ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ಎಂ.ಜಿ. ಚಂದ್ರಶೇಖರಯ್ಯಗೆ ಸನ್ಮಾನ
ದೊಡ್ಡಬಳ್ಳಾಪುರ: ಮಡಿಕೇರಿಯಲ್ಲಿ 3 ದಿನಗಳ ಕಾಲ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ನಡೆದ ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪ್ರಾಧ್ಯಾಪಕರಾಗಿ ಮತ್ತು ವಿಮರ್ಶಕರಾಗಿ ಮನ್ನಣೆಗಳಿಸಿರುವ ಇಲ್ಲಿನ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅವರಿಗೆ ಸನ್ಮಾನ ನಡೆಯಿತು.
ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಚಂದ್ರಶೇಖರಯ್ಯ, ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅವರ ಕೆಲ ಪುಸ್ತಕಗಳು ಪ್ರಕಟಣೆಗೊಂಡಿದ್ದು, ಸಾಹಿತ್ಯ ಮತ್ತು ಭಾಷೆಯ ಕುರಿತು ವಿದ್ಯಾರ್ಥಿಗಳಲ್ಲಿ ಹೊಸಬಗೆಯ ಓದನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.
ಬಿಳಿಕಲ್ಬೆಟ್ಟದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಕನಕಪುರ: ತಾಲೂಕು ಮರಳವಾಡಿ ಹೋಬಳಿಯ ಬಿಳಿಕಲ್ಬೆಟ್ಟದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಜ.16 ರ ಬನದ ಹುಣ್ಣಿಮೆಯಂದು ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಧರ್ಮದರ್ಶಿ ಮರಳವಾಡಿ ಎಂ.ವಿ. ಕೃಷ್ಣಮೂರ್ತಿ ಕೋರಿದ್ದಾರೆ. ಕನಕಪುರದಿಂದ ಸುಮಾರು 15 ಕಿಮೀ ದೂರದಲ್ಲಿ ಬೆಟ್ಟದ ಮೇಲೆ ನೆಲೆಸಿರುವ ರಂಗನಾಥಸ್ವಾಮಿ ಕಾಡಿನ ನಡುವೆಯಿರುವ ರಮಣೀಯ ತಾಣ ಪ್ರೇಕ್ಷಕರು ಹಾಗೂ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು, ಜಾತ್ರೆಯ ವೇಳೆಯಲ್ಲಿ ಮಾತ್ರ ರಂಗನಾಥಸ್ವಾಮಿ ದೇವಾಲಯದ ವರೆಗೆ ಕನಕಪುರದಿಂದ ಖಾಸಗೀ ವಾಹನಗಳ ವ್ಯವಸ್ಥೆಯಿರುತ್ತದೆ. ಸಮೀಪದ ಸುಂಡಘಟ್ಟ ಗ್ರಾಮದ ವರೆಗೆ ಸರ್ಕಾರಿ ವಾಹನಗಳ ಸೌಲಭ್ಯವಿದೆ ಎಂದು ಮರಳವಾಡಿ ಉಮಾಶಂಕರ್ ತಿಳಿಸಿದ್ದಾರೆ.
ಇಂದು ನೇತ್ರತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
ಕನಕಪುರ: ರೋಟರಿ ಕನಕಪುರ ಹಾಗೂ ಆನಂದಜ್ಯೋತಿ ಸೇವಾಟ್ರಸ್ಟ್, ನಾರಾಯಣ ನೇತ್ರಾಲಯ ಬೆಂಗಳೂರು ವತಿಯಿಂದ ಉಚಿತ ನೇತ್ರತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಜ.12 ರಂದು ಭಾನುವಾರ ಬೆಳಗ್ಗೆ ಕನಕಪುರದ ರೋಟರಿ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಸರಾಂತ ನೇತ್ರತಜ್ಞರು ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕಗಳನ್ನು ವಿತರಿಸಲಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿದ್ದವರಿಗೆ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಉಚಿತ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಗವಾರ ಗ್ರಾ.ಪಂ
ಅಧ್ಯಕ್ಷ ಶಂಭೂಗೌಡ
ಚನ್ನಪಟ್ಟಣ: ತಾಲೂಕಿನ ನಾಗವಾರ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಎನ್.ಎಂ. ಶಂಭೂಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಸಹ ಗ್ರಾ.ಪಂ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಶಂಭೂಗೌಡರನ್ನು ಎಲ್ಲಾ ಸದಸ್ಯರು ಬೆಂಬಲಿಸಿದ ಹಿನ್ನೆಲೆಯಲ್ಲಿ ಇವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಚುನಾವಣೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಶಿವಪ್ಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಗ್ರಾ.ಪಂ ಸದಸ್ಯರು ಮತ್ತು ಗ್ರಾಮದ ಮುಖಂಡರು ಹಾಗೂ ಜನತೆಗೆ ಅಭಿನಂದನೆ ಸಲ್ಲಿಸಿರುವ ಶಂಭೂಗೌಡ ಗ್ರಾ.ಪಂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆಸಲ್ಲಿಸುವ ಮೂಲಕ ಪಂಚಾಯಿತಿಯನ್ನು ಮಾದರಿಯಾಗಿಸಲು ಶ್ರಮಿಸುವೆ ಎಂದು ತಿಳಿಸಿದ್ದಾರೆ. ಶಂಭೂಗೌಡರನ್ನು ಸಾರ್ವಜಿನಿಕ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎಸ್.ಗೌಡ, ಜಿ.ಪಂಸದಸ್ಯ ರಘುಕುಮಾರ್, ಸಿದ್ದಪ್ಪ, ಬೋರೇಗೌಡ, ಕರೀಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಮುಂತಾದವರು ಅಭಿನಂದಿಸಿದ್ದಾರೆ.
