ಸತ್ತ ಗರ್ಭಿಣಿ ಚಿರತೆ ನಾರಸಂದ್ರ ಶಾರ್ಕ್ ಬಳಿ ಪತ್ತೆ
ಮಾಗಡಿ : ರಾಷ್ಟ್ರೀಯ ಹೆದ್ದಾರಿ 48ರ ನಾರಸಂದ್ರದ ಶಾರ್ಕ್ ಡಾಬಾ ಬಳಿ ಸತ್ತ ಗರ್ಭಿಣಿ ಚಿರತೆಯೊಂದು ಪತ್ತೆಯಾಗಿರುವುದಾಗಿ ವಲಯ ಅರಣ್ಯಾಧಿಕಾರಿ ಕೆ.ಎನ್. ಕೆಂಪರಾಜು ತಿಳಿಸಿದ್ದಾರೆ. ಕಳೆದ ರಾತ್ರಿ ರಸ್ತೆ ದಾಟುತ್ತಿದ್ದ ಗರ್ಭಿಣಿ ಚಿರತೆಯ ಮೇಲೆ ಯಾವುದೋ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಚಿರತೆಯ ತಲೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಚಿರತೆ ಇಡೀ ರಾತ್ರಿ ನೋವಿನಿಂದ ನರಳಿ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸತ್ತ ಚಿರತೆಯನ್ನು ಪಶು ವೈದ್ಯೆ ಡಾ. ಜ್ಯೋತಿ ಅವರಿಂದ ಮಹಜರ ನಡೆಸಲಾಯಿತು. ಮಹಜರ್ ವೇಳೆ ಗರ್ಭಿಣಿ ಚಿರತೆಯ ಹೊಟ್ಟೆಯಲ್ಲಿ ಭ್ರೂಣಾವಸ್ಥೆಯಲ್ಲಿದ್ದ ಎರಡು ಚಿರತೆ ಮರಿಗಳಿದ್ದವು.
ಸುಳ್ಳು ದಾಖಲೆ ನೀಡಿ ಕೆಲಸ: ಗುಮಾಸ್ತೆ ಅಮಾನತು
ರಾಮನಗರ: ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಸೇವೆ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಜಿ.ಪಂ. ದ್ವಿತೀಯ ದರ್ಜೆ ಸಹಾಯಕಿ ರಾಧಮ್ಮ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ. ಸಿಇಒ ಡಾ.ಎಂ.ವಿ. ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.
ಗುಮಾಸ್ತೆ ರಾಧಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಉದ್ದೇಶ ಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಒದಗಿಸಿದ್ದರು. ಈ ಕುರಿತು ಅನುಮಾನದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಾಗ ಅದು ರುಜುವಾತಾಗಿದ್ದು, ಅವರನ್ನು ಅಮಾನತು ಪಡಿಸಲಾಗಿದೆ ಎಂದು ವೆಂಕಟೇಶ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಧಮ್ಮ ಅವರು ಶಾಲಾ ದಾಖಲಾತಿ, ವರ್ಗಾವಣೆ ಪ್ರಮಾಣ ಪತ್ರ ನಕಲಿಯಾಗಿವೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಓದಿರುವ ಬಗ್ಗೆ ಅಸಲು ವರ್ಗಾವಣೆ ಪತ್ರ ಹಾಗೂ ಜನ್ಮ ದಿನಾಂಕದ ಬಗ್ಗೆ ಶಾಲಾ ದಾಖಲಾತಿಗಳ ಮೂಲ ಪ್ರಮಾಣ ಪತ್ರಗಳನ್ನು ಹಾಜರುಪಡಿಸಲು ಸೂಚಿಸಿದರೂ ಅವರು ಸಲ್ಲಿಸಿಲ್ಲದಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ.
