ಹೈನು ಯೋಜನೆ ಅನುಷ್ಠಾನಕ್ಕೆ
ರಾಮನಗರ: ಉತ್ಪಾದನಾ ವೆಚ್ಚ ಕಡಿತದೊಂದಿಗೆ ಹಾಲು ಉತ್ಪಾದನೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ರೂಪಿಸಿರುವ ರಾಷ್ಟ್ರೀಯ ಹೈನು ಯೋಜನೆ(ಎನ್ಡಿಪಿ)-1 ಕಾರ್ಯಕ್ರಮ ಅನುಷ್ಠಾನಕ್ಕೆ ಬಮೂಲ್ ಮುಂದಾಗಿದೆ.
ಸಮತೋಲನ ಪಶು ಆಹಾರ ಉಪ ಯೋಜನೆ ಅಡಿಯಲ್ಲಿ ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಗೆ ಒಬ್ಬರಂತೆ ಸ್ಥಳೀಯ ಸಂಪನ್ಮೂಲ ವ್ಯಕ್ತಿ (ಎಲ್ಆರ್ಪಿ) ನಿಯೋಜಿಸಿಕೊಂಡು, ಕಾರ್ಯಕ್ರಮ ಅನುಷ್ಠಾನ ಸಂಬಂಧ ಬಮೂಲ್ ಈಗಾಗಲೇ ಸುತ್ತೋಲೆ ಹೊರಡಿಸಿದೆ.
ಬೃಹತ್ ಮೊತ್ತ ಬಿಡುಗಡೆ: ರಾಷ್ಟ್ರೀಯ ಹೈನು ಯೋಜನೆಗೆ ಕೇಂದ್ರ ಸರ್ಕಾರ ರು.2242 ಕೋಟಿ ಬೃಹತ್ ಮೊತ್ತವನ್ನು ಮೀಸಲಿಟ್ಟಿದೆ. ಬಮೂಲ್ಗೆ ರು.357 ಲಕ್ಷ ಬಿಡುಗಡೆಯಾಗಿದೆ. ಈ ಯೋಜನೆಯಡಿ ಸಮತೋಪನ ಪಶು ಆಹಾರ ಕಾರ್ಯಕ್ರಮವು ಒಂದು ಉಪ ಯೋಜನೆಯಾಗಿದ್ದು, ಇದು ಆರು ವರ್ಷದ ಅವಧಿಯದ್ದಾಗಿದೆ.
ರಾಷ್ಟ್ರದ ವಿವಿಧೆಡೆ ಪ್ರಾರಂಭವಾಗಿರುವ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಪ್ರತಿಶತ ನೂರರಷ್ಟು ಸಂಪನ್ಮೂಲ ಹೂಡಿಕೆ ಸರ್ಕಾರದ್ದಾಗಿದೆ. ಈ ಉಪ ಯೋಜನೆಯಿಂದ ಹೈನೋದ್ಯಮಕ್ಕೆ ಸಾಕಷ್ಟು ಅನುಕೂಲವಾಗಲಿದೆ.
ಕಾರ್ಯಕ್ರಮದ ಉದ್ದೇಶ: ದುಬಾರಿ ಬೆಲೆ ತೆತ್ತು ಪೌಷ್ಟಿಕ ಆಹಾರವನ್ನು ರಾಸುಗಳಿಗೆ ಕೊಡುವ ಬದಲು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡಿ, ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಜತೆಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳುವಂತೆ ರೈತರನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಹಾಲು ಉತ್ಪಾದಕರ ಸಹಕಾರ ಸಂಘದ ಮಟ್ಟದಲ್ಲಿ ನಿಯೋಜಿತನಾದ ಸಂಪನ್ಮೂಲ ವ್ಯಕ್ತಿಯು ರಾಸುವಿನ ತೂಕ, ಅದರ ಗಾತ್ರ, ರಾಸುವಿಗೆ ನೀಡುತ್ತಿರುವ ಆಹಾರದ ವಿವರವನ್ನು ಐನಾಫ್ ಸಂಸ್ಥೆ ಕಂಡು ಹಿಡಿದ ಸಾಫ್ಟ್ವೇರ್ಗೆ ನಮೂದಿಸಬೇಕು. ಆಗ ಸಮತೋಲನ ಆಹಾರ ಪ್ರಮಾಣ ಹೇಗೆ, ಎಷ್ಟಿರಬೇಕೆನ್ನುವ ವಿವರ ದೊರೆಯಲಿದೆ.
ಗಾತ್ರ, ವಯಸ್ಸಿನ ಶಕ್ತಿ: ಪ್ರತಿಯೊಂದು ಹಸು ತನ್ನ ಗಾತ್ರ, ವಯೋವಾನಕ್ಕೆ ಅನುಗುಣವಾಗಿ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಬ್ರಾಂಡೆಡ್ ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಖರೀದಿಸಿದ ಆಹಾರ ಪದಾರ್ಥ ಹಾಕಿದಾಕ್ಷಣ ಹಸು ಹೆಚ್ಚು ಹಾಲನ್ನೇನೂ ಕೊಡುವುದಿಲ್ಲ. ಅದಕ್ಕೆ ಸಮತೋಲನ ಆಹಾರ ಬೇಕೆಂದು ತಜ್ಞರು ಹೇಳುತ್ತಾರೆ.
