ಕೋಟೆ ಕೊಳ್ಳೆ ಹೋದ್ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ...
ರಾಮನಗರ: ಇದುವರೆಗೆ ಹಾವೂ ಸಾಯಬಾರದ್ದು, ಕೋಲೂ ಮುರಿಯಬಾರದು ಎನ್ನುವ ಧೋರಣೆ ತಳೆದಿದ್ದ ರಾಮನಗರ ಜಿಲ್ಲಾಡಳಿತವು ಕೋಟೆ ಕೊಳ್ಳೆ ಹೋದ್ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದೀಗ ಮುಂದಾಗಿದೆ.
ಒಂದೆಡೆ ಕಣ್ವ, ಮತ್ತೊಂದೆಡೆ ಅರ್ಕಾವತಿ, ಮಗದೊಂದೆಡೆ ಶಿಂಷಾ ನದಿ ಒಡಲಿನಲ್ಲಿ ಹೇರಳವಾಗಿದ್ದ ಪ್ರಾಕೃತಿಕ ಮರಳು ಸಂಪತ್ತು ಲೂಟಿ ಮಾಡಿದ್ದಾಗಿದೆ.
ಕಡೆಗೂ ಮುಂದಾದರು: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಂದಿದ್ದ ಯಂತ್ರ ಚಾಲಿತ ದೋಣಿಯೊಂದಿಗೆ ಇಗ್ಗಲೂರಿನ ಎಚ್.ಡಿ. ದೇವೇಗೌಡ ಬ್ಯಾರೇಜ್ ಬಳಿ ಶಿಂಷಾ ನದಿಯಲ್ಲಿ ಚನ್ನಪಟ್ಟಣ ತಾಲೂಕು ಆಡಳಿತವು ಮರಳುಗಾರಿಕೆ ಅಡ್ಡೆಗಳ ವಿರುದ್ಧ ಶುಕ್ರವಾರ ಕಾರ್ಯಾಚರಣೆ ನಡೆಸಿದೆ. ಮರಳುಗಾರಿಕೆಗೆ ಬಳಸುತ್ತಿದ್ದ 12 ತೆಪ್ಪಗಳು ಮತ್ತು 3 ಪಾತಾಳಗರಡಿ ಸೇರಿದಂತೆ ಕೆಲ ವಸ್ತುಗಳನ್ನು ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೊಪ್ಪರಿಕೆಗಳನ್ನು ವಶಪಡಿಸಿಕೊಂಡ ಬಗ್ಗೆ ಖಚಿತ ಮಾಹಿತಿ ಇಲ್ಲ.
ನಿವಾರಣೆಗೆ ಪ್ರಯತ್ನ: ಚನ್ನಪಟ್ಟಣ ತಾಲೂಕು ಆಡಳಿತವು ಅಕ್ರಮ ಮರಳು ದಂಧೆಕೋರರ ಜತೆ ಕೈ ಜೋಡಿಸಿದೆ ಎನ್ನುವ ಆರೋಪ ವ್ಯಾಪಕವಾಗಿದೆ. ತೀರಾ ಈಚಿನವರೆಗೂ ಕಣ್ವ ಮತ್ತು ಶಿಂಷಾ ನದಿ ಪಾತ್ರದಿಂದ ಮರಳು ತುಂಬಿದ ನೂರಾರು ಲಾರಿ, ಟ್ರ್ಯಾಕ್ಟರ್ ದಿನನಿತ್ಯ ಸಂಚರಿಸುತ್ತಲೇ ಇದ್ದವು. ಚನ್ನಪಟ್ಟಣದಲ್ಲಿ ಸಿದ್ದರಾಮ ಹೆಗ್ಗಡೆ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೊಂಚ ಎಚ್ಚೆತ್ತುಕೊಂಡಿದ್ದು, ಕಳಂಕ ನಿವಾರಣೆಗೆ ಕಸರತ್ತು ನಡೆಸುತ್ತಿದೆ. ನದಿ ನೀರಿನ ನಡುವೆ ನಡೆಸುವ ಮರಳುಗಾರಿಕೆಯಲ್ಲಿ ಕೊಪ್ಪರಿಕೆಗಳನ್ನು ಪ್ರಧಾನವಾಗಿ ಬಳಸಿಕೊಳ್ಳಲಾಗುತ್ತದೆ. ಅದು ಹೇಗೋ ಕಾರ್ಯಾಚರಣೆ ಸುಳಿವನ್ನರಿತ ಮರಳು ದಂಧೆಕೋರರು ಶಿಂಷಾ ನದಿಯಲ್ಲಿ ಅಡಗಿಸಿಟ್ಟಿದ್ದ ಕೊಪ್ಪರಿಕೆಗಳನ್ನು ಎರಡು ದಿನ ಮುನ್ನವೇ ಸಾಗಿಸಿದ್ದರು. ಈ ಮೊದಲು ನಡೆಸಿದ್ದ ಚನ್ನಪಟ್ಟಣ ಮತ್ತು ಮದ್ದೂರು ತಾಲೂಕು ಆಡಳಿತಗಳ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲೇ ಅಧಿಕಾರಿಗಳು ಮನಸ್ಸು ಮಾಡಿದ್ದರೆ ಕೊಪ್ಪರಿಕೆಗಳನ್ನು ವಶಪಡಿಸಿಕೊಳ್ಳಬಹುದಿತ್ತು. ಹಾಗೆ ಮಾಡದೆ ದಂಧೆಕೋರರಿಗೆ ಪರೋಕ್ಷ ನೆರವು ಮಾಡಿಕೊಡಲಾಗಿದೆ.
