ಬೆಂಗಳೂರು ಗ್ರಾಮಾಂತರ

ಜಾತಿ ಗಣತಿ: ವೀರಶೈವ ಲಿಂಗಾಯಿತ ಎಂದು ನಮೂದಿಸಲು ಸ್ವಾಮೀಜಿ ಕರೆ

Published On :

ಹೊಸಕೋಟೆ : ಸರಕಾರ ಕೈಗೊಂಡಿರುವ ಜಾತಿಗಣತಿಯಲ್ಲಿ ಎಲ್ಲಾ ಒಳಪಂಗಡಗಳವರು ಭಿನ್ನಾಭಿಪ್ರಾಯಗಳನ್ನು ತೊರೆದು ವೀರಶೈವ ಲಿಂಗಾಯಿತ ಎಂದೇ ನಮೂದಿಸಬೇಕು ಎಂದು ಶ್ರೀ ಕ್ಷೇತ್ರ ದುರುದುಂಡೇಶ್ವರ ಬೇಬಿಮಠದ ಶ್ರೀ ತ್ರಿನೇತ್ರಮಹಾಂತ ಶಿವಯೋಗಿ ಮಹಾಸ್ವಾಮಿ ಹೇಳಿದರು.
ಅವರು ಪಟ್ಟಣದ ಪಟೇಲ್ ನಾರಾಯಣಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು  ವೀರಶೈವ ನೌಕರರ ಕ್ಷೆಮಾಬಿವೃದ್ಧಿ ಸಂಘ ಏರ್ಪಡಿಸಿದ್ದ 5ನೇ ವಾರ್ಷಿಕ ಶರಣ ಸಮ್ಮೇಳನದಲ್ಲಿ ಮಾತನಾಡಿದರು.
ಇದರಿಂದ ಜನಾಂಗದ ಸಂಘಟನೆ ಬಲವರ್ಧನೆಗೊಂಡು ಜಾತಿ ಆಧಾರಿತ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವಲ್ಲಿ ಬಸವಣ್ಣನವರ ಕೊಡುಗೆ ಅಪಾರವಾದುದು. ಸಂಕುಚಿತ ಭಾವನೆಗಳನ್ನು ತೊರೆದು ಧರ್ಮದ ಸಾರದ ಬಗ್ಗೆ ಸಮರ್ಪಕವಾದ ತಿಳಿವಳಿಕೆ ಪಡೆದುಕೊಳ್ಳಲು ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿ ಸಾಧನಗಳಾಗಿವೆ ಎಂದರು.
ಸಂಘದ ಉಪಾಧ್ಯಕ್ಷ ಬಿ.ನಾಗರಾಜ್ ಮಾತನಾಡಿ ರಾಜ್ಯದಲ್ಲಿಯೇ ಪ್ರಥಮವಾಗಿ 5 ವರ್ಷಗಳ ಹಿಂದೆ ಸಂಘ ಪ್ರಾರಂಭಗೊಂಡಿದ್ದು ಪ್ರಸ್ತುತ 450 ಸದಸ್ಯರನ್ನು ಒಳಗೊಂಡಿದೆ.ರಾಜ್ಯದ ನಾನಾ ಭಾಗಗಳಿಗೆ ಸೇರಿ ಇಲ್ಲಿ ಉದ್ಯೋಗ ಮಾಡುವವರನ್ನು ಒಂದೆಡೆ ಸೇರಿಸಿ ಸಂಘಟಿಸಿ ಸಮಸ್ಯೆಗಳನ್ನು ಪರಿಹರಿಸಲು, ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳಲು ಅನುವಾಗುವಂತೆ ಪ್ರತಿವರ್ಷ ಶರಣಮೇಳ ಆಯೋಜಿಸಲಾಗುತ್ತಿದೆ ಎಂದರು.
ಮಾಲೂರು ತಾಲೂಕಿನ ಬೆಳ್ಳಾವಿಯ ಶ್ರೀ ಮಹಾಂತಲಿಂಗ ಶಿವಾಚಾರ್ಯಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೊಂಗವಾಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯ 8, ದ್ವಿತೀಯ ಪಿಯುಸಿಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಾನಾ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ನಾಗರುದ್ರಪ್ಪ, ಅಧ್ಯಕ್ಷ ಡಿ.ಎಸ್. ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.