ಪರಿಶಿಷ್ಟರಿಗೆ ಸವಲತ್ತು ತಲುಪಿಸಿ ಮುಖ್ಯವಾಹಿನಿಗೆ ತನ್ನಿ
ಕ.ಪ್ರ.ವಾರ್ತೆ ರಾಮನಗರ ಜ.20
ಪರಿಶಿಷ್ಟರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕು. ಆ ಮೂಲಕ ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಅಶ್ವತ್ಥ ನಾರಾಯಣ್ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಕಂದಾಯ ಭವನದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯದವರ ಸಂರಕ್ಷಣೆ, ಸಮುದಾಯದ ಅಭಿವಣದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಸ್ರಾರು ವರ್ಷಗಳಿಂದಲೂ ಆಚರಣೆಯಲ್ಲಿರುವ ಅಸ್ಪೃಶ್ಯತೆಯನ್ನು ಇನ್ನಾದರೂ ತೊಡೆದು ಹಾಕಬೇಕು ಎಂದರು.
ದಲಿತ ಸಮುದಾಯಕ್ಕಾಗಿ ಸಂವಿಧಾನದಲ್ಲಿ ಮೀಸಲು ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಅವೆಲ್ಲವೂ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ದಲಿತರಿಗೆ ಅನ್ಯಾಯವಾದಲ್ಲಿ ಆಯೋಗದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪರಿಹರಿಸಲು ಸಭೆ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಸರ್ಕಾರ ವಿಶೇಷ ಅಧಿಕಾರ ನೀಡಿದೆ. ಆಯೋಗವು ದಲಿತರ ರಕ್ಷಣೆಗಾಗಿ ಇರುವ ನ್ಯಾಯಾಲಯವಾಗಿದೆ. ದಲಿತರಿಗೆ ಏನೇ ಸಮಸ್ಯೆಯಾದರೂ ಆಯೋಗದಲ್ಲಿ ವಾರಕ್ಕೆರಡು ದಿನ ನಡೆಯುವ ನ್ಯಾಯಾಲಯ ಕಲಾಪದಲ್ಲಿ ತಂದು, ಪರಿಹರಿಸಿಕೊಳ್ಳಬಹುದು. ತಪ್ಪಿತಸ್ಥರಿಗೆ ಆಯೋಗವೇ ಶಿಕ್ಷೆ ವಿಧಿಸಲು ಶಿಫಾರಸು ಮಾಡಲಿದೆ ಎಂದು ಅಶ್ವತ್ಥ ನಾರಾಯಣ್ ವಿವರಿಸಿದರು. ಆಯೋಗವು ಜಿಲ್ಲಾ ಮಟ್ಟದಲ್ಲಿ ದಲಿತರ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಸಭೆಗಳನ್ನು ನಡೆಸುತ್ತಿದೆ.
ಜನರಿಗೆ ಮಾರ್ಗದರ್ಶನ ನೀಡಿ ಪರಿಹಾರ ಒದಗಿಸುತ್ತಿದೆ. ಕತ್ತಿ-ಚಾಕುವಿನಿಂದ ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ಸಾಮರಸ್ಯದಿಂದ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬಹುದು ಎನ್ನುವ ವಾದದಲ್ಲಿ ನಂಬಿಕೆ ಇಟ್ಟಿದ್ದು, ಅದೇ ಹಾದಿಯಲ್ಲಿ ಕಾರ್ಯ ನಿರ್ವಹಿಸುವೆ ಎಂದು ಅವರು ಸಭೆಗೆ ಸ್ಪಷ್ಟಪಡಿಸಿದರು.
ಒಗ್ಗಟ್ಟಿನ ಅಗತ್ಯ: ಶೋಷಿತರಾಗಿರುವ ದಲಿತರು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ತಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ. ತಿಂಗಳಿಗೊಮ್ಮೆ ದಲಿತ ಮುಖಂಡರು ಸಭೆ ಸೇರಿ ಸಮುದಾಯದವರಿಗೆ ಕಚೇರಿಗಳಿಂದ ಆಗಬೇಕಿರುವ ಕೆಲಸ, ದೊರಕಬೇಕಿರುವ ಸೌಲಭ್ಯಗಳನ್ನು ಪರಿಹರಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಪರಿಶಿಷ್ಟ ಜನಾಂಗದವರಿಗೆ ಸವಲತ್ತು ನೀಡುವಿಕೆಯಲ್ಲಿ ತೊಂದರೆ ನೀಡುವ ಅಧಿಕಾರಿಗಳನ್ನು ಶಿಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಜಿಲ್ಲಾ ಪ್ರವಾಸದ ವೇಳೆ ತಮ್ಮ ಗಮನಕ್ಕೆ ಬಂದ ಪ್ರಕರಣಗಳನ್ನು ಸಮಾಜ ಕಲ್ಯಾಣ ಇಲಾಖೆ ಗಮನಕ್ಕೂ ತರಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.
