ಬೆಂಗಳೂರು ಗ್ರಾಮಾಂತರ

ಹುತ್ಮಾತ ನಾಯಕರ ದೇಶ ಪ್ರೇಮ ಸ್ಫೂರ್ತಿಯಾಗಲಿ: ಸಿ. ಮುನಿಯಪ್ಪ

Published On :

ಸೂಲಿಬೆಲೆ: ದೇಶಕ್ಕೆ ಮಡಿದ ನಾಯಕರ ರಾಷ್ಟ್ರ ಪ್ರೇಮ ಈಗಿನ ಯುವಕರಿಗೆ ಸ್ಫೂರ್ತಿಯಾಗಬೇಕು. ಈ ನಿಟ್ಟಿನಲ್ಲಿ ನಿರ್ಮಾಣವಾಗಲಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಪುತ್ಥಳಿ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು  ತಾ. ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ ಹೇಳಿದ್ದಾರೆ.
ಸೋಮವಾರ ಸೂಲಿಬೆಲೆ, ಗಿಡ್ಡಪ್ಪನಹಳ್ಳಿ, ದೊಡ್ಡಅರಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಲ್ಲಭ ಭಾಯಿ ಪಟೇಲ್ ಪುತ್ಥಳಿ ನಿರ್ಮಾಣಕ್ಕೆ ಮಣ್ಣ, ಮರಳು ಹಾಗೂ ಕಬ್ಬಿಣದ ವಸ್ತುಗಳ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ದಿನದಲ್ಲಿ ನಡೆಯಿರುವ ಲೋಕಸಭಾ ಚುನಾವಣೆಯಲ್ಲಿ  ಮತದಾರರು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರನ್ನು ಆಶೀರ್ವದಿಸಬೇಕು. ಹಗರಣಗಳಿಂದ ದೇಶಕ್ಕೆ ಅಪಕೀರ್ತಿಯನ್ನು ತಂದಿರುವ ಕಾಂಗ್ರೆಸ್ ಸರ್ಕಾರವನ್ನು ಮತದಾರರು ತಿರಸ್ಕರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದರು. ಇದಕ್ಕೂ ಮುನ್ನ ಗಿಡ್ಡಪ್ಪನಹಳ್ಳಿ, ಸೂಲಿಬೆಲೆ ಹಾಗೂ ದೊಡ್ಡಅರಳಗೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಲೋಹ ಸಂಗ್ರಹಣಿ ಕಾರ್ಯ ನಡೆಯಿತು. ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ಬೈರೇಗೌಡ, ಟಿ.ಸಿ ವೆಂಕಟೇಗೌಡ ಮೊದಲಾದ ಮುಖಂಡರು ಭಾಗವಹಿಸಿದ್ದರು.