ಕಲ್ಯಾಣಿ ಪುನಶ್ಚೇತನಕ್ಕೆ ನಿರ್ಧಾರ: ಜಿಲ್ಲಾಧಿಕಾರಿ
ರಾಮನಗರ: ಜಿಲ್ಲೆಯಲ್ಲಿ ಮುಚ್ಚಿಹೋಗಿ ಇತಿಹಾಸವಾಗಿರುವ ಹಾಗೂ ಅವಸಾನದ ಅಂಚಿನಲ್ಲಿರುವ ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತೀರ್ಮಾನ ಕೈಗೊಂಡಿದ್ದಾರೆ
ಈ ಹಿನ್ನೆಲೆಯಲ್ಲಿ ಕಲ್ಯಾಣಿಗಳು, ಕೆರೆ ಕಟ್ಟೆಗಳ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಜಿಲ್ಲೆಯ ನಾಲ್ಕೂ ತಾಲೂಕು ಆಡಳಿತಗಳಿಗೆ ಈಗಾಗಲೇ ಅವರು ಸೂಚನೆ ನೀಡಿದ್ದು, ಇದಕ್ಕಾಗಿ ಕಾಲಮಿತಿಯ ಗಡುವನ್ನು ವಿಧಿಸಿದ್ದಾರೆ.
ಸಮೀಕ್ಷಾ ವರದಿ ಬಂದ ನಂತರ ಸಾರ್ವಜನಿಕರು, ಸಂಬಂಧಿಸಿದ ಇಲಾಖೆಗಳ ಸಹಭಾಗಿತ್ವದಲ್ಲಿ ಕಲ್ಯಾಣಿ, ಕೆರೆ, ಕಟ್ಟೆಗಳ ಪುನರುಜ್ಜೀವನಕ್ಕೆ ಚಾಲನೆ ನೀಡುವ ಇರಾದೆಯನ್ನು ಜಿಲ್ಲಾಧಿಕಾರಿ ವಿಶ್ವನಾಥ್ ಹೊಂದಿದ್ದಾರೆ. ಇದಕ್ಕಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ನೆರವನ್ನೂ ಅವರು ಬಯಸಿದ್ದಾರೆ.
ಹಿರೇಮಠ್ ವಿರುದ್ಧ ಇಕ್ಬಾಲ್ ಕಿಡಿ
ರಾಮನಗರ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ತಪ್ಪಿತಸ್ಥ ಎಂದು ಯಾವ ನ್ಯಾಯಾಲಯವೂ ಆದೇಶ ಹೊರಡಿಸಿಲ್ಲ, ಹೀಗಿರುವಾಗ ಅವರನ್ನು ಕಳಂಕಿತ ಎನ್ನಲು ಹಿರೇಮಠ್ ಯಾರು ಎಂದು ಜಿ.ಪಂ. ವಿರೋಧ ಪಕ್ಷದ ನಾಯಕ ಇಕ್ಬಾಲ್ ಹುಸೇನ್ ಪ್ರಶ್ನಿಸಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿರುವ ಪ್ರಕರಣಗಳಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಮುಂದಿಟ್ಟುಕೊಂಡು ಹಿರೇಮಠ್ ಬೊಬ್ಬೆ ಹಾಕುತ್ತಿದ್ದಾರೆ. ಶಿವಕುಮಾರ್ ಅವರನ್ನು ಅಪರಾಧಿ ಇಲ್ಲವೇ ಕಳಂಕಿತ ಎನ್ನಲು ಹಿರಮೇಠ್ ಅವರಿಗೆ ಅಧಿಕಾರ ಏನಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸುವ ಹಕ್ಕು ನ್ಯಾಯಾಲಯಕ್ಕೆ ಮಾತ್ರ ಇದೆ. ಹಿರೇಮಠ್ ಅವರು ವೈಯಕ್ತಿಕ ದ್ವೇಷ, ದುರುದ್ದೇಶದಿಂದ ಶಿವಕುಮಾರ್, ಸುರೇಶ್ ಸಹೋದರರ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಹುಸೇನ್ ಟೀಕಿಸಿದ್ದಾರೆ.
ಜನಪದ ಮರೆತರೆ ಜೀವನವೇ ಇಲ್ಲ
ರಾಮನಗರ: ಇಂದಿನ ಸಮಾಜದಲ್ಲಿ ಜಾನಪದ ಮೌಲ್ಯಗಳನ್ನು ಮರೆತು ಧನ-ದಾಹ, ದುರಾಸೆ, ಅಧಿಕಾರದಾಹ, ಅಂಹಕಾರ, ಒಣ ಪ್ರತಿಷ್ಠೆ, ಬೂಟಾಟಿಕೆ ಜೀವನ ಕ್ರಮವನ್ನು ಮೈಗೂಡಿಸಿಕೊಂಡವರೇ ಹೆಚ್ಚಾಗಿದ್ದಾರೆ. ಜನಪದ ಸಂಸ್ಕೃತಿ ಮರೆತರೆ ಜೀವನವೇ ಇಲ್ಲ ಎಂದು ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಚಿಕ್ಕಮುದವಾಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ರಸಗ್ರಹಣ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಕುರಿತು ಮಾತನಾಡಿದ ಅವರು, ಜಾಗತೀಕರಣ, ಆಧುನಿಕರಣ, ನಗರೀಕರಣಗಳು ನಮ್ಮೆಲ್ಲರ ನಿರ್ಮಲ ಬದುಕಿನ ಬೇರುಗಳನ್ನು ಕಿತ್ತುಹಾಕುತ್ತಿವೆ ಎಂದು ವಿಷಾದಿಸಿದರು. ತಾಯಿ, ತಂದೆ, ಸೋದರಿ, ಮಡದಿಯಾಗಿ ಬದುಕನ್ನು ಪಾಲಿಸಿ ಪೋಷಿಸಿದ ಜಾನಪದವನ್ನು ನಾವೆಂದಿಗೂ ಬದಿಗೊತ್ತಬಾರದು ಎಂದರು.
ಐಜೂರು ಶಾಲೆಯಲ್ಲಿ ಸಾಂಸ್ಕೃತಿಕ ಸೌರಭ
ರಾಮನಗರ: ನಮ್ಮ ಜಾನಪದ ಸಂಸ್ಕೃತಿಯೇ ಎಲ್ಲಾ ಪಾಶ್ಚಿಮಾತ್ಯ ಕಲೆ, ಸಂಗೀತ, ನೃತ್ಯಕ್ಕೆ ತಾಯಿ ಇದ್ದಂತೆ. ನಾವಿಂದು ಪಾಶ್ಚಾತ್ಯರನ್ನು ಅನುಕರಿಸಲು ಹೋಗಿ ಮೂಲ ಬೇರು ಆಗಿರುವ ಜಾನಪದವನ್ನು ಕಡೆಗಣಿಸಿರುವುದು ಅನರ್ಥಕ್ಕೆಡೆ ಮಾಡಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಿ.ಬಿ.ಪವಿತ್ರ ವಿಷಾದಿಸಿದರು. ನಗರದ ಐಜೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮತ ಟ್ರಸ್ಟ್ ಮತ್ತು ಚನ್ನೇನಹಳ್ಳಿಯ ಸಾಕ್ಯ ಸಂಘದಿಂದ ನಡೆದ ಸಾಂಸ್ಕೃತಿಕ ಸಂಭ್ರಮ, ಗಾಯನ, ವಾದ್ಯ, ಸಂಗೀತ ಮತ್ತು ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಾನಪದಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎನ್ನುವುದನ್ನು ಮರೆಯಬಾರದು ಎಂದರು. ವಿಚಾರ ಗೋಷ್ಠಿಯಲ್ಲಿ ಉಪನ್ಯಾಸಕ ವಿ.ಆನಂದ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಸಚಿವ ವೀರಪ್ಪ ಮೊಯ್ಲಿ ವಿರುದ್ಧ ನಾಳೆ ಪ್ರತಿಭಟನೆ
ಸೂಲಿಬೆಲೆ: ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಸಚಿವ ವೀರಪ್ಪ ಮೊಯ್ಲಿ ವಿರುದ್ದ ಜ.13 ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹೊಸಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೊಸಕೋಟೆ ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದ್ದಾರೆ.
