ಬೆಂಗಳೂರು ಗ್ರಾಮಾಂತರ

30 ವರ್ಷಗಳಿಂದ ದ್ವೇಷದ ರಾಜಕಾರಣ

Published On :

ಚನ್ನಪಟ್ಟಣ: ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತವರ ಕುಟುಂಬ ಕಳೆದ 30 ವರ್ಷಗಳಿಂದ ನಮ್ಮ ಮೇಲೆ ದ್ವೇಷದ ರಾಜಕಾರಣ ಮಾಡುತ್ತಲೇ ಬರುತ್ತಿದೆ. ವೈಯಕ್ತಿಕ ದ್ವೇಷದಿಂದ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಮಳೂರು ಹೋಬಳಿ ವ್ಯಾಪ್ತಿಯ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಗ್ರಾಮಸಂದರ್ಶನ ಕಾರ್ಯಕ್ರಮ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕನಕಪುರದಲ್ಲಿ ಎಲ್ಲರೂ  ನೆಮ್ಮದಿಯಿಂದ ಬದುಕುತ್ತಿದ್ದಾರೆ. ಅವರು ಹೇಳಿದಂತ ಯಾವುದೇ ತೊಂದರೆಯೂ ಇಲ್ಲಿ ಇಲ್ಲ ಎಂದರು.
ಕುಮಾರಸ್ವಾಮಿ ಅವರು ಹಿಂದಿನಿಂದ ನಡೆದುಕೊಂಡ ಬಂದ ದಾರಿಯನ್ನು ಈ ಹೇಳಿಕೆ ಪ್ರತಿಪಾದಿಸುತ್ತದೆ. ಪ್ರತಿಯೊಂದು ಹಂತದಲ್ಲೂ ನಮ್ಮ ಕುಟುಂಬದ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಾ ಬಂದಿರುವ ಕುಮಾರಸ್ವಾಮಿ, ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ತಿಳಿಸಿದರು.
ನರೇಗಾ ಸದ್ಬಳಕೆಯಾಗಲಿ: ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಾರಿಯಾಗಿರುವ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ಜಾರಿ ಯಾಗುವಂತೆ ಅಧಿಕಾರಿಗಳು ಶ್ರಮಿಸ ಬೇಕೆಂದು ಕರೆ ನೀಡಿದ ಸಂಸದ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ರೈತರಿಗೆ ಅನ್ಯಾಯ ವಾಗುತ್ತಿದ್ದು ಇನ್ನಾದರೂ ತಿದ್ದಿಕೊಳ್ಳದಿದ್ದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಕುಡಿಯುವ ನೀರು ಪೂರೈಕೆಗೆ ಕ್ರಮ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಗೊಂಡಿದೆ.
ಬೇಸಿಗೆಯಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದ್ದು ಇದನ್ನು ನಿವಾರಿಸಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದ ಸಂಸದರು ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸ ಬೇಕೆಂದು ತಿಳಿಸಿದರು.
12 ಶುದ್ಧ ಕುಡಿಯುವ ನೀರಿನ ಕೇಂದ್ರ: ಈ ತಾಲೂಕಿನ ಕುಡಿಯುವ ನೀರಿನ ಗುಣಮಟ್ಟ ಕಡಿಮೆ ಪ್ರಮಾಣದಲ್ಲಿದ್ದು ಇದರಿಂದ ಜನತೆ ಹಲವಾರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಈ ಸಂಗತಿಯನ್ನು ಮನಗಂಡಿರುವ ನಮ್ಮ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ 12 ಶುದ್ಧಕುಡಿಯುವ ನೀರಿನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು ಪ್ರಾರಂಭಿಕವಾಗಿ ಹರೂರು ಮತ್ತು ಹುಲುವಾಡಿಯಲ್ಲಿ  ತೆರೆಯಲಾಗಿದೆ. 1 ರು. ಗೆ 20 ಲೀಟರ್ ನೀರು ಪೂರೈಕೆ ಮಾಡುವುದಾಗಿ ಅವರು ತಿಳಿಸಿದರು.
ಈಹಿಂದೆ ಈ ಕ್ಷೇತ್ರದ ಶಾಸಕ ಯೋಗೇಶ್ವರ್ ಶುದ್ಧಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದ್ದರು. ಅವರ ಜತೆ ನಾವು ಕೈಜೋಡಿಸಿದ್ದು ತಾಲೂಕಿನ ಜನತೆಗೆ ಶುದ್ಧಕುಡಿಯುವ ನೀರು ದೊರೆಯುವಂತೆ ಮಾಡಿಕೊಡುವುದಾಗಿ ಭರವಸೆ ನೀಡಿದ ಅವರು ಪ್ರತಿ ಪಂಚಾಯಿತಿಯಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಕೇಂದ್ರ ಸ್ಥಾಪಿಸಲು ಎಲ್ಲರ ಸಹಕಾರದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಸಂಸದರು ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರೆ ಮತ್ತೆ ಕೆಲವಕ್ಕೆ ಪರಿಹಾರ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಮಹಿಳಾ ಕಾಂಗ್ರೆಸ್ ಮುಖಂಡರಾದ ಪದ್ಮಕೃಷ್ಣಯ್ಯ, ಕಾವೇರಮ್ಮ, ಮುಖಂಡರಾದ ಹುಲುವಾಡಿ ಶಿವಕುಮಾರ್, ಹರೂರು ರಾಜಣ್ಣ, ಪಿ.ಡಿ.ರಾಜು, ತಾ.ಪಂ ಮಾಜಿ ಸದಸ್ಯ ಪ್ರಮೋದ್, ಬೋರೇಗೌಡ, ಕಿಟ್ಟಿ, ಕೋಳಿ ಚಂದ್ರು, ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸತೀಶ್, ತಾಲೂಕು ಅಧ್ಯಕ್ಷ ಮಲ್ಲೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.