ಫಲಾನುಭವಗಳಿಗೆ ನಿವೇಶನ ವಿತರಿಸಲು ಕೋರ್ಟ್ ಆದೇಶ
ಬೆಂಗಳೂರು: ಆನೇಕಲ್ ತಾಲೂಕಿನಲ್ಲಿ ಆಶ್ರಯ ಯೋಜನೆಗಾಗಿ ಗುರುತಿಸಲ್ಪಟ್ಟಿರುವ 781 ನಿವೇಶನಗಳನ್ನು ಫಲಾನುಭವಗಳಿಗೆ ವಿತರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಎಸ್.ಕೆ. ರಾಜ್ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಆಶ್ರಯ ಯೋಜನೆಗೆ ನಿವೇಶನ ಹಂಚಿಕೆಗಾಗಿ ಆನೇಕಲ್ ತಾಲೂಕಿನಲ್ಲಿ ಸರ್ಕಾರ 2007ರಲ್ಲಿ 31.15 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು 781 ನಿವೇಶನಗಳನ್ನು ನಿರ್ಮಿಸಿತ್ತು. ಇದರ ಫಲಾನುಭವಿಗಳಾಗಿ 709 ನಿವೇಶನಗಳನ್ನು ವಿಕಲಚೇತನರು, 64 ಕುಷ್ಠರೋಗದಿಂದ ಗುಣಮುಖರಾದ ವ್ಯಕ್ತಿಗಳು, 8 ಸೈನಿಕ ಕಲ್ಯಾಣ ಸಮಿತಿಯ ಸದಸ್ಯರನ್ನು ಗುರುತಿಸಿತ್ತು. ಆದರೆ, ನಿವೇಶನ ಮಂಜೂರು ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸಿ
ನೆಲಮಂಗಲ: ಅರ್ಚಕರು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಗೌರವಿಸಬೇಕು ಎಂದು ತಾಲೂಕು ಮುಜರಾಯಿ ಇಲಾಖೆ ಕಾರ್ಯನಿರ್ವಹಣಾಧಿಕಾರಿ ಲತಾ ಹೇಳಿದರು.
ಅವರು ಪಟ್ಟಣದ ಪೇಟೇಬೀದಿಯ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದ ಅರ್ಚಕ ಗಂಗಾಧರಶರ್ಮ ಅವರು ಭಕ್ತರೊಬ್ಬರಿಗೆ ನಿಂದಿಸಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿ ಅರ್ಚಕರಿಗೆ ಭಕ್ತರೊಂದಿಗೆ ಸೌಜನ್ಯದಿಂದ ವರ್ತಿಸಲು ಆದೇಶಿಸಿದರು. ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ನಾಮಫಲಕ, ಪೂಜಾ ಸಮಯದ ಫಲಕಗಳನ್ನು ಹಾಗೂ ಹುಂಡಿಯನ್ನು ಇಡುವಂತೆ ತಿಳಿಸಿದರು. ಅರ್ಚಕರು ಹಾಗೂ ವಿವಿಧ ಮಹಿಳಾ ಸಂಘಟಕರಿಗೂ ಕೆಲಕಾಲ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಪ್ರವೇಶಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಲತಾ ಇಬ್ಬರ ಹೇಳಿಕೆ ಪಡೆದು ಪರಿಸ್ಥಿತಿ ಶಾಂತಗೊಳಿಸಿದರು. ಮಹಿಳಾ ಮುಖಂಡರಾದ ಗಂಗಮ್ಮ, ಕಲಾವತಿ, ಜಯಂತಿ, ಶಾರದ ಸೇರಿದಂತೆ ನೂರಾರು ಜನ ಇದ್ದರು.
