ಬೆಂಗಳೂರು ಗ್ರಾಮಾಂತರ

ನಗರಸಭೆ ಅಧ್ಯಕ್ಷ ಆರಿಫ್ ಖುರೇಷಿ ಅಕ್ರಮ ಖಾತೆಗಳ ಸರದಾರ

Published On :

ಮತ್ತೀಕೆರೆ ಜಯರಾಮ್
ರಾಮನಗರ: ನಗರದ ಪ್ರಥಮ ಪ್ರಜೆಯೇ ಅಕ್ರಮ ಖಾತೆಗಳ ಸ್ವತ್ತಿನ ಮಾಲೀಕರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಗರಸಭೆಯಲ್ಲಿ ಖಾತೆ ಅಕ್ರಮಗಳ ಕರ್ಮಕಾಂಡದ ಬಗ್ಗೆ ನಡೆಯುತ್ತಿರುವ ತನಿಖೆ, ಅದರ ಮೇಲೆ ಜಾರಿಯಾಗುವ ಕ್ರಮ ಕುರಿತು ಅನುಮಾನ ಮೂಡಿದೆ.
ನಗರಸಭೆ ಅಧ್ಯಕ್ಷ ಆರಿಫ್ ಖುರೇಷಿ ಅವರಿಗೆ ಸೇರಿದ ನಾನಾ ನಿವೇಶನಗಳಿಗೆ ಅಕ್ರಮ ಖಾತೆ ಮಾಡಿಸಿಕೊಂಡಿರುವ ಸ್ಫೋಟಕ ಮಾಹಿತಿಯನ್ನು ಮಹಬೂಬ್ ಖಾನ್ ಎಂಬುವರು ಮಾಹಿತಿ ಹಕ್ಕಿನಡಿ ಬಯಲಿಗೆಳೆದಿದ್ದಾರೆ. ಇದರೊಂದಿಗೆ ಅಧ್ಯಕ್ಷರ ಮುಖವಾಡ ಕಳಚಿ ಬಿದ್ದಿದೆ.
ಸ್ವತಃ ತಮ್ಮ ಸ್ವತ್ತುಗಳಿಗೇ ಅಕ್ರಮ ಖಾತೆ ಮಾಡಿಸಿಕೊಂಡಿರುವ ಅಧ್ಯಕ್ಷರನ್ನು ನಗರಾಧಿಪತಿಯಾಗಿ ನೇಮಕ ಮಾಡಿರುವುದು ಕುರಿ ಕಾಯಲು ತೋಳ ನೇಮಿಸಿದಂತಾಗಿದೆ. ಈ ಹಗರಣವು ಆರಿಫ್ ಖುರೇಷಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರತಿಷ್ಠಾಪಿಸಿದ ಕಾಂಗ್ರೆಸ್ ಮುಖಂಡರಿಗೂ ಮುಜುಗರ ತಂದಿದೆ.  
ಅಕ್ರಮಗಳು ಎಲ್ಲೆಲ್ಲಿ: ನಗರಸಭೆಯ ವಾರ್ಡ್ ನಂ. 22ಕ್ಕೆ ಸೇರಿದ ಖಾತಾ ಸಂಖ್ಯೆ 663:15ರಲ್ಲಿ 3 ನಿವೇಶನ, ವಾರ್ಡ್ ನಂ. 24ರಲ್ಲಿನ ಖಾತಾ ಸಂಖ್ಯೆ 630:1100:41:27:1ರಲ್ಲಿ 3 ಮತ್ತು 620:ಎ:636:41:18ರಲ್ಲಿ 120್ಗ80 ವಿಸ್ತೀರ್ಣದ ಒಂದು ಬೃಹತ್ ನಿವೇಶನಕ್ಕೆ ಅಕ್ರಮ ಖಾತೆ ಮಾಡಿಸಲಾಗಿದೆ.
