ಬೆಂಗಳೂರು ಗ್ರಾಮಾಂತರ

ಪಹಣಿ ತಿದ್ದುಪಡಿ, ಪೌತಿ ಖಾತೆ ಸಮಸ್ಯೆಗೆ ಮುಕ್ತಿ

Published On :

ಕ.ಪ್ರ.ವಾರ್ತೆ , ರಾಮನಗರ , ಜ.10
ರೈತರನ್ನು ದೀರ್ಘ ಕಾಲದಿಂದ ಕಾಡುತ್ತಿರುವ ಪಹಣಿ ತಿದ್ದುಪಡಿ, ಪೌತಿ ಖಾತೆ ಸಹಿತ ಸಮಸ್ಯೆಗಳಿಗೆ ಮುಕ್ತಿ ನೀಡುವ ಬಗ್ಗೆ ಜಿಲ್ಲಾಡಳಿತಕ್ಕೆ ಕಡೆಗೂ ಜ್ಞಾನೋದಯವಾಗಿದ್ದು, ಈ ಆಂದೋನಲನಕ್ಕೆ ಜ.17ರಂದು ಚಾಲನೆ ನೀಡಲು ನಿರ್ಧರಿಸಿದೆ.
ಮೊದಲ ಹಂತವಾಗಿ ಪ್ರತಿ ತಾಲೂಕಿನ ಒಂದು ಹೋಬಳಿ ಕೇಂದ್ರದಲ್ಲಿ ಆಂದೋಲನ ನಡೆಸಲಾಗುವುದು. ಜ.17ರಂದು ರಾಮನಗರ ತಾಲೂಕಿನ ಕೈಲಾಂಚದಲ್ಲಿ ಉದ್ಘಾಟನೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.27 ರಂದು ಕನಕಪುರ ತಾಲೂಕಿನ ಕೋಡಿಹಳ್ಳಿ, ಜ.31 ರಂದು ಮಾಗಡಿ ತಾಲೂಕಿನ ಸೋಲೂರು, ಫೆ.5 ರಂದು ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಹೋಬಳಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದರು.
ಸ್ಥಳದಲ್ಲೇ ಪರಿಹಾರ: ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಯುವ ಈ ಖಾತಾ ಆಂದೋಲನ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಸಹಿತ ಅಧಿಕಾರಿಗಳು ಹಾಜರಿರುತ್ತಾರೆ.  ರೈತರು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು.
ಖಾತಾ ಆಂದೋಲನ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವುದು. ಇಲ್ಲವಾದಲ್ಲಿ ನಿಗದಿತ 30 ದಿನದೊಳಗೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.  
ಇತರೆ ಸೌಲಭ್ಯಗಳ ಅರ್ಜಿ: ಈ ಆಂದೋಲನದಲ್ಲಿ ಖಾತೆ ತಿದ್ದುಪಡಿ ಮತ್ತು ಪೌತಿ ಖಾತೆ ಬದಲಾವಣೆ ಮಾತ್ರವಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆಯೂ ಅರಿವು ಮೂಡಿಸಿ, ಆ ಸಂಬಂಧವೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಕಂದಾಯ ಇಲಾಖೆಗಳಲ್ಲಿ ಎದುರಾಗಿರುವ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಿ, ಅವರಲ್ಲಿ ನೆಮ್ಮದಿ ಮೂಡಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇತರೆ ಹೋಬಳಿ ಕೇಂದ್ರಗಳಲ್ಲೂ ಆಂದೋಲನ ಮುಂದುವರೆಯಲಿದೆ ಎಂದರು.  