ದೇವನಹಳ್ಳಿಯಲ್ಲಿ ತಾಲೂಕು ಮಟ್ಟದ ಕಲಿಕೋತ್ಸವ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕಲಿಕೋತ್ಸವ ಸಮಾರಂಭ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೆಜು ಆವರಣದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಒಂದರಿಂದ ಎಂಟನೆಯ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಶಿಕ್ಷಣಕ್ಕೆ ಸಂಬಂಧಪಟ್ಟಹಾಗೆ ವಿವಿಧ ಕಾರ್ಯಕ್ರಮಗಳನ್ನು ಪ್ರಥಮ ಬಾರಿಗೆ ಮಕ್ಕಳಿಂದಲೇ ಆಯೋಜಿಸಿರುವುದು ಅಭಿನಂದನೀಯ ಎಂದರಲ್ಲದೆ ಇಂತಹ ಕಲಿಕಾ ಹಬ್ಬಗಳು ತಾಲೂಕಿನ ಪ್ರತಿ ಶಾಲೆ ಮಟ್ಟದಲ್ಲಿ ನಡೆಯಬೇಕು. ಮಕ್ಕಳು ಶಾಲೆಯಲ್ಲಿ ಕಲಿತಿರುವ ಬಗ್ಗೆ ಇಂತಹ ಕಾರ್ಯಕ್ರಮದಲ್ಲಿ ಅವಕಾಶ ಕೊಟ್ಟಾಗ ಮಾತ್ರ ಅವರಿಗೆ ನೆನಪಿನ ಶಕ್ತಿ ಹೆಚ್ಚಾಗಲು ಸಾಧ್ಯ ಎಂದರು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಉದ್ದೇಶ ಸಾರ್ಥಕವಾಗಬೇಕಾದರೆ ಮಕ್ಕಳು ವಿದ್ಯಾವಂತರಾದರೆ ಮಾತ್ರ ಎಲ್ಲ ಯೋಜನೆಗಳಿಗೆ ಸಾರ್ಥಕತೆ ಬರುತ್ತದೆ ಎಂದು ಶಾಸಕರು ತಿಳಿಸಿದರು. ಬಿಇಒ ಮುನಿರಾಜು ಮಾತನಾಡಿ ಮಕ್ಕಳು ಮುಂದೆ ಯಾವುದೇ ಉನ್ನತ ಶಿಕ್ಷಣಕ್ಕೆ ಹೋದರೂ ಪ್ರಾಥಮಿಕ ಹಂತದಲ್ಲಿ ಕಲಿತದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರಾಥಮಿಕ ಶಿಕ್ಷಣ ಯಾವುದೇ ಉನ್ನತ ಶಿಕ್ಷಣಕ್ಕೆ ಶಾಶ್ವತವಾದ ಬುನಾದಿಯಾಗಿರುತ್ತದೆ ಎಂದರಲ್ಲದೆ ಮಕ್ಕಳು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಯಾವುದೇ ತಪ್ಪಾದರೂ ಕೂಡಲೇ ಶಿಕ್ಷಕರ ಸಹಾಯ ಪಡೆದು ತಿದ್ದಿಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

