ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾ ಕೇಂದ್ರಕ್ಕಾಗಿ ನಿರಂತರ ಧರಣಿ, ಮುಖಂಡರ ನಿರ್ಧಾರ

Published On :

ದೇವನಹಳ್ಳಿ:  ಬೆಂಗಳೂರಿನಲ್ಲಿನಲ್ಲಿರುವ ಜಿಲ್ಲಾಧಿಕಾರಿಗಳ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಗಳು ಸೇರಿದಂತೆ ಇತರ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಲೇಬೇಕು ಎಂದು ಒತ್ತಾಯಿಸಿ ಜ.18 ರಿಂದ ಮಿನಿ ವಿಧಾನಸೌಧ ಆವರಣದಲ್ಲಿ ನಿರಂತರವಾಗಿ ಪ್ರತಿಭಟನಾ ಧರಣಿ ಸತ್ಯಾಗ್ರಹಗಳು ನಡೆಯಲಿವೆ ಎಂದು ಜಿಲ್ಲಾ ಹೋರಾಟ ಸಮಿತಿಯ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಯಗಳ ಮುಖಂಡರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ನಾಡ ಪ್ರಭು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗತ್ಯ ಜಮೀನು ಕೊಟ್ಟಿರುವವರು ದೇವನಹಳ್ಳಿಯ ರೈತರು, ಬೆಂಗಳೂರಿನಿಂದ ದೇವನಹಳ್ಳಿಗೆ ಕೇವಲ 25 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ, ಉಳಿದ ಹೊಸಕೋಟೆ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಮೂರು ತಾಲೂಕುಗಳಿಗೂ ಉತ್ತಮ ಸಂಪರ್ಕ ರಸ್ತೆಗಳಿವೆ. ಸುಮಾರು ಮೂವತ್ತಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿವೆ ಅಲ್ಲದೆ ಮುಂದಿನ ಹತ್ತು ವರ್ಷಗಳಲ್ಲಿ ದೇವನಹಳ್ಳಿ ಊಹಿಸಲಾಗದಷ್ಟು ಬೆಳವಣಿಗೆ ಆಗುವುದಂತೂ ಸತ್ಯ. ಆದ್ದರಿಂದ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಹೆಚ್ಚು ಸೂಕ್ತವಾಗಿದೆ, ಈ ಎಲ್ಲ ಮಾಹಿತಿಗಳು ಸಂಭಂಧಪಟ್ಟ ಅಧಿಕಾರಿಗಳಿಗೆ ಅಲ್ಲದೆ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆಯಾದರೂ ಅಧಿಕೃತವಾಗಿ ಘೋಷಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮುಖಂಡರ ಅಭಿಪ್ರಾಯವಾಗಿತ್ತು.
ಸಹಕಾರ ನೀಡಿ:  ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಮಂದಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ದೇವನಹಳ್ಳಿ ಜಿಲ್ಲಾ ಕೇಂದ್ರಕ್ಕಾಗಿ ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳು ಅಲ್ಲದೆ ತಾಲೂಕು ವಕೀಲರ ಸಂಘದ ಕಾರ್ಯಕರ್ತರನ್ನು ಅಲ್ಲದೆ ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನ ಮುಖಂಡರನ್ನೂ ವಿಶ್ವಾಸಕ್ಕೆ ಪಡೆದು ದೇವನಹಳ್ಳಿ ಜನತೆಯ ಪ್ರತಿಭಟನೆ ಸರ್ಕಾರದ  ಗಮನಕ್ಕೆ ಬರಲು ಎಲ್ಲ ರೀತಿಯ ಒತ್ತಾಯಗಳು ನಡೆಯಬೇಕು ಎಂದು ಮುಖಂಡರು ತಿಳಿಸಿ ಸೋಮವಾರದಿಂದ ನಡೆಯುವ ಪ್ರತಿಭಟನಾ ಸಭೆಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ತಾಲೂಕಿನ ಜನರ ಬೇಡಿಕೆಯಂತೆ ತಾವು ಸಹ ಸ್ಪಂದಿಸುವುದಾಗಿ ತಿಳಿಸಿ ತಮಗೆ ಶಾಸಕ ಸ್ಥಾನ ಮುಖ್ಯವಲ್ಲ, ನಿಮ್ಮೆಲ್ಲರ ಬೇಡಿಕೆಯೇ ನನ್ನ ಬೇಡಿಕೆಯಾಗಿದೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ ಜಿಲ್ಲಾ ಹೋರಾಟ ಸಮಿತಿ ಇದೂವರೆವಿಗೂ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರಲ್ಲದೆ ಮುಂದಿನ ಹೋರಾಟದ ಬಗ್ಗೆಯೂ ತಿಳಿಸಿದರು.
ಹೋರಾಟ ಸಮಿತಿ ಸಭೆಯಲ್ಲಿ  ಮಾಜಿ ಪುರಸಭಾಧ್ಯಕ್ಷ ಎಸ್.ಲಕ್ಷ್ಮೀನಾರಾಯಣ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಎ.ಚಿನ್ನಪ್ಪ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್. ರವಿಕುಮಾರ್, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ಪ್ರಾಂತ ರೈತ ಸಂಘ ಅಧ್ಯಕ್ಷ ಮುದಗುರ್ಕಿ ನಾರಾಯಣಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ಪುರಸಭಾ ಸದಸ್ಯರುಗಳಾದ ಜಿ.ಎ.ರವೀಂದ್ರ, ವಿ.ಗೋಪಾಲ್, ಗೋಪಾಲಕೃಷ್ಣ, ಮುಖಂಡ ಕಾರಹಳ್ಳಿ ಶ್ರೀನಿವಾಸ್, ಬೂದಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷ ರಮೇಶ್, ಹೋರಾಟ ಸಮಿತಿ ಸಂಚಾಲಕ ಎ.ಶಿವರಾಮಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ರಾಜಗೋಪಾಲ್, ರಾಜ್ಯ ಪರಿಷತ್ ಸದಸ್ಯ ದೇ.ಸೂ.ನಾಗರಾಜ್ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.