ದಲಿತ ವಿರೋಧಿ ಪೊಲೀಸರು: ದಸಂಸ ಆರೋಪ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆದಿರುವ ಹಲವು ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಖಂಡನೀಯ. ದಲಿತ ವಿರೋಧಿ ನೀತಿ ಆಕ್ಷೇಪಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ, ತಾಲೂಕು ಪ್ರಧಾನ ಸಂಚಾಲಕ ಕೊನಘಟ್ಟ ಮಹೇಶ್, ಸಂಘಟನಾ ಸಂಚಾಲಕ ಗೂಳ್ಯ ಹನುಮಣ್ಣ ಇತ್ತೀಚೆಗಷ್ಟೇ ಇಲಾಖೆಯಿಂದ ನಡೆದ ದಲಿತ ಮುಖಂಡರ ಸಭೆ ಮುಖಂಡರು ಮತ್ತು ದಲಿತ ವರ್ಗದ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಎಂದಿದ್ದಾರೆ. ತಾಲೂಕಿನ ಕನ್ನಮಂಗಲದಲ್ಲಿ ನಡೆದ ದಲಿತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ಪ್ರಕರಣವನ್ನೇ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ. ಇದು ದಲಿತದ್ರೋಹಿ ಆಡಳಿತಕ್ಕೆ ಸ್ಪಷ್ಟ ಉದಾಹರಣೆ. ಅದೇ ರೀತಿ ದಾಸಗೊಂಡನಹಳ್ಳಿಯ ದಲಿತ ಮಹಿಳೆ ಸಾವಿನ ಪ್ರಕರಣವನ್ನು ಐಪಿಸಿ 302ರಂತೆ ದೂರು ದಾಖಲಿಸಿಕೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ತಪ್ಪಿದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಗ್ರ ಹೋರಾಟಕ್ಕೆ ಸಜ್ಜಾಗಲಿದೆ ಎಂದು ಎಚ್ಚರಿಸಿದ್ದಾರೆ.
4 ಲಕ್ಷ ಮೌಲ್ಯದ
ಚಿನ್ನಾಭರಣ ಕಳವು
ಬೆಂಗಳೂರು: ಮನೆಯವರು ಊರಿಗೆ ತೆರಳಿದ್ದಾಗ ಬೀಗ ಮುರಿದು ಮನೆಯ ಒಳಗೆ ನುಗ್ಗಿದ ಕಳ್ಳರು ರು. 4 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಬಿಕಾಸಿಪುರ ಮುಖ್ಯರಸ್ತೆ ಚಿನ್ನಪ್ಪ ಬಡಾವಣೆಯ ಕಿರಣ್ ಅಪ್ಪಾಜಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಿರಣ್ ಅವರು ಜ. 18ರಂದು ಬೆಳಗ್ಗೆ 6 ಗಂಟೆಗೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಊರಿಗೆ ತೆರಳಿದ್ದರು. ಅವರು ಜ. 20ರಂದು ಬೆಳಗಿನ ಜಾವ 1.45ಕ್ಕೆ ಮನೆಗೆ ಮರಳಿದ್ದು, ಆಗ ಕಳ್ಳರು ಮುಂಬಾಗಿಲ ಬೀಗ ಮುರಿದು ಪ್ರವೇಶಿಸಿರುವುದು ಗೊತ್ತಾಗಿದೆ. ಒಳಹೋಗಿ ಪರಿಶೀಲಿಸಿದಾಗ 3 ನೆಕ್ಲೇಸ್, 2 ಚೈನ್, 8 ಗೋಲ್ಡ್ ಕಾಯಿನ್, ಲ್ಯಾಪ್ಟಾಪ್ ಸೇರಿದಂತೆ ಒಟ್ಟು ರು. 4.75 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿರುವುದಾಗಿ ಕುಮಾರಸ್ವಾಮಿ ಬಡಾವಣೆ ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಮನೆಕಳ್ಳರ ಬಂಧನ
ಬೆಂಗಳೂರು: ನಾಲ್ಕು ಕುಖ್ಯಾತ ಮನೆಗಳ್ಳರನ್ನು ಬಂಧಿಸಿರುವ ರಾಜರಾಜೇಶ್ವರಿನಗರ ಪೊಲೀಸರು ಬಂಧಿತರಿಂದ ರು. 3.5 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಾಯಂಡಹಳ್ಳಿ ಅಂಬೇಡ್ಕರ್ನಗರ ನಿವಾಸಿ ವೇಲು, ರಾಮನಗರ ಐಜೂರಿನ ನವಾಜ್, ಪಂತರಪಾಳ್ಯದ ರಾಜ್ಕುಮಾರ್ ಮತ್ತು ವೆಂಕಟೇಶ್ ಬಂಧಿತರು. ಈ ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಕಬ್ಬಿಣದ ಸರಳಿನಿಂದ ಬೀಗವನ್ನು ಮುರಿದು ಕಳವು ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ 6 ಪ್ರಕರಣ, ಚಂದ್ರ ಬಡಾವಣೆ ಮತ್ತು ಕೆಂಗೇರಿಯ ತಲಾ 1 ಪ್ರಕರಣಗಳು ಪತ್ತೆಯಾಗಿದ್ದು, 85 ಗ್ರಾಂ ಚಿನ್ನಾಭರಣ ಹಾಗೂ 2 ಕೆ.ಜಿ. ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಗೆ ಬೆದರಿಗೆ ಪರ್ಸ್ ಕಳವು
ಬೆಂಗಳೂರು: ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ಬೆದರಿಸಿ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್ ಕಿತ್ತುಕೊಂಡು ಹೋದ ಘಟನೆ ಭಾನುವಾರ ರಾತ್ರಿ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಬಿ.ರಸ್ತೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ ಚೇತನ್ ಅವರು ಭಾನುವಾರ ರಾತ್ರಿ ಊರಿಗೆ ಹೋಗುವ ಸಲುವಾಗಿ ಮೆಜೆಸ್ಟಿಕ್ಗೆ ತೆರಳಿದ್ದು, ಅದಕ್ಕೂ ಮುನ್ನ ಟಿ.ಬಿ.ರಸ್ತೆಯ ಶ್ರೀಗಣೇಶ ದೇವಸ್ಥಾನದ ಸಮೀಪ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಹಿಂದಿನಿಂದ ಬಂದು ಹೆದರಿಸಿದ್ದಾರೆ. ಜತೆಗೆ ಚೂಪಾದ ಆಯುಧದಿಂದ ಕತ್ತಿನ ಬಳಿ ಗಾಯಗೊಳಿಸಿದ್ದಲ್ಲದೇ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್, ಮೊಬೈಲ್ ಫೋನ್ ಹಾಗೂ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ರಕ್ತದಾನ ಶ್ರೇಷ್ಠ ದಾನ: ಮುಬಾರಕ್

