ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾ ಕೇಂದ್ರ ನಿರಂತರ ಧರಣಿಗೆ ಚಾಲನೆ

Published On :

ದೇವನಹಳ್ಳಿ: ಜಿಲ್ಲಾ ಕೇಂದ್ರ ಹೋರಾಟ ಸಮಿತಿಯವರು ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಹಾಗೂ ಕನ್ನಡ ಪರ ಹೋರಾಟ ಸಮಿತಿಗಳ ಸಹಕಾರದೊಂದಿಗೆ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌದದವರೆಗೆ  ಶಾಸಕ ಪಿಳ್ಳಮುನಿಶಾಮಪ್ಪ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ನಂತರ ರಾಷ್ಟ್ರೀಯ ಹೆದ್ದಾರಿ ಬಳಿಯ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಧರಣಿ ಕುಳಿತು ಸಾರ್ವಜನಿಕ ಸಭೆ ನಡೆಸಿದರು.
 ಈ ಸಂಧರ್ಭದಲ್ಲಿ ಹೊಸಕೋಟೆ ತಾಲೂಕಿನ ಹಿರಿಯ ರಾಜಕೀಯ ಧುರೀಣರ  ಹಾಗೂ ಮಾಜಿ ಶಾಸಕ ಸೂ.ರಂ.ರಾಮಯ್ಯ ಮಾತನಾಡಿ ವೈಜ್ಞಾನಿಕವಾಗಿ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆ ಮತ್ತು ಅವಕಾಶಗಳಿವೆ. ಅಲ್ಲದೆ ಈ ಭಾಗದಲ್ಲಿ ಜಿಲ್ಲಾ ಕೇಂದ್ರವಾದರೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಹೊರ ದೇಶದ ರಾಜಕೀಯ ಪ್ರಮುಖರು ಆಗಮಿಸಿದಾಗ ಜಿಲ್ಲಾಧಿಕಾರಿಗಳು ಕೂಡಲೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದರು. ಈ ತಾಲೂಕಿನಲ್ಲಿ ಟಿಪ್ಪು ಸುಲ್ತಾನ್ ಮತ್ತು ನಾಡ ಪ್ರಭು ಕೆಂಪೇಗೌಡರ ವಂಶಸ್ಥರು ಜನಿಸಿದ ಐತಿಹಾಸಿಕ ಪ್ರದೇಶವಾಗಿದೆ. ಆದ್ದರಿಂದ ದೇವನಹಳ್ಳಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲೇಬೇಕೆಂಬ ಕೇಳುವ ಹಕ್ಕು ನಮಗಿದೆ ಎಂದರು.
ಕೆಂಪೇಗೌಡ ಜಿಲ್ಲೆಯಾಗಲಿ:  ವಿಜಯಪುರದ ಹಿರಿಯ ಮುಖಂಡ ಮುನಿಶಾಮಗೌಡ ಮಾತನಾಡಿ 1952 ರಲ್ಲಿ ಕರ್ನಾಟಕ ಏಕೀಕರಣವಾದ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿ 19 ಜಿಲ್ಲೆಗಳು ಮಾತ್ರ ಇದ್ದವು, 1984 ರಿಂದ 2013ರವರೆಗೆ ಇದ್ದ ಸರ್ಕಾರಗಳು 11 ಜಿಲ್ಲೆಗಳನ್ನು ಹೆಚ್ಚಾಗಿ ರಚನೆ ಮಾಡಿ ಸದ್ಯಕ್ಕೆ 30 ಜಿಲ್ಲೆಗಳಾಗಿವೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಭಜನೆಗೊಂಡಾಗ ರಾಮನಗರ ಜಿಲ್ಲೆ ಪ್ರತ್ಯೇಕವಾಯಿತು, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ನಾಲ್ಕು ತಾಲೂಕುಗಳು ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಘೋಷಣೆಯಾಗಿದ್ದರೂ ಜಿಲ್ಲೆಗೆ ಸಂಬಂಧ ಪಟ್ಟ ಎಲ್ಲ ಕಚೇರಿಗಳೂ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿವೆ. ಆದ್ದರಿಂದ ಸರ್ಕಾರ ಹೊಸದಾಗಿ ಜಿಲ್ಲಾ ಕೇಂದ್ರ ರಚನೆ ಮಾಡಬೇಕಾದರೆ 500 ಕೋಟಿ ರು. ವೆಚ್ಚಮಾಡಬೇಕು, ನಮಗೆ ಹೊಸಜಿಲ್ಲೆ ಬೇಕಾಗಿಲ್ಲ. ಜಿಲ್ಲೆಗೆ ಸಂಬಂಧ ಪಟ್ಟ ಎಲ್ಲ ಕಚೇರಿಗಳನ್ನು ದೇವನಹಳ್ಳಿ ಮಿನಿ ವಿಧಾನಸೌಧಕ್ಕೆ ಅಥವಾ ಅಗತ್ಯವಾದ ಜಮೀನು ಇಲ್ಲೇ ಇರುವುದರಿಂದ  ಕೆಂಪೇಗೌಡ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ತಿಳಿಸಿದರು.
