ಅಕ್ರಮ ಮರಳುಗಣಿ ಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ
ಚನ್ನಪಟ್ಟಣ: ಇಗ್ಗಲೂರಿನ ಶಿಂಷಾನದಿಯಲ್ಲಿ ನಿರಂತವಾಗಿ ನಡೆಯುತ್ತಿರುವ ಅಕ್ರಮ ಮರಳುಗಣಿ ಗಾರಿಕೆ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾ.ಪಂ ಮಾಜಿ ಅಧ್ಯಕ್ಷ ಸಿದ್ದರಾಮಹೆಗಡೆ ತಾಲೂಕು ಕಚೇರಿ ಮುಂದೆ ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಏಕಾಂಗಿ ಹೋರಾಟ ಆರಂಭಿಸಿದ ಸಿದ್ದರಾಮ ಹೆಗಡೆ, ಈ ಹಿಂದೆ ಹಲವಾರು ಬಾರಿ ಹೋರಾಟ ನಡೆಸಿದರೂ ತಾಲೂಕು ಆಡಳಿತ ಗಮನಹರಿಸಲ್ಲ, ಜಲಾಶಯದಲ್ಲಿ ನಿರಂತರವಾಗಿ ಮರಳು ಲೂಟಿ ನಡೆಯುತ್ತಿದೆಯಾದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದರಿಂದಾಗಿ ಜಲಾಶಯ, ಇದನ್ನು ನಂಬಿರುವ ಜೀವ ಸಂಕುಲ ಅಪಾಯದಲ್ಲಿದೆ ಎಂದು ಆರೋಪಿಸಿದರು.
ಕೆಲವೇ ಕೆಲವು ದಂಧೆಕೋರರ ಲಾಭಕ್ಕೆ ಬಲಿಯಾಗಿರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ತಹಸೀಲ್ದಾರ್ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾರೂ ಈ ಬಗ್ಗೆ ಸ್ಪಂದಿಸಿಲ್ಲ. 2000 ನೇ ಇಸವಿಯಲ್ಲಿ ಕಣ್ವ ಮತ್ತು ಶಿಂಷಾನದಿಯಲ್ಲಿ ಮರಳು ತೆಗೆಯುವುದಕ್ಕೆ ನಿಷೇಧವಿದೆಯಾದರೂ ಕಾನೂನು ಪಾಲನೆ ಮಾಡುವ ಕನಿಷ್ಠ ಪರಿಜ್ಞಾನವೂ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಕಿಡಿಕಾರಿದರು.
ವಾರದಲ್ಲಿ 2ಕೋಟಿ ಮರಳು ಲೂಟಿ: ಕಳೆದೊಂದು ವಾರದಲ್ಲಿ ಇಗ್ಗಲೂರು ಜಲಾಶಯದಲ್ಲಿ 2 ಕೋಟಿ ರು. ಮೌಲ್ಯದ ಮರಳನ್ನು ಲೂಟಿ ಮಾಡಲಾಗಿದೆ. ಜಲಾಶಯಕ್ಕೆ ಕೊಪ್ಪರಿಕೆಗಳನ್ನು ಇಳಿಸಿ ಮರಳನ್ನು ತೋಡುತ್ತಿದ್ದು ಮದ್ದೂರು ಭಾಗದ ತಹಸೀಲ್ದಾರ್ ಮತ್ತು ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದರೆ ನಮ್ಮ ತಾಲೂಕಿನವರು ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮೌನ ಸಾಕಷ್ಟು ಅನುಮಾನ ಮೂಡಿಸಿದೆ, ಅಧಿಕಾರಿಗಳಿಗೆ ಕಾನೂನು ಪಾಲಿಸಲಿ ಮನಸ್ಸಿಲ್ಲವೋ ಇಲ್ಲ ಕೆಲಸ ಮಾಡದಂತೆ ಅವರ ಮೇಲೆ ಯಾರಾದರೂ ಒತ್ತಡ ತಂದಿದ್ದಾರೋ ಎಂಬ ಗುಮಾನಿ ಕಾಡುತ್ತಿದ್ದು ಈ ಬಗ್ಗೆ ಸ್ಪಷ್ಟ ಉತ್ತರ ದೊರಕ ಬೇಕಿದೆ. ಮರಳು ಗಣಿಗಾರಿಕೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು ಯಾರದೋ ಹಣದಾಸೆಗೆ ಜಲಾಶಯವನ್ನು ಹಾಳು ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಇರುವುದೊಂದೇ ಜಲಾಶಯ: ನಮ್ಮತಾಲೂಕಿನ ನೀರಾವರಿಗೆ ಆಧಾರವಾಗಿರುವುದು ಒಂದೇ ಜಲಾಶಯ, ಶಿಂಷಾನದಿಗೆ ಅಡ್ಡಲಾಗಿ ಕಟ್ಟಿರುವ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ನಿಂದ ತಾಲೂಕಿನ ಸಮಗ್ರ ನೀರಾವರಿ ಬಗ್ಗೆ ಯೋಜನೆ ರೂಪಿಸಲಾಗಿದೆ. ಜಲಾಶಯದಲ್ಲಿ ಈರೀತಿ ನಿರಂತರವಾಗಿ ಮರಳು ಲೂಟಿಯಾದರೆ ಈ ಜಲಾಶಯವೂ ನಿಷ್ಪ್ರಯೋಜಕವಾಗಲಿದ್ದು ಮುಂದಿನ ದಿನಗಳಲ್ಲಿ ತಾಲೂಕು ಶಾಶ್ವತ ಬರಕ್ಕೆ ತುತ್ತಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾತುಕತೆ ವಿಫಲ: ಪ್ರತಿಭಟನೆ ಕೈಬಿಡುವಂತೆ ಪುರ ಪೊಲೀಸ್ ಠಾಣೆ ಪಿಎಸ್ಐ ವಿಜಯ್ಕುಮಾರ್ ಸಿದ್ದರಾಮ ಹೆಗಡೆ ಮನ ಒಲಿಸಲು ಪ್ರಯತ್ನಿಸಿದರಾದರೂ ಇದಕ್ಕೆ ನಿರಾಕರಿಸಿದ ಅವರು ಇದು ನನ್ನ ಮಾಡು ಇಲ್ಲವೆ ಮಡಿ ಹೋರಾಟವಾಗಿದ್ದು ನ್ಯಾಯ ದೊರಕುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ತಾಲೂಕು ಕಚೇರಿಯ ಮುಂದೆ ಮಲಗಿ ಹೋರಾಟ ಮುಂದುವರೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

