ಕೃಷಿಗೆ ಕೈಗಾರಿಕೆ ಸ್ಥಾನಮಾನ ದೊರೆಯಬೇಕು: ಪುಟ್ಟಸ್ವಾಮಿ
ಚನ್ನಪಟ್ಟಣ: ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಫಲಪುಷ್ಪ ಪ್ರದರ್ಶನ ಕೃಷಿ ಕ್ಷೇತ್ರದಲ್ಲಿ ಹೊಸ ಹುರುಪು ಮೂಡಿಸಲು ಸಹಕಾರಿಯಾಗಿದ್ದು, ಇಂತಹ ಪ್ರದರ್ಶನಗಳಿಗೆ ಹೆಚ್ಚಿನ ಆದ್ಯತೆ ದೊರಕಬೇಕೆಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಅಶ್ವತ್ಥ್ ಹೇಳಿದರು.
ಇಲ್ಲಿನ ಕೆಂಗಲ್ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆ ಮೂರು ದಿನಗಳ ಕಾಲ ಹಮ್ಮಿ ಕೊಂಡಿದ್ದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು ರೈತರಿಗೆ ಕಾಲ ಕಾಲಕ್ಕೆ ಸೂಕ್ತ ಮಾಹಿತಿ ತಲುಪಿಸಲು ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿನವರೆಗೆ ರೈತರು ಬಂದು ಹೋಗುವುದು ಕಷ್ಟ ಸಾಧ್ಯವಾದ ಕಾರಣ ಸ್ಥಳೀಯ ಮಟ್ಟದಲ್ಲಿ ಆಯೋಜಿಸಿದರೆ ಹೆಚ್ಚಿನ ಜನತೆಗೆ ಮಾಹಿತಿ ತಲುಪಲು ಸಹಕಾರಿಯಾಗುತ್ತದೆ ಎಂದರು.
ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾತನಾಡಿ, ಕೇವಲ ಪ್ರದರ್ಶನ ಆಯೋಜಿಸಿ ಇಲ್ಲಿಗೆ ಬರುವ ರೈತರಿಗೆ ಮಾಹಿತಿ ನೀಡುವ ಕೆಲಸಕ್ಕೆ ಅಧಿಕಾರಿಗಳು ತೃಪ್ತರಾಗದೆ ಗ್ರಾಮೀಣ ಭಾಗಕ್ಕೆ ತೆರಳಿ ರೈತರಿಗೆ ಅಗತ್ಯವಿರುವ ಸಲಹೆ ಸಹಕಾರ ನೀಡುವ ಮೂಲಕ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲಾಖೆಯನ್ನು ಜನಮುಖಿಗೊಳಿಸಲು ಶ್ರಮಿಸಬೇಕೆಂದರು.
ರಾಜ್ಯ ರೈತ ಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ರೈತರಿಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಎಷ್ಟೇ ವೈಜ್ಞಾನಿಕವಾಗಿ ಬೆಳೆ ಬೆಳೆದರೂ ಅದರಿಂದ ಬದುಕು ಕಟ್ಟಿಕೊಳ್ಳಬಹುದೆಂಬ ನಂಬಿಕೆಯೇ ಹೊರಟು ಹೋಗಿದೆ. ಮಾರುಕಟ್ಟೆಯಲ್ಲಿ ರೈತನಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರ ಮತ್ತು ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.
ಕೃಷಿಗೆ ಕೈಗಾರಿಕೆ ಸ್ಥಾನಮಾನ ದೊರೆಯಬೇಕು. ಕೃಷಿಯನ್ನು ಒಂದು ಉದ್ಯಮ ಎಂದು ನಮ್ಮ ಅಧಿಕಾರಿಗಳು ಎಲ್ಲಿವರೆಗೆ ಭಾವಿಸುವುದಿಲ್ಲವೋ ಅಲ್ಲೀವರೆಗೆ ರೈತನ ನೋವುಗಳಿಗೆ ಪರಿಹಾರ ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಬೇಕಿದೆ ಎಂದರು.
ಹನಿ ಮತ್ತು ತುಂತುರು ನೀರಾವರಿ ಯೋಜನೆಗಳಿಗೆ ಸರ್ಕಾರ ಸಾಕಷ್ಟು ಸಹಾಯ ಧನ ನೀಡುತ್ತಿದೆಯಾದರೂ ತಾಲೂಕಿನ ಬಹುಪಾಲು ಭೂಮಿಗೆ ನೀರಿನ ಮೂಲವೇ ಇಲ್ಲದಂತಾಗಿದ್ದು, ರೈತನಿಗೆ ಈ ಸಹಾಯಧನದಿಂದ ನಯಾಪೈಸೆ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಸಂಬಂಧ ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಆಗ್ರಹಿಸಿದರು.
ಜಿಲ್ಲಾ ತೋಟಗಾರಿಕಾ ಸಂಘದ ನಿರ್ದೇಶಕರಾದ ಜಯಮ್ಮ, ಪುಟ್ಟಗೌರಮ್ಮ, ಕಾಂತರಾಜ ಪಟೇಲ್, ನಾರಾಯಣಪ್ಪ, ಶಿವಕುಮಾರ್, ಹಿರಿಯ ಹೋರಾಟಗಾರ ಸಿಂ.ಲಿಂ.ನಾಗರಾಜ್, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕಿ ಹೇಮಾ, ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಲತಾ ವೆಂಕಟಪತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