29 ಸಾವಿರ ಪ್ರಕರಣ ಬಾಕಿ: ರಾಮನಗರ ಜಿಲ್ಲೆಯಲ್ಲಿರುವ ಒಟ್ಟಾರೆ 4.05 ಲಕ್ಷ ಪಹಣಿಗಳ ಪೈಕಿ ಇದುವರೆಗೆ 29508 ಪಹಣಿಗಳ  ತಿದ್ದುಪಡಿ ಪ್ರಕರಣಗಳು ಬಾಕಿ ಇವೆ ಎನ್ನುವ ಮಾಹಿತಿಯನ್ನು ಸ್ವತ- ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರೇ ಹೊರಗೆಡವಿದ್ದಾರೆ.  
ರಾಮನಗರ ತಾಲೂಕಿನಲ್ಲಿ 2900, ಚನ್ನಪಟ್ಟಣದಲ್ಲಿ 8710, ಕನಕಪುರದಲ್ಲಿ 9327, ಮಾಗಡಿ ತಾಲೂಕಿನ 8571 ಅರ್ಜಿಗಳು ಬಾಕಿ ಇವೆ. ಇವುಗಳನ್ನು ಇತ್ಯರ್ಥಪಡಿಸಲು ಜಿಲ್ಲಾಡಳಿತ ಕಾಲಮಿತಿಯ ಕಾರ್ಯಕ್ರಮ ರೂಪಿಸಿದೆ ಎಂದು ಅವರು ಹೇಳಿದರು.
ಇದು ಹಳೆಯ ಕಾರ್ಯಕ್ರಮ
ತಹಸೀಲ್ದಾರ್ ಹುದ್ದೆ ತ್ಯಜಿಸಿ ದೀಕ್ಷೆ ಪಡೆದು ಕೆಲ ಕಾಲ ಆದಿಚುಂಚನಗಿರಿ ಮಠ ಸೇರಿ ಸುದ್ದಿಯಾಗಿದ್ದ ಡಾ.ಎಚ್.ಎಲ್.ನಾಗರಾಜು ಅವರು ಈ ಖಾತಾ ಆಂದೋಲನ ಕಾರ್ಯಕ್ರಮವನ್ನು 4 ವರ್ಷದ ಹಿಂದೆಯೇ ನೆರೆಯ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆಸಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹಳ್ಳಿ ಹಳ್ಳಿಗೂ ಭೇಟಿ ಕೊಟ್ಟು, ರೈತರ ಮನೆ ಬಾಗಿಲಿಗೆ ತೆರಳಿ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಬದಲಾವಣೆಯಂತಹ ಸಹಸ್ರಾರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.
2009ರವರೆಗೆ ಹೊಳೆನರಸೀಪುರದಲ್ಲಿ 2 ವರ್ಷ ಸೇವೆ ಸಲ್ಲಿಸಿದ ನಾಗರಾಜು ಆ ತಾಲೂಕಿನಲ್ಲಿ 5500 ಖಾತೆ ಮತ್ತು 32 ಸಾವಿರ ಪಹಣಿ ತಿದ್ದುಪಡಿ ಮಾಡಿದ್ದರು. ಅಲ್ಲಿಂದ ನಾಗಮಂಗಲ, ಕೆ.ಆರ್.ಪೇಟೆ, ಮದ್ದೂರಿಗೆ ತಹಸೀಲ್ದಾರ್ ಆಗಿ ವರ್ಗಗೊಂಡಾಗಲೂ ಆಂದೋಲನ ಮುಂದುವರೆಸಿದ್ದರು. ಇದೀಗ ಚನ್ನರಾಯಪಟ್ಟಣದಲ್ಲೂ ಆಂದೋಲನ ನಡೆಸುತ್ತಿದ್ದಾರೆ.
ಸಾಕಷ್ಟು ಭೂ ದಾಖಲೆಗಳಲ್ಲಿನ ನ್ಯೂನತೆಗಳ ಸರಿಪಡಿಸುವಿಕೆ, ವ್ಯಾಜ್ಯಗಳು ತಲೆಮಾರು ಕಳೆದರೂ ಇತ್ಯರ್ಥ ಆಗದೇ ರೈತಾಪಿ ಸಮುದಾಯ ಪರಿತಪಿಸಿದೆ. ಇಂತಹ ಪ್ರಕರಣಗಳನ್ನೇ ಬಂಡವಾಳವಾಗಿಟ್ಟುಕೊಂಡು ಮಧ್ಯವರ್ತಿಗಳು, ಅಧಿಕಾರಿಗಳು ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ.
ರಿಯಲ್ ಎಸ್ಟೇಟ್ ಅಬ್ಬರ ಹೆಚ್ಚಿದ ನಂತರವಂತೂ ರಾಮನಗರ ಜಿಲ್ಲೆಯಲ್ಲಿ ಪ್ರಕರಣಗಳ ಇತ್ಯರ್ಥಕ್ಕೆ ಲಂಚದ ಮೊತ್ತವೂ ಸಾಕಷ್ಟು ಪಟ್ಟು ಹೆಚ್ಚಳವಾಗಿದೆ. ಬಡಬಗ್ಗರು ಕಚೇರಿಗೆ ಅಲೆದು, ಹೈರಾಣಾಗುತ್ತಿದ್ದಾರೆ. ತಡವಾಗಿಯಾದರೂ ಜಿಲ್ಲಾಡಳಿತದ ಪ್ರಯತ್ನ ಶ್ಲಾಘನೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.