ಬೆಂಗಳೂರು ಗ್ರಾಮಾಂತರ

ನಿತ್ಯಾನಂದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ

Published On :

ಕ.ಪ್ರ.ವಾರ್ತೆ ೤ ರಾಮನಗರ ೤ ಜ.27
ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಅವಮಾನಿಸಿರುವ ಕಪಟಿ ಸ್ವಾಮಿ ನಿತ್ಯಾನಂದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಂದಾಯ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ನಿತ್ಯಾನಂದ, ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಬಸವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಶೀಘ್ರ ನಿತ್ಯಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಕನ್ನಡಿಗರಿಗೆ ಅಪಮಾನ: ತಮಿಳುನಾಡಿನಿಂದ ಬಂದು ಬಿಡದಿಯ ಅಪ್ಪಟ ಕನ್ನಡ ನೆಲದಲ್ಲಿ ಧ್ಯಾನಪೀಠ ಆಶ್ರಮ ಸ್ಥಾಪಿಸಿಕೊಂಡು ನೆಲಸಿರುವ ನಿತ್ಯಾನಂದ ಕನ್ನಡದ ನೆಲ, ಜಲವನ್ನು ಬಳಸಿಕೊಂಡು ಕನ್ನಡಿಗರ ವಿರುದ್ಧವೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ, ಕನ್ನಡಿಗರನ್ನು ಅವಮಾನಿಸುವ ಜತೆಗೆ ಭಾವನೆಗಳನ್ನು ಕೆರಳಿಸುತ್ತಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಧ್ಯಾನಪೀಠ ಆಶ್ರಮವು ಸುಮಾರು 22 ಎಕರೆ ವ್ಯಾಪ್ತಿಯಲ್ಲಿದ್ದು, ಈ ಪೈಕಿ ಕೇವಲ 2 ಎಕರೆಯಷ್ಟು ಮಾತ್ರವಷ್ಟೇ ಭೂ ಪರಿವರ್ತನೆ ಆಗಿದೆ. ಕೃಷಿ ಜಮೀನಿನಲ್ಲಿ ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡು, ಭೂಕಂದಾಯ ಕಾಯ್ದೆಯನ್ನು ಉಲ್ಲಂಘಿಸಿದ್ದಲ್ಲದೆ ಸರ್ಕಾರಕ್ಕೆ ಲಕ್ಷಾಂತರ ರು. ತೆರಿಗೆ ಕಟ್ಟದೆ ವಂಚನೆ ಎಸಗಿದ್ದಾನೆ ಎಂದು ದೂರಿದರು.
ಶಾಂತಿಭಂಗ ಸಾಧ್ಯತೆ: ಮಹಿಳೆಯರಿಂದ ಗುಪ್ತ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡು ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಿತ್ಯಾನಂದ ಗೋಮುಖ ವ್ಯಾಘ್ರ. ದೌರ್ಜನ್ಯದ ಮೂಲಕ ಮಹಿಳಾ ಕುಲಕ್ಕೆ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ. ಶಾಂತಿಯ ನೆಲವೀಡಾದ ಕನ್ನಡ ನಾಡಿನಲ್ಲಿ ಆತನಿಂದ ಶಾಂತಿಗೆ ಭಂಗ ಉಂಟಾಗುತ್ತಿದೆ ಎಂದು ಹೇಳಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಒಂದು ವಾರದಲ್ಲಿ ನಿತ್ಯಾನಂದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಸಾವಿರಾರು ಮಂದಿ ಮಹಿಳೆಯರ ಜತೆ ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷೆ ಆರ್.ಮಧುಮತಿ, ಪದಾಧಿಕಾರಿಗಳಾದ ಮಂಜುಕುಮಾರಿ, ಸುಧಾ, ಸುಮಿತ್ರಾ, ರಮೇಶ, ಶಂಕರಬಾಬು, ನಾರಾಯಣ, ಮಂಜುಳಾ, ಪದ್ಮಕುಮಾರಿ, ಜಯಲಕ್ಷ್ಮಿ, ಮಾಲಾಶ್ರೀ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.