ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದಾಗ ಜನಪ್ರತಿನಿಧಿಗಳಿಗೆ ಗೌರವ
ನೆಲಮಂಗಲ: ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದಾಗ ಮಾತ್ರ ಜನಪ್ರತಿನಿಧಿಗಳಿಗೆ ಜನತೆ ಉತ್ತಮ ಸಹಕಾರ ನೀಡುತ್ತಾರೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಅವರು ಮಂಗಳವಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಭಾರತ್ ನಿರ್ಮಾಣ್ ರಾಜೀವ್ಗಾಂಧಿ ಸೇವಾ ಕೇಂದ್ರದ ವತಿಯಿಂದ 16.5 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಬಹುತೇಕ ಕೃಷಿ ಜಮೀನು ಕೈಗಾರಿಕೆ ಸ್ಥಾಪನೆಗೆ ಸ್ವಾಧೀನಗೊಂಡಿದೆ. ಇನ್ನು ಮುಂದೆ ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ವರಮಾನ ಸಿಗುತ್ತದೆ. ಪ್ರತಿ ಕೈಗಾರಿಕೆಯ ಶೇ.2ರಷ್ಟು ಲಾಭಾಂಶವನ್ನು ಆಯಾ ಸ್ಥಳದಲ್ಲಿನ ಗ್ರಾಮಗಳ ಅಭಿವೃದ್ಧಿಗೆ ವ್ಯಯ ಮಾಡಲು ಸರ್ಕಾರದಿಂದ ಸೂಚನೆ ನೀಡಿದೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯ್ತಿ ಕೈಗಾರಿಕೆಗಳಿಂದ ವಸೂಲಿ ಮಾಡುವ ತೆರಿಗೆ ಮತ್ತು ಶೇ.2 ರಷ್ಟು ಹಣವನ್ನು ಬಳಸಿಕೊಳ್ಳಿ ಎಂದರು.
ಗ್ರಾಮ ಪಂಚಾಯ್ತಿಯ ನೂತನ ಕಟ್ಟಡವನ್ನು ಶ್ರೀ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭರವಸೆ: ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, ಈ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಆದಾಯ ಇಲ್ಲದಿದ್ದರೂ ಉತ್ತಮ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಶ್ಲಾಘಿಸಿ ನನ್ನ ಶಾಸಕ ನಿಧಿಯಿಂದ 2 ಲಕ್ಷ ರು.ಗಳನ್ನು ಕಟ್ಟಡದ ಕಾಂಪೌಂಡ್ ನಿರ್ಮಾಣಕ್ಕೆ ನೀಡುವುದಾಗಿ ಭರವಸೆ ನೀಡಿದರು.
ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡುತ್ತಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಆಶ್ರಯ ವಸತಿ ಸಮಸ್ಯೆ ಕಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಮೇಲ್ಮಟ್ಟದ ಜನ ಪ್ರತಿನಿಧಿಗಳು ಕೆಲಮಟ್ಟದ ಚುನಾಯಿತ ಪ್ರತಿನಿಧಿಗಳ ಕಷ್ಟವನ್ನು ಅರಿತು ಸಹಾಯಕ್ಕೆ ಮುಂದಾಗಬೇಕಿದೆ ಎಂದರು.
ಜಿಲ್ಲಾಧಿಕಾರಿಗಳಿಂದ ಆದೇಶಿಸಿ: ಸ್ಥಳೀಯ ಗ್ರಾಮಸ್ಥರು ಪ್ರತಿ ಗ್ರಾಮದಲ್ಲಿಯೂ ಸ್ಮಶಾನಕ್ಕಾಗಿ ಕನಿಷ್ಠ ಐದು ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ ಇಲಾಖೆಯಿಂದ ಮೀಸಲಿಡಲು ಜಿಲ್ಲಾಧಿಕಾರಿಗಳಿಂದ ಆದೇಶ ಮಾಡಿಸಬೇಕು. ಸೋಂಪುರ ಹೋಬಳಿಯಲ್ಲಿ ಅಂತರ್ಜಲದ ನೀರಿನ ಮಟ್ಟ ಒಂದು ಸಾವಿರದ ಮೇಲಿದೆ. ಇಷ್ಟು ಆಳದಲ್ಲಿ ದೊರೆಯುವ ನೀರು ಫ್ಲೋರೈಡ್ ಮತ್ತು ನೈಟ್ರೇಟ್ ಅಂಶದಿಂದ ಕೂಡಿದ್ದು ಈ ನೀರನ್ನು ಕುಡಿದು ಈಗಾಗಲೇ ಸಾಕಷ್ಟು ಜನ ವಿಚಿತ್ರ ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅಂತರ್ಜಲ ಅಭಿವೃದ್ಧಿಗೆ ಎತ್ತಿನ ಹೊಳೆ ಯೋಜನೆ ಮೂಲಕ ಹೋಬಳಿಯ ಎಲ್ಲಾ ಗ್ರಾಮಗಳ ಕೆರೆಗಳಿಗೂ ನೀರು ಹರಿಸಬೇಕೆಂದು ಶಾಸಕರಿಗೆ ಮನವಿ ನೀಡಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ತಾ.ಪಂ.ಮಾಜಿ ಅಧ್ಯಕ್ಷ ಪುಟ್ಟಣ್ಣ, ಮುಖಂಡ ಶಿವಣ್ಣ, ಶಿವಗಂಗೆಯ ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಮಾತನಾಡಿದರು.
ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್, ತಾ.ಪಂ.ಅಧ್ಯಕ್ಷೆ ಸರಸ್ವತಮ್ಮ, ಜಿ.ಪಂ. ಮಾಜಿ ಸದಸ್ಯರಾದ ವೆಂಕಟೇಶ್, ತ್ಯಾಮಗೊಂಡ್ಲು ಹೊನ್ನಸಿದ್ದಯ್ಯ, ಗ್ರಾ.ಪಂ.ಉಪಾಧ್ಯಕ್ಷ ಬಿ.ಎನ್.ಪರಮೇಶ್, ಮಾಜಿ ಅಧ್ಯಕ್ಷರಾದ ಎಂ.ಪರಮಶಿವಯ್ಯ, ಗಂಗಣ್ಣ, ಸೇವ್ಯಾನಾಯ್ಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

