ಬೆಂಗಳೂರು ಗ್ರಾಮಾಂತರ

ಪೋಲಿಯೊ ಮುಕ್ತ ಭಾರತದ ಕನಸು ನನಸು

Published On :

ದೊಡ್ಡಬಳ್ಳಾಪುರ: ಪೋಲಿಯೊ ಮುಕ್ತ ಭಾರತದ ಕನಸು ಇದೀಗ ನನಸಾಗುತ್ತಿದೆ. ಇದಕ್ಕೆ ಸತತ ಪರಿಶ್ರಮ ಮತ್ತು ದಶಕಗಳ ಜಾಗೃತಿ ಕಾರಣ ಎಂದು ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಶ್ವತ್ಥನಾರಾಯಣ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕಗಳ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಲ್ಸ್ ಪೋಲಿಯೋ ಲಸಿಕೆ ಹಾಕುವುದು ಸಾಮಾಜಿಕ ಕೈಂಕರ್ಯವಿದ್ದಂತೆ. ಅಭಿವೃದ್ಧಿಶೀಲ ಬಹುತೇಕ ದೇಶಗಳಲ್ಲಿ ಪೋಲಿಯೊ ಸರ್ವೇ ಸಾಮಾನ್ಯವಾದ ರೋಗವಾಗಿದೆ. ಅಲ್ಲಿನ ಸಾಮಾಜಿಕ ಸುಸ್ಥಿತಿ ಮತ್ತು ನೈರ್ಮಲ್ಯಗಳು ಇದನ್ನು ಪ್ರಭಾವಿಸುತ್ತವೆ. ಈ ಹಂತದಲ್ಲಿ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ನಡೆದ ಆರೋಗ್ಯಕ್ರಾಂತಿಯ ಅಭಿಯಾನ ಇದೀಗ ಕೊನೆಯ ಹಂತದಲ್ಲಿದೆ. ಸದ್ಯದಲ್ಲೇ ದೇಶ ಪೋಲಿಯೊ ಮುಕ್ತ ಭಾರತವಾಗಿ ಗುರುತಿಸಿಕೊಳ್ಳಲಿದೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಜೆಸ್ಸಿಯಾ ಮಾತನಾಡಿ, ಜ.19ರಿಂದ ನಗರದಲ್ಲಿ 4 ದಿನಗಳ ಕಾಲ ಮತ್ತು ಗ್ರಾಮಾಂತರದಲ್ಲಿ 3 ದಿನಗಳ ಕಾಲ ನಡೆಯುವ ಅಭಿಯಾನದಲ್ಲಿ ಮಗುವಿನ ಬಾಯಿಗೆ 2 ಹನಿ ಪೋಲಿಯೊ ಲಸಿಕೆಯ ಹನಿಗಳನ್ನು ಹಾಕಿ ಅದರ ಕಿರುಬೆರಳಿಗೆ ನೀಲಿಬಣ್ಣದ ಗುರುತನ್ನು ಹಾಕಬೇಕು. 5 ವರ್ಷದೊಳಗಿನ ಮಗುವಾಗಿದ್ದರೆ ಹಿಂದಿನ ಬಾರಿ ಲಸಿಕೆ ಹಾಸಿದ್ದರೂ ಮತ್ತೆ ತಪ್ಪದೇ ಹಾಕಬೇಕು. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವುದು ಕಡ್ಡಾಯ. ಈ ಆರೋಗ್ಯ ಅಭಿಯಾನದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರು ಭಾಗವಹಿಸಿ, ಗ್ರಾಮಗಳ ಮನೆಮನೆಗಳಿಗೆ ತೆರಳಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವಲ್ಲಿ ಸಹಕರಿಸಬೇಕು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಪೋಲಿಯೊ ಲಸಿಕೆ ಹಾಕುವ ಪ್ರಕ್ರಿಯೆ ಕುರಿತು ಪ್ರಾತಕ್ಷಿಕೆ ಏರ್ಪಡಿಸಲಾಗಿತ್ತು. ನಂತರ ನಗರದ ಮುಖ್ಯರಸ್ತೆಗಳಲ್ಲಿ ವಿದ್ಯಾರ್ಥಿಗಳೊಡಗೂಡಿ ಪಲ್ಸ್ ಪೋಲಿಯೊ ಅರಿವಿನ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಕಿರಿಯ ಆರೋಗ್ಯ ಶಿಕ್ಷಣಾಧಿಕಾರಿ ರತ್ನಮ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ. ಮಹದೇವ್, ಎಸ್.ಮಹಾಬಲೇಶ್ವರ್,ಉಪಪ್ರಾಂಶುಪಾಲ ಎಸ್.ರಾಜಲಕ್ಷ್ಮಿ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಚಂದ್ರಪ್ಪ, ಎನ್‌ಸಿಸಿ ಅಧಿಕಾರಿ ತಜಮುಲ್ ಪಾಷಾ, ಶ್ರೀನಿವಾಸ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.