ಅಗತ್ಯ ದಿನ ಬಳಿಕೆ ವಸ್ತುಗಳಾದ ಅಡಿಗೆ ಅನಿಲ , ಆಟೋ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ಕೇಂದ್ರದ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಹಾಗೂ ಯುಪಿಎ ಸರ್ಕಾರದ ದುರಾಡಳಿತ, ಹಗರಣಗಳನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಾಸಕರಿಂದ ರಸ್ತೆ ಕಾಮಗಾರಿ ಪರಿಶೀಲನೆ
ದೊಡ್ಡಬಳ್ಳಾಪುರ: ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಮೊದಲ ಹಂತದಲ್ಲಿ ಕೈಗೊಳ್ಳಲಾಗಿರುವ 4.80 ಕೋಟಿ ರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಟಿ.ವೆಂಕಟರಮಣಯ್ಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಬಿಎಂಪಿ ಸಕ್ಕರೆಗೊಲ್ಲಹಳ್ಳಿ ವ್ಯಾಪ್ತಿಯ ಟೆರ್ರಾಫಾರಂನಲ್ಲಿ ಕಸ ತಂದು ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಸುತ್ತಮುತ್ತಲ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮೊದಲ ಹಂತದಲ್ಲಿ 4.80 ಕೋಟಿ ಬಿಡುಗಡೆ ಮಾಡಿದೆ. ಆ ಹಣದಲ್ಲಿ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. 2ನೇ ಹಂತದಲ್ಲಿ ಸಕ್ಕರೆಗೊಲ್ಲಹಳ್ಳಿ, ಖಾಲಿಪಾಳ್ಯ, ಕಾಮನಅಗ್ರಹಾರ ಗ್ರಾಮಗಳಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.
ನೇಯ್ಗೆ ಬೀದಿ ಶಾಲೆಯಲ್ಲಿ ಕಲಿಕೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ನೇಯ್ಗೆ ಬೀದಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ತಿಮ್ಮೇಗೌಡ ಉದ್ಘಾಟಿಸಿದರು. ಅವರು ಮಾತನಾಡಿ ಮಕ್ಕಳು ಕಲಿಕೆಯಲ್ಲಿ ಸ್ವಯಂ ಆಸಕ್ತಿ ರೂಡಿಸಿಕೊಳ್ಳುವಂತೆ ಪ್ರಚೋದಿಸುವ ಅಗತ್ಯವಿದೆ. ಸೃಜನಶೀಲತೆ ಬೆಳೆಸುವ ಶಿಕ್ಷಣ ನೀಡಬೇಕು. ಮಕ್ಕಳಿಗೆ ಪಠ್ಯ ಹೊರೆಯಾಗಬಾರದು. ಪಠ್ಯದ ವಿಚಾರಗಳು, ಕಲಿಕೆಯ ಪ್ರಕ್ರಿಯೆ ಮತ್ತು ಶೈಕ್ಷಣಿಕ ಗುಣಮಟ್ಟ ಯಾವತ್ತೂ ಹೊಸಬಗೆಯ ಆಲೋಚನೆಗಳನ್ನು ಬೆಳೆಸುವಂತಿರಬೇಕು. ಸಂತಸದಾಯಕ ಕಲಿಕೆಗೆ ಮತ್ತು ಸ್ವಯಂ ಪ್ರೇರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಲಿಕೆಯನ್ನು ಸುಧಾರಿಸುವ ಮತ್ತು ಗುಣಮಟ್ಟದ ಚಿಂತನೆಗಳನ್ನು ಬಿತ್ತುವ ಕೆಲಸ ಆಗಬೇಕು. ಪಠ್ಯ ಬೋಧನೆ ಯಾಂತ್ರಿಕವಾಗದೆ, ಉತ್ಸಾಹ ಮೂಡಿಸುವಂತಿರಬೇಕು ಎಂದರು.