3 ಎಕರೆ ಕಲ್ಪಿಸಿ: ಪ್ರತಿ ಗ್ರಾಮದಲ್ಲೂ ಪರಿಶಿಷ್ಟರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಕಲ್ಪಿಸಲು 3 ಎಕರೆ ಜಮೀನು ಒದಗಿಸಬೇಕು. ಅನುದಾನಗಳ ಪೈಕಿ ಶೇಕಡ 22.75ರಷ್ಟು ಹಣವನ್ನು ದಲಿತ ಕೇರಿಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರಿಗೆ ಅಶ್ವತ್ಥ ನಾರಾಯಣ್ ಸೂಚನೆ ನೀಡಿದರು.
ಭಾವನಾತ್ಮಕ ಸಂಬಂಧ: ರಾಮನಗರ ಜಿಲ್ಲೆಗೆ ಬಂದು ಎರಡು ತಿಂಗಳಲ್ಲಿ ಇಲ್ಲಿನ ಜನರೊಟ್ಟಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ತಾವು ಇಲ್ಲಿನ ರೈತರು ಮತ್ತು ದಲಿತರ ಅಭಿವೃದ್ಧಿ ನಿಟ್ಟಿನ ಸಭೆಗಳನ್ನು ನಡೆಸಿ, ಕಾರ್ಯೋನ್ಮುಖ ಆಗಿರುವೆ ಎಂದು ಜಿಲ್ಲಾಧಿಕಾರಿ ವಿಶ್ವನಾಥ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕುವಾರು ಪಹಣಿ ತಿದ್ದುಪಡಿ ಆಂದೋಲನವನ್ನು ನಡೆಸಲಾಗುತ್ತಿದೆ. ಮೊದಲ ಸಭೆಯಲ್ಲೇ ಸ್ಮಶಾನ ಇಲ್ಲದ ಗ್ರಾಮಗಳನ್ನು ಗುರ್ತಿ ಸುವ ಕೆಲಸಕ್ಕೆ ಚಾಲನೆ ನೀಡಿದ್ದು, ಈ ಜಿಲ್ಲೆಯ ಅಗತ್ಯತೆಗಳನ್ನು ಸರ್ಕಾರದಿಂದ ಪೂರೈಸಲು ಶಕ್ತಿ ಮೀರಿ ಶ್ರಮಿಸುತ್ತಿರುವೆ ಎಂದು ತಿಳಿಸಿದರು.
ಕಾಮಗಾರಿಗಳಲ್ಲಿ ದಲಿತರಿಗೆ ಶೇಕಡ 22.75 ಮೀಸಲಾತಿ ಒದಗಿಸಿದ್ದಲ್ಲಿ ಮಾತ್ರ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗುತ್ತಿದೆ. ಸಭೆಯಲ್ಲಿ ಆಯೋಗದ ಸದಸ್ಯ ಸತ್ಯೇಂದ್ರ ಕುಮಾರ್, ಕಾರ್ಯದರ್ಶಿ ಪದ್ಮ, ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಎಎಸ್ಪಿ ಕುಲದೀಪ್ ಜೈನ್, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಂಗೇಗೌಡ ಮತ್ತಿತರರು ಭಾಗವಹಿಸಿದ್ದರು.
ದಲಿತ ಸಮುದಾಯಕ್ಕಾಗಿ ಸಂವಿಧಾನದಲ್ಲಿ ಮೀಸಲು ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. ಅವೆಲ್ಲವೂ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ದಲಿತರಿಗೆ ಅನ್ಯಾಯವಾದಲ್ಲಿ ಆಯೋಗದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಲಾಗುತ್ತದೆ
ಟಿ ಅಶ್ವತ್ಥ ನಾರಾಯಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

