ದೊಡ್ಡಬಳ್ಳಾಪುರದೆಲ್ಲೆಡೆ ವಿಜೃಂಭಣೆ ಸಂಕ್ರಾಂತಿ
ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಜ.15
ಮನೆಮನೆಗಳಲ್ಲಿ ಎಳ್ಳುಬೀರುವ ಉತ್ಸಾಹ, ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತಾಡಿ ಎಂಬ ಶುಭಹಾರೈಕೆಯ ಪರಸ್ಪರ ಶುಭಾಶಯ ವಿನಿಮಯ, ಬದುಕಿನ ಏರಿಳಿತಗಳ ಹಾದಿಯಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಭಾವನೆಗಳನ್ನು ಪರಸ್ಪರ ಬೆಸೆಯುವ ಸಾಂಕೇತಿಕ ಸಂವೇದನೆ ಸಂಕ್ರಾಂತಿಯಂದು ಎಲ್ಲೆಡೆ ಕಂಡು ಬಂತು.
ಸಂಕ್ರಾಂತಿ ಹಬ್ಬದ ಅಂಗವಾಗಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ನೆರೆಯವರಿಗೆ ಎಳ್ಳು-ಬೆಲ್ಲ ಕೊಟ್ಟು ಶುಭಹಾರೈಸಿದರು. ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಹಸಿಗಡಲೆ, ಅವರೇಕಾಯಿ, ಸಿಹಿಗೆಣಸುಗಳ ವಿಶೇಷ ತಿಂಡಿಗಳು, ಕಬ್ಬು-ಪೊಂಗಲ್ ಸೇರಿದಂತೆ ತರಾವರಿ ಭಕ್ಷ್ಯಗಳನ್ನು ಸವಿದರು. ಅದೇ ರೀತಿ ತಾಲೂಕಿನ ಗ್ರಾಮಾಂತರ ಪ್ರದೇಶದ ಹಲವು ಹಳ್ಳಿಗಳಲ್ಲಿ ಸುಗ್ಗಿ ಕಾರ್ಯಕ್ರಮಗಳು ನಡೆದವು. ತಾಲೂಕಿನ ತೂಬಗೆರೆ, ದೊಡ್ಡಬೆಳವಂಗಲ, ಸಾಸಲು, ಮಧುರೆ ಹೋಬಳಿಗಳಲ್ಲಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆಯ ರಾಶಿ ಹಾಕಿ ಪೂಜಿಸಿ ಸಾಂಪ್ರದಾಯಿಕ ಸುಗ್ಗಿ ಆಚರಣೆ ಮಾಡಿದರು. ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ತೃಪ್ತಿಕರ ಬೆಳೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿತ್ತು.
ಕಿಚ್ಚಾಯಿಸಿದರು: ಸಂಕ್ರಾಂತಿಯ ಸಂಜೆ ರೈತರು ದನಗಳಿಗೆ ಕಿಚ್ಚುಹಾಯಿಸುವ ಜನಪದೀಯ ಆಚರಣೆ ನಡೆಸಿದರು. ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಹೊಲ-ಗದ್ದೆಗಳಲ್ಲಿ ದುಡಿಯುವ ಎತ್ತುಗಳು, ಹಸುಗಳನ್ನು ಬೆಂಕಿಯ ಮೇಲೆ ಹಾಯಿಸಿದರು. ವಿಶೇಷವಾಗಿ ತೊಳೆದು ಸಿಂಗರಿಸಿದ್ದ ಎತ್ತುಗಳ ಮೆರವಣಿಗೆ ಕೆಲವೆಡೆ ನಡೆಯಿತು. ಜೋಡೆತ್ತುಗಳ ಕೊಂಬುಗಳಿಗೆ ತರಾವರಿ ಬಣ್ಣಗಳನ್ನು ಬಳಿದು, ಹೂವು-ಬಲೂನುಗಳಿಂದ ಅಲಂಕರಿಸಿದ್ದರು. ಅದ್ಧೂರಿಯಿಂದ ಆಚರಿಸಲ್ಪಡುವ ಆಚರಣೆ ಈ ಬಾರಿ ಕೊಂಚ ಸಾಧಾರಣವಾಗಿತ್ತು. ವ್ಯವಸಾಯ ಭೂಮಿ ಕಡಿಮೆಯಾಗುತ್ತಿರುವ ಮತ್ತು ರೈತರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ಈ ಬಗೆಯ ಸಾಂಪ್ರದಾಯಿಕ ಆಚರಣೆಗಳು ಕಡಿಮೆಯಾಗುತ್ತಿರುವುದು ವಿಷಾದನೀಯ.
ದೇವಾಲಯಗಳಲ್ಲಿ ವಿಶೇಷ: ಸಂಕ್ರಾತಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಾಟಾಗಿದ್ದವು. ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯ, ಶ್ರೀಚಂದ್ರಮೌಳೇಶ್ವರ ದೇವಾಲಯ, ಸ್ವಯಂಭೇಶ್ವರ ದೇವಾಲಯ, ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯ, ನೆಲದಾಂಜನೇಯಸ್ವಾಮಿ ದೇಗುಲ, ನಗರೇಶ್ವರ ದೇವಾಲಯ ಸೇರಿದಂತೆ ಅನೇಕ ದೇಗುಲಗಳಲ್ಲಿ ಪೂಜಾಲಂಕಾರಗಳು ನಡೆದವು. ನೂರಾರು ಭಕ್ತಾದಿಗಳು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

