ಬೆಂಗಳೂರು ಗ್ರಾಮಾಂತರ

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉಪಯುಕ್ತ

Published On :

ಕ.ಪ್ರ.ವಾರ್ತೆ ,  ರಾಮನಗರ ,  ಜ. 8
ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಶಾಲೆ-ಕಾಲೇಜುಗಳಲ್ಲಿ ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು.  
ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಗುರುಭವನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಶಾಲಾ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಹೊಮ್ಮಬೇಕಾದರೆ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ವೇದಿಕೆಗಳು ಅನುಕೂಲವಾಗುತ್ತವೆ. ಇದರೊಂದಿಗೆ ಉತ್ತಮ ನಾಡು ನಿರ್ಮಾಣ ಮಾಡುವ ವಿದ್ಯಾರ್ಥಿಗಳನ್ನು ರೂಪಿಸಬಹುದು ಎಂದು ತಿಳಿಸಿದರು.  
ಗೆಲವು ಸ್ಥಿರವಲ್ಲ: ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಸ್ಪರ್ಧೆಗಳಲ್ಲಿ ಸೋಲು-ಗೆಲವು ಮುಖ್ಯವಲ್ಲ. ಭಾಗವಹಿಸುವಿಕೆ ಅತಿ ಮುಖ್ಯ. ಸೋತವರು ನಿರಾಸೆಗೆ ಒಳಗಾಗದೆ ಮುಂದೆ ಗೆಲವು ಸಾಧಿಸುವ ಛಲದಿಂದ ಪ್ರಯತ್ನ ಮುಂದುವರೆಸಬೇಕು ಎಂದು ವಿಶ್ವನಾಥ್ ಹೇಳಿದರು. ಗೆಲವು ಎಂದಿಗೂ ಸ್ಥಿರವಲ್ಲ. ಗೆದ್ದವರು ಭ್ರಮೆಗೆ ಒಳಗಾಗದೆ ಇನ್ನು ಉತ್ತಮವಾದ ಸಾಧನೆಗೆ ಪರಿಶ್ರಮಪಡಬೇಕು. ಗೆದ್ದವರನ್ನು ಬೆನ್ನುತಟ್ಟಿ, ಸೋತವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕು ಎಂದು ಅವರು ಸಲಹೆ ನೀಡಿದರು.  
ಯಂತ್ರಗಳಾಗಬಾರದು: ವಿದ್ಯಾರ್ಥಿಗಳು ಅಂಕ ತೆಗೆಯುವ ಯಂತ್ರಗಳಾಗಬಾರದು. ಮಕ್ಕಳ ಮೇಲೆ ಪೋಷಕರು ಮತ್ತು ಶಿಕ್ಷಕರು ಅನಗತ್ಯ ಒತ್ತಡ ಹೇರುವುದು ಸಲ್ಲದು. ಇದರಿಂದ ಮಕ್ಕಳಲ್ಲಿ ಖಿನ್ನತೆ ಕಾಡಲಿದ್ದು, ಆತ್ಮಸ್ಥೈರ್ಯ ಕುಂದುವ ಭೀತಿ ಇದೆ ಎಂದು ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು. ವಿದ್ಯಾರ್ಥಿಗಳು ಪುಸ್ತಕ ಜೀವನದ ಜತೆಗೆ ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಕ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕು. ಒಬ್ಬ ಶಿಕ್ಷಿತ, ಅಧಿಕಾರಿ, ಅರಸನು 64 ವಿದ್ಯೆಗಳಲ್ಲಿ ಪಾರಂಗತನಾಗಿದ್ದಾಗ ಮಾತ್ರ ಶ್ರೇಷ್ಠನಾಗುತ್ತಾನೆ ಎಂದು ಅವರು ಅಭಿಪ್ರಾಯಪಟ್ಟರು.   
ಪಾತ್ರ ಮಹತ್ತರ: ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಅದನ್ನು ಮುಟ್ಟಲು ನಿರಂತರ ಪರಿಶ್ರಮವನ್ನು ಮೈಗೂಡಿಸಿಕೊಂಡು ಹೋರಾಟ ನಡೆಸಬೇಕು ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್ ಕರೆ ನೀಡಿದರು.   
ಕೀಳರಿಮೆ ಹೋಗಲಾಡಿಸಿ: ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರ, ಪೋಷಕರ ಕರ್ತವ್ಯವಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದರೆ ತಮ್ಮ ಕೆಲಸವಾಯಿತು ಎಂದು ಸುಮ್ಮನಾಗದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾಳಜಿ ವಹಿಸಬೇಕು. ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿ, ಆತ್ಮಸ್ಥೈರ್ಯ ತುಂಬಬೇಕು ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ತಿಳಿಸಿದರು.   
ಜಿ.ಪಂ. ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಸದಸ್ಯರಾದ ಸುಮಿತ್ರಮ್ಮ, ಶಾಂತಮ್ಮ ವೆಂಕಟೇಶ್, ತಾ.ಪಂ. ಸದಸ್ಯೆ ಶೋಭಾ ಲಕ್ಷ್ಮಣಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದ್‌ಗೌಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕಿ ಡಾ.ಇಂದ್ರಾಣಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.