ಇಂದು ಕರಕುಶಲ, ಚಿತ್ರಕಲಾ ಪ್ರದರ್ಶನ
ಚನ್ನಪಟ್ಟಣ: ಇಲ್ಲಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಕರಕುಶಲ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಜ.11 ರಂದು ಹಮ್ಮಿ ಕೊಂಡಿರುವುದಾಗಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಚಿತ್ರಲಿಂಗೇಶ್ ಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಜಿ.ಪಂ ಅಧ್ಯಕ್ಷ ರಾಜಣ್ಣ ಉದ್ಘಾಟಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ಎಸ್.ಲಿಂಗೇಶ್ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆದರ್ಶಗಳ ತಳಹದಿಯಲ್ಲಿ ಭವಿಷತ್ತನ್ನು ರೂಪಿಸಿಕೊಳ್ಳಿ
ದೊಡ್ಡಬಳ್ಳಾಪುರ: ಇಲ್ಲಿನ ಸರಸ್ವತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದ ಪ್ರತಿಭಾ ವಂತ ವಿದ್ಯಾರ್ಥಿನಿ ಜಿ.ಲಾವಣ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಟಿ.ಗೋಪಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು-ಸಂಯಮ ಮತ್ತು ಸಾಧನಾಶೀಲತೆ ಇರಬೇಕು. ಆ ಗುಣಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಚೈತನ್ಯ ಶಿಕ್ಷಕರಲ್ಲಿರಬೇಕು. ಆಗ ಮಾತ್ರ ಕಲಿಕೆ ಪರಿಪೂರ್ಣವಾಗುತ್ತದೆ. ಉನ್ನತ ಆದರ್ಶಗಳ ತಳಹದಿಯಲ್ಲಿ ನಮ್ಮ ಭವಿಷ್ಯತ್ತನ್ನು ರೂಪಿಸುವ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುಳಾ, ಮುಖ್ಯಶಿಕ್ಷಕ ಬಿ.ಕೆ.ಸಂಪತ್ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭ
ಚನ್ನಪಟ್ಟಣ: ಪಟ್ಟಣದ ಸರ್ಕಾರಿ ಬಾಲಕಿಯರ ಪದವೀಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜ.11 ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಕಾಲೇಜುಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಡಿ. ಲಿಂಗರಾಜು, ಗಾಯಕಿ ಶಾರದಾ ನಾಗೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ದತ್ತಿ ಉಪನ್ಯಾಸ
ಚನ್ನಪಟ್ಟಣ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ.11 ರಂದು ಪಟ್ಟಣದ ವಿರಕ್ತಮಠದ ವಿಶ್ವೇಶ್ವರಯ್ಯ ಐಟಿಐ ಕಾಲೇಜು ಆವರಣದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಿರಕ್ತಮಠದ ಪೀಠಾಧ್ಯಕ್ಷ ಚರಮೂರ್ತಿ ಶಿವರುದ್ರಮಹಾಸ್ವಾಮಿಗಳು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ವಹಿಸಲಿದ್ದಾರೆ.
ವಿಶೇಷ ಉಪನ್ಯಾಸ, ಗೀತಗಾಯನ ಕಾರ್ಯಕ್ರಮ
ಚನ್ನಪಟ್ಟಣ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸನ್ರೈಸ್ ಯುವಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜನ್ಮ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಮತ್ತು ಗೀತಗಾಯನ ಕಾರ್ಯಕ್ರಮವನ್ನು ಇಲ್ಲಿನ ನ್ಯೂ ಮಿಲೇನಿಯಂ ಕಾನ್ವೆಂಟ್ ಆವರಣದಲ್ಲಿ ಜ.13 ರಂದು ಹಮ್ಮಿ ಕೊಳ್ಳಾಗಿದೆ.
16ರಂದು ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಜಿಲ್ಲಾ ಪಂಚಾಯಿತಿಯ ಡಿಸೆಂಬರ್ ಮಾಹೆಯ ಪ್ರಗತಿ ಪರಿಶೀಲನಾ ಸಭೆಯು ಜ.16ರ ಬೆಳಗ್ಗೆ 11ಕ್ಕೆ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಯೋಜನಾಧಿಕಾರಿ ಧನುಷ್ ತಿಳಿಸಿದ್ದಾರೆ.
ಬರಪರಿಸ್ಥಿತಿ, ಪ್ರಕೃತಿ ವಿಕೋಪ; ಸಭೆ
ರಾಮನಗರ: ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಜ.18ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಕ್ರಿಯಾ ಯೋಜನೆಯನ್ನು ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ದೂಣ080-27276615 ಕರೆ ಮಾಡಬಹುದು. ಈ ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ದೇವನಹಳ್ಳಿ: ತಾಲೂಕು ಸ್ವಾಮಿ ವಿವೇಕಾನಂದರ 150 ನೇ ವರ್ಷದ ಜನ್ಮ ದಿನೋತ್ಸವ ಆಚರಣಾ ಸಮಿತಿಯವರು ಶನಿವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ದೇವನಹಳ್ಳಿ ಸೂಲಿಬೆಲೆ ರಸ್ತೆಯಲ್ಲಿರುವ ನಳಂದ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕರು ತಿಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಸೂಲಿಬೆಲೆ ನಿವೃತ್ತ ಶಿಕ್ಷಕ ದೇವಿದಾಸಿ ಸುಬ್ರಾಯ ಸೇಠ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ವಕೀಲ ವಿವೇಕರೆಡ್ಡಿ ಹಾಗೂ ತರಬೇತುದಾರ ವಿನಯ್ ಜಾದವ್, ಪ್ರಾಂಶುಪಾಲ ವೆಂಕಟೇಶಗೌಡ ಮತ್ತು ಬಿ.ಎನ್. ಕೃಷ್ಣಪ್ಪ ಆಗಮಿಸಲಿದ್ದಾರೆ.
ಇಂದು ಸಚಿವರ ಭೇಟಿ
ರಾಮನಗರ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಅವರು ಜ.11ರ ಮಧ್ಯಾಹ್ನ 2ಕ್ಕೆ ಚನ್ನಪಟ್ಟಣ ತಾಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತ್ತು ರಾಮನಗರ ಜಿಲ್ಲಾ ಗಂಗಾಮತಸ್ಥರ ಜಾಗೃತ ವೇದಿಕೆ ಏರ್ಪಡಿಸಿರುವ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಾರ್ವಜನಿಕ ಕುಂದುಕೊರತೆಗಳ ಸಭೆ ನಡೆಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