ವಿಜಯಪುರ: ರಕ್ತಸ್ರಾವದಿಂದ, ರಕ್ತಕೊರತೆಯಿಂದ ಅಸುನೀಗುತ್ತಿರುವ ಸಂಖ್ಯೆ ಕಡಿಮೆ ಏನಿಲ್ಲ. ಇದು ನಿಲ್ಲಬೇಕಾದರೆ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಎಂದು ಪುರಸಭಾ ಸದಸ್ಯ ಮುಬಾರಕ್ ತಿಳಿಸಿದರು.
ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಜೆಸಿಐ ಹಾಗೂ ಬೆಂಗಳೂರು ಲಯನ್ಸ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠ ದಾನವಾಗಿದ್ದು ರಕ್ತ ನೀಡುವುದರಿಂದ ನಮಗೆ ಬೇರೆ ರೀತಿಯಲ್ಲಿ ತೊಂದರೆ ಉಂಟಾಗುತ್ತಿದೆ ಎಂಬ ತಪ್ಪು ತಿಳುವಳಿಕೆ ಇದೆ, ಆದರೆ ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಮತ್ತಷ್ಟು ಆರೋಗ್ಯ ವೃದ್ಧಿಯಾಗುತ್ತದೆ ಎಂದರು.  ವಿಕ್ಟೋರಿಯ ಆಸ್ಪತ್ರೆಯ ಡಾ.ಪ್ರಸನ್ನ ಮಾತನಾಡಿ ಪ್ರತಿ ಸಂಘ ಸಂಸ್ಥೆಯವರು ಮೊದಲಿಗೆ ರಕ್ತದಾನ ಶಿಬಿರವನ್ನು ಆಯೋಜಿಸಬೇಕು. ಇದರಿಂದ ಸಾಕಾಷ್ಟು ಜನರ ಪ್ರಾಣ ಉಳಿಯುತ್ತದೆ. ಇಂದು ಹಿಂದೂ ಮುಸ್ಲಿಂ ಎನ್ನದೇ ಜಾತ್ಯತೀತವಾಗಿ ನಡೆಯುತ್ತಿರುವ ರಕ್ತದಾನ ಶಿಬಿರ ಶ್ಲಾಘನೀಯವಾದುದು ಎಂದರು. ಜೆಸಿಐ ಸಂಸ್ಥೆಯ ಅಧ್ಯಕ್ಷ ಅನ್ನಿಸ್ ಉರ್ ರೆಹಮಾನ ಮಾತನಾಡಿ ರಕ್ತ ದಾನ ಮಾಡುವುದರಿಂದ ಹೃದಯಾಘಾತ, ರಕ್ತದೊತ್ತಡಗಳಂತಹ ಕಾಯಿಲೆಗಳನ್ನು ತಡೆಯಬಹುದು ಎಂದರು. ಇದೇ ಸಂಧರ್ಭದಲ್ಲಿ ವಿಜಯಪುರ ಘಟಕದ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಕಾರ್ಯದರ್ಶಿ  ತೇಜಸ್ವಿನಿ ವಿನಯ್, ಯುವ ಜೇಸಿ ಅಧ್ಯಕ್ಷ ವೆಂಕಟೇಶ್, ರಫಿಕ್ಅಹಮದ್, ಜೇಸಿಐ ಹಾಗೂ  ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ 77 ಬಾಟಲ್ ರಕ್ತವನ್ನು ಶೇಖರಿಸಿ ಕೊಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.