ಮಾರುಕಟ್ಟೆಯಲ್ಲಿ ಖರೀದಿಸಿ ತರುವ ಆಹಾರ ಪದಾರ್ಥಕ್ಕಿಂತಲೂ ಪೌಷ್ಟಿಕಾಂಶವಿರುವ ಹಸಿರು ಮೇವನ್ನು ನಮ್ಮ ಜಮೀನುಗಳಲ್ಲಿ ಬೆಳೆಯಬಹುದಾಗಿದೆ. ಅವುಗಳಲ್ಲಿ ಯಾವ ತಳಿ ಉತ್ತಮ, ಹಾಲಿನ ಅಧಿಕ ಇಳುವರಿಗಾಗಿ ಎಷ್ಟೆಷ್ಟು ಪ್ರಮಾಣದಲ್ಲಿ ನೀಡಬೇಕೆನ್ನುವ ವಿವರವನ್ನು ಸಂಪನ್ಮೂಲ ವ್ಯಕ್ತಿ ಮೂಲಕ ರೈತರಿಗೆ ಒದಗಿಸಲಾಗುತ್ತದೆ. ಇದನ್ನು 10 ತಿಂಗಳು ಪಾಲಿಸಿದರೆ ಹಾಲಿನಲ್ಲಿ ಗುಣಮಟ್ಟದ ಜತೆಗೆ ಉತ್ಪಾದನೆಯು ಶೇಕಡ 10ರಷ್ಟು ಅಧಿಕವಾಗಲಿದೆ. ಉತ್ಪಾದನಾ ವೆಚ್ಚ ಶೇಕಡ 8ರಷ್ಟು ಇಳಿಯಲಿದೆ. ಹಸುವಿನ ಆರೋಗ್ಯವೂ ಉತ್ತಮವಾಗಲಿದ್ದು, ವರ್ಷಕ್ಕೊಂದು ಕರುವಿಗೆ ಜನನ ನೀಡಲಿದೆ.
ಯೋಜನೆ ಅನುಷ್ಠಾನ: ಬಮೂಲ್ ತನ್ನ ವ್ಯಾಪ್ತಿಯಲ್ಲಿ 200 ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಳ್ಳಲಿದೆ. ನಂತರದಲ್ಲಿ ಕನಿಷ್ಠ 70-80 ರಾಸುಗಳಿರುವ ಗ್ರಾಮಗಳಿಗೆ ಒಬ್ಬರಂತೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಪನ್ಮೂಲ ವ್ಯಕ್ತಿಗಳಿಗೆ ಲ್ಯಾಪ್ ಟ್ಯಾಪ್, ಇಂಟರ್ನೆಟ್, ಮಾಪನ ಯಂತ್ರ ಸಹಿತ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ರೈತರ ಮನೆ ಮನೆಗೆ ತೆರಳಿ ಅವರಿಂದ ಪಡೆದ ಮಾಹಿತಿಯನ್ನು ಸಾಫ್ಟ್ವೇರ್ಗೆ ಅಳವಡಿಸಿ, ಅಲ್ಲಿಂದ ದೊರೆಯುವ ಸಲಹೆಗಳನ್ನು ರೈತರಿಗೆ ನೀಡುತ್ತಾರೆ. ಅದನ್ನು ರೈತರು ಪಾಲಿಸಿಕೊಂಡು ಹೋಗಬೇಕು. ಸಂಪನ್ಮೂಲ ವ್ಯಕ್ತಿಗಳು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಕಾರ್ಯ ನಿರ್ವಹಣೆಯ ಮೇಲೆ ನಿಗಾವಹಿಸುತ್ತಾರೆ.
ನೇಮಕ ಪ್ರಕ್ರಿಯೆ
ಸ್ಥಳೀಯ ಸಂಪನ್ಮೂಲ ವ್ಯಕ್ತಿ ಹುದ್ದೆಯನ್ನು ಆಯಾ ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ನೇಮಿಸಿಕೊಂಡು, ಮಾಸಿಕ ರು.1500 ಸ್ಟೈಫಂಡ್ ನೀಡಲಾಗುತ್ತದೆ. ಅಭ್ಯರ್ಥಿಯು 10ನೇ ತರಗತಿ ತೇರ್ಗಡೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಹೈನುಗಾರಿಕೆ ಬಗ್ಗೆ ಸಾಮಾನ್ಯ ಜ್ಞಾನವಿರಬೇಕು.
- ರುದ್ರೇಶ್, ಬಮೂಲ್ ಉಪ ವ್ಯವಸ್ಥಾಪಕ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