ಸೇವಾಮನೋಭಾವ ರೂಪಿಸಲು ಎನ್ಎಸ್ಎಸ್ ಅತ್ಯುತ್ತಮ ವೇದಿಕೆ
ಕನಕಪುರ: ಮಕ್ಕಳಲ್ಲಿ ಶಾಲಾದಿನಗಳಿಂದಲೇ ರಾಷ್ಟ್ರೀಯತೆ, ಭಾವೈಕ್ಯತೆ, ಸೋದರತೆ, ಸೇವಾಮನೋಭಾವಗಳನ್ನು ರೂಪಿಸಲು ರಾಷ್ಟ್ರೀಯ ಸೇವಾದಳ ಅತ್ಯುತ್ತಮ ವೇದಿಕೆಯಾಗಿದೆ ಎಂದು ಆರಕ್ಷಕ ಉಪನಿರೀಕ್ಷಕ ಮಲ್ಲೇಶ್ ಹೇಳಿದ್ದಾರೆ. ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದ ಉದ್ಘಾಟನೆಯನ್ನು ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಸೇವಾದಳ ತಾ.ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸುಮಾರು ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಾಮೂಹಿಕವಾಗಿ ಬ್ಯಾಂಡ್ಬಾರಿಸುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭಾತ್ಪೇರಿ ನಡೆಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆರಕ್ಷಕ ವೃತ್ತನಿರೀಕ್ಷಕ ಸಿದ್ದೇಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಡಾ.ಕೆ.ಎಸ್.ಮಂಜುನಾಥ್, ಎಂ.ಆರ್. ಮುನಿಯಪ್ಪ ಪಾಲ್ಗೊಂಡಿದ್ದರು.
ದೇಗುಲದಲ್ಲಿ ವಿಶೇಷ ವೈಕುಂಠ ದ್ವಾರ ನಿರ್ಮಾಣ
ದೇವನಹಳ್ಳಿ: ಇಲ್ಲಿನ ಮರಳು ಬಾಗಿಲು ರಸ್ತೆಯಲ್ಲಿರುವ ಶ್ರೀ ರಂಮಗನಾಥ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವೈಕುಂಠದ್ವಾರದ ಮೂಲಕವೇ ಪ್ರವೇಶಿಸಿ ಮೂಲ ದೇವರ ದರ್ಶನ ಪಡೆಯುವ ಹಾಗೆ ಆಯೋಜಿಸಿದ್ದರು. ಶನಿವಾರ ಬೆಳಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾಕಾರ್ಯಗಳು ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದು ತಮ್ಮ ಕೋರಿಕೆಗಳೊಂದಿಗೆ ಭಕ್ತಿ ಸಮರ್ಪಣೆ ಮಾಡಿದರು. ದೇವಾಲಯ ಭಕ್ತ ಮಂಡಳಿಯ ಮುಖ್ಯಸ್ಥರಾದ ಗೋಪಾಲಪ್ಪ, ವಿಶ್ವ ಹಿಂದೂ ಪರಿಷತ್ತಿನ ಮಧುಸೂಧನ್ ಹಾಗೂ ಪಿ.ವಿಶ್ವನಾಥ್ ವೈಕುಂಠದ್ವಾರ ನಿರ್ಮಾಣದ ಕಾರ್ಯ ನಿರ್ವಹಿಸಿದ್ದರು. ಇದೇ ದಿನ ದೊಡ್ಡಬಳ್ಳಾಪುರ ಬೈಪಾಸ್ ರಸ್ತೆಯಲ್ಲಿರುವ ಶ್ರೀ ವಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಖ, ತೋಮಾಲೆ ಸೇವೆ, ಕುಂಕುಮಾರ್ಚನೆ ಕ್ಷೀರ ಸಹಸ್ರ ಕಳಶಾಭಿಷೇಕ ಅಲ್ಲದೆ ವೈಕುಂಠ ದ್ವಾರ ದರ್ಶನ ಸೇವೆಗಳನ್ನು ಶ್ರೀ ಪೂಜ್ಯಾಯ ಆಭರಣ ಮಳಿಗೆಯ ಮಾಲೀಕ ರಜನಿ ಎ.ಪಿ.ಸತ್ಯನಾರಾಯಣ ಮಾಡಿಸಿದ್ದರು. ಬಜಾರು ರಸ್ತೆಯಲ್ಲಿರುವ ವಾಸವಿ ದೇವಾಲಯದಲ್ಲೂ ವೈಕುಂಠ ದ್ವಾರ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ದೊಡ್ಜಬಳ್ಳಾಪುರದಲ್ಲಿ ವೈಕುಂಠ ಏಕಾದಶಿ ಸಂಭ್ರಮ
