು ಮುಖ್ಯಮಂತ್ರಿಗಳು ಸಿಲುಕಿದ್ದಾರೆ. ಆದ್ದರಿಂದ ಸಂಸತ್ನಲ್ಲಿ ಬಿಜೆಪಿ ನಾಯಕರು ಕಲ್ಲಿದ್ದಲು ಹಗರಣವನ್ನು ಚರ್ಚೆಯಾಗಲು ಬಿಡಲಿಲ್ಲ ಎಂದು ದೂಷಿಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ರೈತರಿಂದ ಭೂಮಿಯನ್ನು ಕಸಿದುಕೊಂಡು ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸ್ವಾಧೀನ ಮಸೂದೆಯು ರೈತರಿಗೆ ಮರಣ ಶಾಸನವಾಗಿದೆ. ರೈತರ ಫಲವತ್ತಾದ ಭೂಮಿಯನ್ನು ಬಿಡಿಗಾಸಿಗೆ ಕಾರ್ಪೊರೇಟಟ್ಕಂಪೆನಿಗಳಿಗೆ ನೀಡುತ್ತಿರುವುದರಿಂದ ಕೃಷಿ ಭೂಮಿ ಕ್ಷೀಣಗೊಂಡು, ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ ಧಾನ್ಯಗಳ ಬೆಲೆಯಲ್ಲಿ ಏರಿಕೆ ಉಂಟಾಗುತ್ತಿದೆ ಎಂದರು.
ರಾಜ್ಯದಲ್ಲಿ 26 ಲಕ್ಷ ಕುಟುಂಬಗಳು ನಿವೇಶನ ರಹಿತವಾಗಿವೆ. ನಿವೇಶನ ನೀಡುವಂತೆ ಹಲವಾರು ವರ್ಷದಿಂದ ಹೋರಾಟ ನಡೆಸುತ್ತಾ ಬಂದರೂ, ಸರ್ಕಾರಗಳು ಕಣ್ಣು ತೆರೆದಿಲ್ಲ. ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿವೆ. ದೇಶದ ಸಂಪತ್ತನ್ನು ಹೆಚ್ಚಿಸುವ ಆರ್ಥಿಕ ನೀತಿಗಳು ಹಾಗೂ ಜನರು ಗೌರವಯುತವಾಗಿ ಬದುಕಲು ತಲೆ ಮೇಲೊಂದು ಸೂರು ಬೇಕು ಎಂದು ಶ್ರೀರಾಮ ರೆಡ್ಡಿ ತಿಳಿಸಿದರು.
ಮೋದಿ ಸಾಧನೆ ಏನು? ಮಾಧ್ಯಮಗಳು ಜನರ ಸಮಸ್ಯೆಗಳನ್ನು ಬಿತ್ತರಿಸುವ ಬದಲು ನರೇಂದ್ರ ಮೋದಿ ಅಥವಾ ರಾಹುಲ್ಗಾಂಧಿ ಪ್ರಧಾನಮಂತ್ರಿ ಆಗಬೇಕು ಎಂಬ ಚರ್ಚೆಗಳನ್ನೇ ಪ್ರಸಾರ ಮಾಡುತ್ತಿವೆ. ಕೇವಲ ಒಬ್ಬ ವ್ಯಕ್ತಿಯನ್ನು ವೈಭವೀಕರಿಸುತ್ತಿವೆ. ಪಕ್ಷಾತೀತವಾಗಿ ಕೆಲಸ ಮಾಡಬೇಕಿದ್ದ ಮಾಧ್ಯಮಗಳು ಯಾವುದೋ ಒಂದು ಪಕ್ಷದ ವಕ್ತಾರರಂತೆ ಕೆಲಸ ಮಾಡುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಗುಜರಾತ್ ಕೋಮು ಗಲಭೆಯಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವುದು, ರೈತರ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಬಿಡಿಗಾಸಿಗೆ ನೀಡಿರುವುದು, ಗುಜರಾತಿನ ಶೇ.42ರಷ್ಟು ಮಕ್ಕಳನ್ನು ಅಪೌಷ್ಟಿಕತೆಗೆ ದೂಡಿರುವುದು ಮೋದಿ ಅವರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಎಂ. ಶ್ರೀನಿವಾಸ್, ರಾಜಣ್ಣ, ಮಖ್ದಮ್, ರೆಹಮತ್, ಸಿ.ಆರ್.ನಾಗೇಶ್, ಸುಜಾತ, ಅನುಪಮ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

