ಬೆಂಗಳೂರು ಗ್ರಾಮಾಂತರ

ಇನ್ನೂ ಸ್ಥಳಾಂತರಗೊಳ್ಳದ ಉಪವಿಭಾಗಾಧಿಕಾರಿ ಕಚೇರಿ

Published On :

ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ನಗರಕ್ಕೆ ಸ್ಥಳಾಂತರ ಮಾಡಲು ಸಂಘಟನೆಗಳು ನೀಡಿದ್ದ ಗಡುವು ಮುಗಿಯಲು 2 ದಿನ ಮಾತ್ರ ಬಾಕಿ ಉಳಿದಿದೆ. ಈ ಕುರಿತು ಬುಧವಾರ ಕೂಡ ಕಂದಾಯ ಇಲಾಖೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಈಗಾಗಲೇ ಸ್ಥಳ ಪರಿಶೀಲನೆ ಮುಗಿಸಿರುವ ಅಧಿಕಾರಿಗಳು ಕಚೇರಿ ಸ್ಥಳಾಂತರ ಆದೇಶಕ್ಕೆ ಮೀನಮೇಷ ಎಣಿಸುತ್ತಿರುವುದು ಖಂಡನೀಯ. 1960ರಿಂದ ಉಪವಿಭಾಗವಾಗಿರುವ ದೊಡ್ಡಬಳ್ಳಾಪುರವನ್ನು ಆರಂಭದಿಂದಲೂ ನಿರ್ಲಕ್ಷಿಸಲಾಗುತ್ತಿದೆ. 54 ವರ್ಷಗಳಿಂದ ಉಪವಿಭಾಗ ಕಚೇರಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಂಡಿರುವುದು ಅವೈಜ್ಞಾನಿಕವಾಗಿದೆ.
25 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಕೆಲ ದಿನಗಳ ಕಾಲ ಕಾರ್ಯನಿರ್ವಸಿದ್ದ ಉಪವಿಭಾಗಾಧಿಕಾರಿ ಕಚೇರಿ ಕೆಲ ರಾಜಕೀಯ ಪಟ್ಟಭದ್ರರ ಧೋರಣೆಯಿಂದ ಮತ್ತೆ ಬೆಂಗಳೂರಿಗೇ ವರ್ಗಾವಣೆಯಾಯಿತು. ಅಂದಿನಿಂದ ಇಂದಿನವರೆಗೆ ಇಲ್ಲಿನ ಜನರ ಹೋರಾಟ ಮುಂದುವರಿದಿದೆ. ದಶಕಗಳ ಹೋರಾಟಕ್ಕೆ ಕವಡೆ ಕಿಮ್ಮತ್ತು ಕೊಡುವ ಸೌಜನ್ಯವನ್ನೂ ಯಾವ ಸರ್ಕಾರಗಳು ಮಾಡಿಲ್ಲ. ಹೀಗಾಗಿ ಎಲ್ಲ ಬಗೆಯ ತ್ಯಾಗ ಮತ್ತು ಗಂಭೀರ ಹೋರಾಟಕ್ಕೆ ಜನ ಸಜ್ಜಾಗಿದ್ದಾರೆ ಎಂಬುದು ಹೋರಾಟ ಸಮಿತಿಯ ವಾದ.
ಅವೈಜ್ಞಾನಿಕ ಒತ್ತಾಯ: ಉಪವಿಭಾಗ ಕೇಂದ್ರವನ್ನು ದೇವನಹಳ್ಳಿಗೆ ವರ್ಗಾಯಿಸಿ ಎಂದು ಹೇಳುವ ಮೂಲಕ ಕೆಲವರು ಅವೈಜ್ಞಾನಿಕ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಮಾನ್ಯತೆ ಸಿಗಲಾರದು. ದೊಡ್ಡಬಳ್ಳಾಪುರ ಉಪವಿಭಾಗದ ಕಚೇರಿ ದೇವನಹಳ್ಳಿಯಲ್ಲಿ ಸ್ಥಾಪನೆಯಾಗಲು ಹೇಗೆ ಸಾಧ್ಯ ಎಂಬ ಸಾಮಾನ್ಯಜ್ಞಾನವೂ ಇಲ್ಲದೆ ವಿರೋಧಕ್ಕಾಗಿ ವಿರೋಧ ಎಂಬ ಧೋರಣೆ ಅನುಸರಿಸಿದಂತಿದೆ. ನ್ಯಾಯಬದ್ಧವಾದ ಬೇಡಿಕೆಗಳಿಗೆ ಮಾನ್ಯತೆ ಸಿಕ್ಕೇ ಸಿಗುತ್ತದೆ. ಈ ಬಾರಿ ಯಾವುದೇ ಪ್ರಭಾವಗಳಿಗೂ ಮಣಿಯುವುದಿಲ್ಲ. ಜನರ ಒತ್ತಾಯಕ್ಕೆ ಮನ್ನಣೆ ಸಿಗಲೇಬೇಕು. ತಪ್ಪಿದಲ್ಲಿ ಕಾನೂನುಭಂಗ ಮತ್ತು ಅಸಹಕಾರ ಚಳವಳಿಗೂ ಮುಂದಾಗುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಸ್ಥಳಾಂತರ ಲಿಖಿತ ಆದೇಶ ಜ.24ರ ಒಳಗೆ ಕೈಸೇರಬೇಕು. ತಪ್ಪಿದಲ್ಲಿ ಗಣರಾಜ್ಯೋತ್ಸವದಂದು ಉಗ್ರ ಪ್ರತಿಭಟನೆ, ಉಪವಿಭಾಗಾಧಿಕಾರಿಗಳಿಗೆ ಧ್ವಜಾರೋಹಣ ಅವಕಾಶ ಭಂಗ ಮತ್ತು ಕಪ್ಪುಪಟ್ಟಿ ಪ್ರದರ್ಶನ, ಸಭಾ ಬಹಿಷ್ಕಾರಗಳನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಗಡುವು ಮುಗಿಯಲು 2 ದಿನ ಮಾತ್ರ ಬಾಕಿ ಉಳಿದಿದೆ. ಒಂದು ವೇಳೆ ಸರ್ಕಾರ ಈಗಲೂ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಪರಿಣಾಮ ಎದುರಿಸಲು ಸರ್ಕಾರ ಸಜ್ಜಾಗಬೇಕಿದೆ.
ನಾಳೆಯಿಂದ ಹೋರಾಟ: ಈ ಮಧ್ಯೆ ಉಪವಿಭಾಗಾಧಿಕಾರಿಗಳ ಕಚೇರಿ ವರ್ಗಾವಣೆಗೆ ಒತ್ತಾಯಿಸಿ ಮುಖ್ಯಮಂತ್ರಿ, ರಾಜ್ಯಪಾಲರು, ಜಿಲ್ಲಾಧಿಕಾರಿ ಮತ್ತು ಕಂದಾಯ ಸಚಿವರಿಗೆ ಪತ್ರ ಚಳವಳಿ ಆರಂಭಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ ಬಣದ ನೇತೃತ್ವದಲ್ಲಿ ಜ.24ರಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಆದಾಗ್ಯೂ ಸರ್ಕಾರದ ಹಂತದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಕಂದಾಯ ಉಪವಿಭಾಗವನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವಂತೆ ನಡೆದಿರುವ ದಶಕಗಳ ಹೋರಾಟಕ್ಕೆ ಸ್ಪಷ್ಟ ಉತ್ತರ ದೊರೆಯುವ ಕಾಲ ಸನ್ನಿಹಿತ ಎನ್ನಲಾಗುತ್ತಿದ್ದು, ಸರ್ಕಾರ ಈ ಹಂತದಲ್ಲಿ ಗಂಭೀರ ಚಿಂತನೆ ನಡೆಸಿದೆ. ಕಂದಾಯ ಸಚಿವಾಲಯ ಮತ್ತು ಸಿಎಂ ಸಚಿವಾಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.