ದೊಡ್ಡಬಳ್ಳಾಪುರ: ವೈಕುಂಠ ಏಕಾದಶಿ ಅಂಗವಾಗಿ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾಲಂಕಾರಗಳು ನಡೆದವು. ಸಾವಿರಾರು ಭಕ್ತರು ಬೆಳಗ್ಗಿನಿಂದ ರಾತ್ರಿಯವರೆಗೆ ಸರತಿಯಲ್ಲಿ ನಿಂತು ಶ್ರೀಸ್ವಾಮಿಯ ದರ್ಶನ ಪಡೆದರು. ವೈಕುಂಠ ಏಕಾದಶಿ ಅಂಗವಾಗಿ ದೇವರ ದರ್ಶನಕ್ಕೆ ವೈಕುಂಠ ದ್ವಾರದಿಂದ ಪ್ರವೇಶ ನೀಡಲಾಗಿತ್ತು. ಅಲ್ಲದೆ ದೇವಾಲಯದ ಮೂಲ ದೇವರಿಗೆ ವಜ್ರ ಕವಚ ಅಲಂಕಾರ ಮಾಡಲಾಗಿತ್ತು. ವರ್ಷಕ್ಕೊಮ್ಮೆ ವೈಕುಂಠ ಏಕಾದಶಿಯಂದು ಮಾತ್ರ ಉತ್ತರ ದ್ವಾರದ ಮೂಲಕ ಶ್ರೀಸ್ವಾಮಿಯ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿನ ಶ್ರೀಪದ್ಮಾವತಿ ದೇವಿ, ಶ್ರೀಗಣಪತಿ, ದೇವಾಲಯ ಪ್ರಾಂಗಣದಲ್ಲಿರುವ ಶ್ರೀಆದಿನಾರಾಯಣಸ್ವಾಮಿ ದೇವರುಗಳಿಗೂ ವಿಶೇಷಾಲಂಕಾರ ಏರ್ಪಡಿಸಲಾಗಿತ್ತು.
ಕಾವ್ಯದ ಪರಿಮಳ ಪಸರಿಸಲು ಗಮಕ ಮುಖ್ಯ
ಚನ್ನಪಟ್ಟಣ: ಹೂವಿನಲ್ಲಿರುವ ಗಂಧವನ್ನು ಪಸರಿಸಲು ಹೇಗೆ ಗಾಳಿ ಅಗತ್ಯವೋ ಹಾಗೆಯೇ ಕಾವ್ಯದಲ್ಲಿ ಪರಿಮಳವನ್ನು ಕಾವ್ಯ ರಸಿಕರಿಗೆ ಪಸರಿಸಲು ಗಮಕವೂ ಅಷ್ಟೇ ಪ್ರಮುಖವಾದುದು ಎಂದು ತಾಲೂಕು ಗಮಕ
ಪರಿಷತ್ನ ಅಧ್ಯಕ್ಷ ಸಿ.ವಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.ಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ಪರಿಷತ್ತು ಹಮ್ಮಿಕೊಂಡಿದ್ದ ಚಂದ್ರವಂಶ ಕುಮಾರರ ಬಾಲ್ಯ ಕುರಿತ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನ 64 ಕಲೆಗಳಲ್ಲಿ ಗಮಕವೂ ಒಂದು ಕಲೆಯಾಗಿದ್ದು ಇತ್ತೀಚಿನ ಕಾಲಘಟ್ಟದಲ್ಲಿ ಎದುರಾಗಿರುವ ಸವಾಲುಗಳಿಂದಾಗಿ ಗಮಕ ಯುವ ಮಾನಸದಿಂದ ದೂರಾಗುತ್ತಿದ್ದು ಗಮಕದ ಸಾರವನ್ನು ಪ್ರಚುರ ಪಡಿಸಲು ನಮ್ಮ ಪರಿಷತ್ತು ಶ್ರಮಿಸುತ್ತಿದೆ ಎಂದರು. ಹಿಂದೆ ಗಮಕ ಸಾಹಿತ್ಯವನ್ನು ಮನೆಮನೆಗಳಲ್ಲಿ ಹಾಡುತ್ತಿದ್ದರು, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರಜ್ಞಾವಂತರು