ಇವಿಷ್ಟೂ ಸ್ವತ್ತುಗಳು ನಗರಸಭೆ ಅಧ್ಯಕ್ಷರಾಗಿರುವ ಆರಿಫ್ ಖುರೇಷಿ ಬಿನ್ ಗಾಫಾರ್ ಖುರೇಷಿ ಅವರಿಗೆ ಸೇರಿದ್ದಾಗಿವೆ. ಮಾಹಿತಿ ಹಕ್ಕಿನಡಿ ಕೇಳಲಾಗಿದ್ದ ಖಾತೆ ಸಂಖ್ಯೆ 634:1101:18:1ಕ್ಕೆ ಸಂಬಂಧಿಸಿದ ದಾಖಲೆ ಲಭ್ಯವಿಲ್ಲವೆಂದು ತಾನು ಒದಗಿಸಿರುವ ಮಾಹಿತಿಯಲ್ಲಿ ನಗರಸಭೆ ಸ್ಪಷ್ಟಪಡಿಸಿದೆ.
ಕಡಿಮೆ ತೆರಿಗೆ ಪಾವತಿ: ಆರಿಫ್ ಖುರೇಷಿ ಸತತ 3ನೇ ಬಾರಿ ನಗರಸಭೆ ಸದಸ್ಯರಾಗಿ ಆರಿಸಿ ಬಂದವರು. ತಾವು ಜನಪ್ರತಿನಿಧಿಯಾಗಿದ್ದುಕೊಂಡೇ ತಮ್ಮ ಸ್ವಂತ ಸ್ವತ್ತಿನ ಕಳ್ಳ ಖಾತೆಗಳನ್ನು ಮಾಡಿಸಿಕೊಂಡು, ಅವು ಖಾತೆ ಪುಸ್ತಕದಲ್ಲಿ ನಮೂದಾಗುವಂತೆ ನೋಡಿಕೊಂಡ ಆರೋಪಕ್ಕೆ ಗುರಿಯಾಗಿದ್ದಾರೆ.  
ಅಕ್ರಮ ಖಾತೆಗಳ ಸ್ವತ್ತಿಗೆ ಅವರು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತೆರಿಗೆಯನ್ನೂ ಪಾವತಿಸಿದ್ದಾರೆ. ಖಾತಾ ಸಂಖ್ಯೆ 630:1100:41:27:1ರಲ್ಲಿ 3 ನಿವೇಶನಗಳಿಗೆ ಅವರು ಕಡಿಮೆ ತೆರಿಗೆ ಪಾವತಿಸಿರುವುದೂ ದಾಖಲೆಗಳಲ್ಲಿ ನಮೂದಾಗಿದೆ.
ವ್ಯಾಪ್ತಿಯೇ ಸೇರಿಲ್ಲ: ಆರಿಫ್ ಖುರೇಷಿ ಅವರು ನಿವೇಶನಗಳೆಂದು ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಜಮೀನು ಅಸಲಿಗೆ ಕಂದಾಯ ಜಾಗವಾಗಿದೆ. ಕೈಲಾಂಚ ಹೋಬಳಿಗೆ ಸೇರಿದ ಶಿಡ್ಲಕಲ್ಲು ಗ್ರಾಮದ ಸರ್ವೆ ನಂ.19ರಲ್ಲಿ 20 ಗುಂಟೆ ಜಮೀನಿಗೆ ಈಗಲೂ ಪಹಣಿ ಬರುತ್ತಿದೆ.
ಅಸಲಿಗೆ ಸದರಿ ಜಮೀನು ಇನ್ನೂ ನಗರಸಭೆ ವ್ಯಾಪ್ತಿಗೆ ಸೇರಿಲ್ಲ. ಇಷ್ಟಾಗಿಯೂ ಪೂರ್ತಿ 19 ಗುಂಟೆ ಜಾಗವು ಖಾತಾ ಪುಸ್ತಕದಲ್ಲಿ ನಿವೇಶನಗಳಾಗಿ ಸೇರ್ಪಡೆಗೊಂಡಿದೆ. ಭೂ ಪರಿವರ್ತನೆ, ಅಭಿವೃದ್ಧಿ ಶುಲ್ಕ ಪಾವತಿ ಮತ್ತು ಅನುಮೋದಿತ ನಕ್ಷೆ ವಿವರ ನಗರಸಭೆಯಲ್ಲಿ ಲಭ್ಯವಿಲ್ಲ.