ಶಾಸಕರ ಬೆಂಬಲ:  ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳ ಮತ್ತು ಇತರ ಸಂಘ ಸಂಸ್ಥೆಗಳ ಗುರಿ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಬೇಕೆನ್ನುವ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ನಾನು ಸಹ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿ ಜಿಲ್ಲಾ ಕೇಂದ್ರದ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಲೇಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡರುಗಳಾದ ಎ.ವಿ.ನಾರಾಯಣಸ್ವಾಮಿ, ನರಸಿಂಹ ನಾಯಕ್, ಬಿಜೆಪಿ ರಾಷ್ಟ್ರೀಯ
ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ಬಿಜೆಪಿ ತಾಲೂಕು ಅದ್ಯಕ್ಷ ರಾಜಗೋಪಾಲ್, ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ರವಿಕುಮಾರ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಕಲ್ಯಾಣಕುಮಾರ್, ಜೆಡಿಯು ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಕೆ.ಶಿವಪ್ಪ ಸ್ವಾಗತ ಕೋರಿದರು.  
   ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಚಿನ್ನಪ್ಪ, ಆರ್.ರವಿಕುಮಾರ್, ಶ್ರೀನಿವಾಸಗೌಡ, ಬಿ.ಚೇತನ್ಗೌಡ, ಬಿ.ವಿ.ಲಕ್ಷ್ಮಿ ನರಸಿಂಹಸ್ವಾಮಿ, ಬಿಜೆಪಿ ಮುಖಂಡರಾದ ಕೆ.ನಾಗೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು, ಮಾಜಿ ಅಧ್ಯಕ್ಷ ಶ್ರೀರಾಮಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಮುನಿಶಾಮಯ್ಯ, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಬಿ.ಶ್ರೀನಿವಾಸ್, ಪುರಸಭಾ ಮಾಜಿ ಅಧ್ಯಕ್ಷೆ ರತ್ನಮ್ಮ ಗಾರೆ ರವಿಕುಮಾರ್, ಸದಸ್ಯರಾದ ಜಿ.ಎ.ರವೀಂದ್ರ, ಶಶಿಕುಮಾರ್, ವಿ. ಗೋಪಾಲ್, ದಲಿತ ಸಂಘರ್ಷ ಸಮಿತಿಯ ಕಾರಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.


ತಾಲೂಕಿನ ಎಲ್ಲ ರಾಜಕೀಯ ಪಕ್ಷಗಳ ಮತ್ತು ಇತರ ಸಂಘ ಸಂಸ್ಥೆಗಳ ಗುರಿ ದೇವನಹಳ್ಳಿ ಜಿಲ್ಲಾ ಕೇಂದ್ರವಾಗಬೇಕೆನ್ನುವ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ನಾನು ಸಹ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿ ಜಿಲ್ಲಾ ಕೇಂದ್ರದ ಕಚೇರಿಗಳು ದೇವನಹಳ್ಳಿಗೆ ವರ್ಗಾವಣೆಯಾಗಲೇಬೇಕು
ಟಿ  ಪಿಳ್ಳಮುನಿಶಾಮಪ್ಪ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.