ಗಮಕವನ್ನು ಬಾಯಿಪಾಠ ಮಾಡುಕೊಂಡು ಹೇಳುತ್ತಿದ್ದರು. ಜಾಗತೀಕರಣದ ಹೊಡೆತಕ್ಕೆ ನಮ್ಮ ಸಂಸ್ಕೃತಿ ಸಿಲುಕಿದ ಪರಿಣಾಮ ಗಮಕವನ್ನು ಕಲಿಯುವವರು ಕಲಿಸುವವರು ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಕಲ್ಲಹಳ್ಳಿ ದೇವಾಲಯದಲ್ಲಿ ವೈಕುಂಠ ಏಕಾದಶಿ
ಕನಕಪುರ: ಚಿಕ್ಕತಿರುಪತಿ ಎಂದೇ ಹೆಸರಾಗಿರುವ ಕನಕಪುರ ತಾಲೂಕಿನ ಕಲ್ಲಹಳ್ಳಿಯ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತಾದಿಗಳು ವೈಕುಂಠ ದ್ವಾರದ ಮೂಲಕ ಸ್ವಾಮಿಯನ್ನು ದರ್ಶಿಸಿ ಪುನೀತರಾದರು. ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ದೇವರ ದರ್ಶನಕ್ಕೆ ಮೈಲಿಗಟ್ಟಲೆ ಸರದಿ ಸಾಲು ಸೇರಿತ್ತು.
ಸಾವಿರಾರು ಜನರು ಉತ್ಸಾಹ ಹಾಗೂ ಭಕ್ತಿ ಭಾವಗಳಿಂದ ದೇವರ ದರ್ಶನ ಪಡೆದರು. ಕಲ್ಲಹಳ್ಳಿ ಶ್ರೀನಿವಾಸ ಸೇವಾಸಮಿತಿ ವತಿಯಿಂದ ಆಗಮಿಸಿದ್ದ ಭಕ್ತಾದಿಗಳಿಗೆ ಸಿಹಿತಿಂಡಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಪ್ರಧಾನ ಅರ್ಚಕರಾದ ಆರ್. ಸುದರ್ಶನ್ ನೇತೃತ್ವ ವಹಿಸಿದ್ದರು.
ಬೈಸಿಕಲ್ ಸದ್ಬಳಕೆ ಮಾಡಿಕೊಳ್ಳಿ
ಚನ್ನಪಟ್ಟಣ: ವಿದ್ಯಾರ್ಥಿಗಳು ಸರ್ಕಾರದ ವತಿಯಿಂದ ದೊರಕುವ ಬೈಸಿಕಲ್ಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಗೈಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಗೈಯ್ಯಬೇಕೆಂದು ಮಂಗಳವಾರ ಪೇಟೆ ಪ್ರೌಢಶಾಲಾ ಮುಖ್ಯಶಿಕ್ಷಕಿ ನಿರ್ಮಲಾ ಕರೆ ನೀಡಿದರು. ಶಾಲಾ ಆವರಣದಲ್ಲಿ ನಡೆದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಕಾಲದಲ್ಲಿ ಶಾಲೆಗೆ ಬರಬೇಕೆಂಬ ಕಾರಣಕ್ಕೆ ಸರ್ಕಾರ ಸೈಕಲ್ ವಿತರಣೆ ಮಾಡುತ್ತಿದ್ದು ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಶಶಿಕುಮಾರ್, ಗೋಪಾಲಕೃಷ್ಣ, ಮಾಜಿ ನಗರಸಭಾ ಸದಸ್ಯ ಶ್ರೀನಿವಾಸ್ , ಸಮಾಜ ಸೇವಕ ಸತ್ಯ ನಾರಾಯಣ್, ತಿಮ್ಮರಾಜು, ರಾಮಣ್ಣ, ರವಿ, ಬಾಬು, ಲತಾ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕೃಷ್ಣಮೂರ್ತಿ ಮತ್ತು ಅಂಕೇಗೌಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