ಅಬ್ಬರಿಸಿದ್ದು ಇದಕ್ಕೇನಾ


ಪುರಪಿತೃಗಳ ನಿಯೋಗದ ಮನವಿ ಮೇರೆಗೆ ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ್, ಅಕ್ರಮ ಖಾತೆಗಳ ಕರ್ಮಕಾಂಡ ತನಿಖೆಗೆ ತಿಂಗಳ ಹಿಂದಷ್ಟೇ ಆದೇಶಿಸಿದ್ದರು. ತನಿಖೆ ಪ್ರಾರಂಭಿಸಿದ ಆಯುಕ್ತ ಯಶವಂತ್ ವಿರುದ್ಧ ಅಧ್ಯಕ್ಷ ಆರಿಫ್ ಖುರೇಷಿ ಕುದಿಯಲಾರಂಭಿಸಿದ್ದರು. ಆಯುಕ್ತ ಸಹಿ ಮಾಡದಿದ್ದ ಹಾಜರಿ ಪುಸ್ತಕವನ್ನು ಜಿಲ್ಲಾಧಿಕಾರಿ ಜಮಾದಾರ್ ಮುಂದೆ ಹಾಜರುಪಡಿಸಿ ವಿವಾದದಲ್ಲಿ ಸಿಲುಕಿಸಲೂ ಪ್ರಯತ್ನಿಸಿದ್ದರು. ಈ ಎಲ್ಲದರ ಹಿಂದಿನ ಮರ್ಮ ಏನೆಂಬುದಕ್ಕೆ ಇದೀಗ ಸಿಕ್ಕಿಬಿದ್ದಿರುವ ದಾಖಲೆಗಳೇ ಸಾಕ್ಷಿಗುಡ್ಡೆಗಳಾಗಿವೆ.


ತಿಮಿಂಗಿಲಗಳು ಇನ್ನೂ ಇವೆ


ರಾಮನಗರ ನಗರಸಭೆಯಲ್ಲಿ ಆಗಿರುವ ಅಕ್ರಮ ಖಾತೆಗಳು 1500ರ ಗಡಿ ದಾಟುತ್ತಿವೆ. ಕರ್ಮಕಾಂಡದಲ್ಲಿ ಅಧ್ಯಕ್ಷ ಆರಿಫ್ ಖುರೇಷಿ ಒಬ್ಬರೇ ಅಲ್ಲದೆ ಹಾಲಿ ಮತ್ತು ಮಾಜಿ ಪುರಪಿತೃಗಳು ಭಾಗಿಯಾಗಿರುವ ಮಹತ್ವದ ಸುಳಿವು ದೊರೆತಿದ್ದು, ಇನ್ನಷ್ಟು ತಿಮಿಂಗಿಲಗಳ ಬಣ್ಣವೂ ಬಯಲಾಗಲಿದೆ. ಹೇಳಿ ಕೇಳಿ ರಾಮನಗರದಲ್ಲಿ ರಿಯಲ್ ಎಸ್ಟೇಟ್ ಅಬ್ಬರ ಜೋರಾಗಿದೆ. ಇಂತಹ ಕಡೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವತ್ತುಗಳನ್ನೂ ಕಬಳಿಸಿರುವ ಪ್ರಕರಣಗಳು ಸಾಕಷ್ಟಿವೆ. ಅಕ್ರಮ ಖಾತೆಗಳ ಜತೆಗೆ ಸರ್ಕಾರಿ ಸ್ವತ್ತು ಲಪಟಾಯಿಸಿದ ಪ್ರಕರಣದ ಬಗ್ಗೆಯೂ ತನಿಖೆ ಅಗತ್ಯವಿದೆ.


ಹಳ್ಳ ಹಿಡಿಸಲು ಷಡ್ಯಂತ್ರ


ಅಕ್ರಮ ಖಾತೆ, ಗೋಮಾಳ ಸೇರಿದಂತೆ ಸರ್ಕಾರಿ ಸ್ವತ್ತಿನ ಲೂಟಿಯ ಪ್ರಕರಣವು ಪ್ರಭಾವಿಗಳಿಗೇ ಉರುಳಾಗುವ ಭೀತಿ ಎದುರಾಗಿದೆ. ಹೀಗಾಗಿ ಆಯುಕ್ತರ ಎತ್ತಂಗಡಿ ಸಹಿತ ಯಾವುದೇ ಮಾರ್ಗದಲ್ಲಾದರೂ ಸರಿಯೇ ತನಿಖೆಯನ್ನು ಹಳ್ಳ ಹಿಡಿಸಬೇಕೆನ್ನುವ ಷಡ್ಯಂತ್ರ ನಡೆದಿದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ತನಿಖಾ ವರದಿ ಜಿಲ್ಲಾಧಿಕಾರಿ ಜಮಾದಾರ್ ಕೈ ತಲುಪುವುದೇ ಅನುಮಾನ ಎನಿಸಿದೆ. ಒಂದೊಮ್ಮೆ ಅವರ ಕೈ ಸೇರಿದರೂ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಎನ್ನುವ ಕೊಂಕು ನುಡಿಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.