ದಲಿತರ ಮೇಲೆ ದೌರ್ಜನ್ಯಹೆಚ್ಚಳ: ಮುನಿರಾಜು
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಇತ್ತೀಚೆಗೆ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ವ್ಯವಸ್ಥಿತ ಗಂಭೀರ ಸ್ವರೂಪದ ಹೋರಾಟಕ್ಕೆ ದಲಿತ ವಿಮೋಚನಾ ಸೇನೆ ಸಿದ್ಧತೆ ನಡೆಸುತ್ತಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಮಾ. ಮುನಿರಾಜು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರಬಲವಾಗಿದ್ದ ದಲಿತ ಚಳವಳಿಯ ವೈಫಲ್ಯ ಕೂಡ ಈ ಬಗೆಯ ಪ್ರಕರಣಗಳು ಹೆಚ್ಚಲು ಕಾರಣ ಎನ್ನುವಂತಾಗಿದೆ. ದಲಿತ ಚಳವಳಿಯ ಮೂಲ ಆಶಯಗಳನ್ನು ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಒಟ್ಟಾರೆಯ ಸಂಘಟಿತ ಹೋರಾಟ ರೂಪಿಸಬೇಕಿದೆ ಎಂದ ಅವರು, ತಾಲೂಕಿನ ಕನ್ನಮಂಗಲದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹೆಗ್ಗಡಿಹಳ್ಳಿಯಲ್ಲಿ ದಲಿತ ಯುವಕನ ಮೇಲೆ ನಡೆದ ಹಲ್ಲೆ-ಸಾವು, ಗಂಡರಾಜಪುರದಲ್ಲಿ ದಲಿತ ಮಹಿಳೆಯ ಮೇಲೆ ನಡೆದ ದೌರ್ಜನ್ಯ-ಸಾವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪ್ರಕರಣಗಳಲ್ಲಿ ಪೊಲೀಸರು ದಲಿತರ ಪರ ನ್ಯಾಯಸಮ್ಮತವಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ತಾಲೂಕಿನ ಪ್ರಭಾವೀ ರಾಜಕಾರಣಿಗಳೂ ದಲಿತ ವಿರೋಧಿ ಧೋರಣೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟದ ಚಿಂತನೆ ನಡೆಸಿದೆ. ಎಲ್ಲ ದಲಿತ ಪರ ಚಿಂತನೆಯ ಮನಸ್ಸುಗಳನ್ನು ಹೋರಾಟದ ಹಾದಿಗೆ ತರುವ ಯತ್ನ ಮಾಡಲಾಗುವುದು. ಅದೇ ರೀತಿ ತಾಲೂಕಿನ ಸುತ್ತಳ್ಳಿ ಗ್ರಾಮದಲ್ಲಿ ದಲಿತನೊಬ್ಬ ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಸ್ಥಳೀಯ ರಾಜಕಾರಣಿಯೊಬ್ಬರ ಪ್ರಭಾವದಿಂದ ಕಬಳಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಬೇಕು. ಗಂಡರಾಜಪುರ ಪ್ರಕರಣವನ್ನು ಐಪಿಸಿ 302 ಪ್ರಕರಣವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ದಲಿತ ವಿಮೋಚನಾ ಸೇನೆ ವಿಭಾಗೀಯ ಅಧ್ಯಕ್ಷ ಹನುಮಯ್ಯ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಕೆ.ಸಿದ್ಧರಾಜು, ಕಾರ್ಯದರ್ಶಿ ಆರ್. ಮೈಲಾರಪ್ಪ, ಉಪಾಧ್ಯಕ್ಷ ಕೆ.ವಿ.ಮುನಿಯಪ್ಪ, ಮುಖಂಡರಾದ ಪುರುಷೋತ್ತಮ್, ನರೇಂದ್ರಕುಮಾರ್, ಬಿ.ಎಸ್.ಬಸವರಾಜು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