ಮಾಹಿತಿ ಲಭ್ಯವಿಲ್ಲ: ಅಕ್ರಮ ಮರಳುಗಾರಿಕೆ ವಿರುದ್ಧದ ಕಾರ್ಯಾಚರಣೆ, ವಶಪಡಿಸಿಕೊಳ್ಳಲಾದ ವಾಹನ, ಸಾಮಗ್ರಿ ಮತ್ತು ಮರಳು ಸಂಬಂಧ ಟಾಸ್ಕ್ಫೋರ್ಸ್ ಮೂಲಕ ಪ್ರತಿನಿತ್ಯ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ಚನ್ನಪಟ್ಟಣದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಘೋಷಿಸಿದ್ದರು. ಅದಾದ ನಂತರದಲ್ಲಿ ನಡೆದ ಚೊಚ್ಚಲ ಕಾರ್ಯಾಚರಣೆಯ ಸ್ಪಷ್ಟ ಮಾಹಿತಿ ಮಾಧ್ಯಮಗಳಿಗೆ ಸಿಗಲಿಲ್ಲ.
ಈ ಕಾರ್ಯಾಚರಣೆ ಸಂಬಂಧ ಉನ್ನತ ಅಧಿಕಾರಿಗಳಿಗೂ ಮಾಹಿತಿ ಕೊರತೆ ಕಾಡಿದೆ. ಉಪ ವಿಭಾಗಾಧಿಕಾರಿ ಸಿದ್ದಪ್ಪ ಅವರು ವಿವರವನ್ನು ನಾಳೆ ನೀಡುತ್ತೇನೆಂದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ತಿಮ್ಮಪ್ಪ ಚನ್ನಪಟ್ಟಣ ತಹಸೀಲ್ದಾರ್ ಅವರನ್ನೇ ಕೇಳಿ ಎಂದರು. ಚನ್ನಪಟ್ಟಣ ತಹಸೀಲ್ದಾರ್ ಶಿವರುದ್ರಯ್ಯ ಮೊಬೈಲ್ ಕರೆ ಸ್ವೀಕರಿಸಲೇ ಇಲ್ಲ.
ಸಂಪೂರ್ಣ ನಿಯಂತ್ರಣ
ಇಗ್ಗಲೂರು ಜಲಾಶಯ ಬಳಿ ಶಿಂಷಾ ನದಿಯಲ್ಲಿ ಮರಳು ಅಡ್ಡೆಗಳ ಮೇಲೆ ಕಾವೇರಿ ನೀರಾವರಿ ನಿಗಮದ ಯಂತ್ರ ಚಾಲಿತ ಬೋಟ್ ಬಳಸಿಕೊಂಡು ದಾಳಿ ನಡೆಸಿ, ವಿವಿಧ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ. ನಿರಂತರ ಕಾರ್ಯಾಚರಣೆ ಮೂಲಕ ಚನ್ನಪಟ್ಟಣ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣ ನಿಯಂತ್ರಿಸಲಾಗುವುದು.
ಟಿ ತಿಮ್ಮಪ್ಪ, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಾಮನಗರ
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

