ಪರಮಶಿವಯ್ಯ ವರದಿ ಜಾರಿಗೆ ಆಗ್ರಹ
ಆನೇಕಲ್ಲು: ಆನೇಕಲ್ ತಾಲೂಕು ಸೇರಿದಂತೆ ರಾಜ್ಯದ 9 ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಹಾಗೂ ಕೃಷಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂಬ ಡಾ. ಪರಮಶಿವಯ್ಯ ಅವರ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸಬೇಕೆಂದು ಒತ್ತಾಯಿಸಿ ಸಿಪಿಐ (ಎಂ) ಕಾರ್ಯಕರ್ತರು ವಕೀಲ ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಆನೇಕಲ್ಲಿನ ದೇವರಕೊಂಡಪ್ಪ ವೃತ್ತದಿಂದ ತಾಲೂಕು ಕಚೇರಿಗೆ ಕಾಲ್ನಡಿಗೆ ಜಾಥಾ ಬಂದ ನೂರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಿ. ಮಹದೇಶ್, ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳಿದ್ದು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ತಾಲೂಕಿನಲ್ಲಿ ಅಂತರ್ಜಲ ಕುಸಿತವಾಗಿದ್ದು ಸಾವಿರಾರು ಅಡಿ ಭೂಮಿ ಕೊರೆದರೂ ನೀರು ಲಭ್ಯವಿಲ್ಲ. ಈ ಕೂಡಲೇ ಸರ್ಕಾರ ಹಾಗೂ ಆಡಳಿತ ಯಂತ್ರ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಅನಿವಾರ್ಯತೆ ಇದೆ: ತಾಲೂಕಿನ ಮುತ್ಯಾಲಮಡು ನೀರಿನ ಯೋಜನೆ, ಸರ್ಜಾಪುರ ಬಳಿಯ ದಕ್ಷಿಣ ಪಿನಾಕಿನಿ ಏತ ನೀರಾವರಿ ಯೋಜನೆಯ ಅನುಷ್ಠಾನದಿಂದ ತಾಲೂಕಿನ ಅಂತರ್ಜಲ ಮಟ್ಟ ಏರುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಶಿಂಷಾ ಶಾಶ್ವತ ಕುಡಿ ನೀರು ಯೋಜನೆ ಬಗ್ಗೆ ಬಿಟ್ಟಿ ಪ್ರಚಾರ ಪಡೆದುಕೊಂಡರು. ಈಗಿನ ಶಾಸಕರು ಕಾವೇರಿ 4ನೇ ಹಂತ ನೀರಿನ ಭರವಸೆಯನ್ನು ಜನತೆಗೆ ನೀಡುತ್ತಿದ್ದಾರೆ.ಈ ಕೂಡಲೇ ಸಮಗ್ರ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಕ್ರಮ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಪ್ರಧಾನ ಕಾರ್ಯದರ್ಶಿ ವಕೀಲ ಮಂಜುನಾಥ್ ಮಾತನಾಡಿ, ಡಾ. ಪರಮಶಿವಯ್ಯ ವರದಿಯಂತೆ ಪಶ್ಚಿಮ ಘಟ್ಟಗಳಲ್ಲಿ ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುವ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿಗೆ ಉಪಯೋಗಿಸಲು ಬೇಕಾದ ಯೋಜನೆ ಜಾರಿಯಾಗಬೇಕಿದೆ. ಕೊಳವೆ ಬಾವಿ ಕೊರೆಸುವುದು, ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುವುದು ಸಮಂಜಸ ಕಾಯಕವಲ್ಲ. ತಮಿಳುನಾಡು ಧರ್ಮಪುರಿ ಕುಡಿಯುವ ನೀರಿಗಾಗಿ ಹೊಗೆನಕಲ್ ಯೋಜನೆಯನ್ನು ಪೂರೈಸಿ, ಹಳ್ಳಿ ಹಳ್ಳಿಗೂ ಕುಡಿಯುವ ನೀರು ನೀಡುತ್ತಿದೆ. ಕರ್ನಾಟಕದ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದರು.
ತಾಲೂಕು ಮುಖಂಡರಾದ ಅಶೋಕ್ ಕುಮಾರ್, ಬಾಲರಾಜು, ಶಿವಾನಂದ, ಸುರೇಶ್ ಮಧು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

